AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ವಿಶ್ವನಾಥ್ ಕೊಲೆಸಂಚು ಆರೋಪ: ಸಿಬಿಐ ತನಿಖೆಗೆ ಗೋಪಾಲಕೃಷ್ಣ ಒತ್ತಾಯ

ರಾಜಾನುಕುಂಟೆಯಲ್ಲಿ ಶಾಸಕ ವಿಶ್ವನಾಥ್ ಅವರಿಗಿಂತ ನಾಗಶೆಟ್ಟಿಹಳ್ಳಿ ಸತೀಶ್ ಅವರೇ ಪ್ರಭಾವಶಾಲಿ. ಎಲ್ಲವೂ ಅವರು ಹೇಳಿದಂತೆಯೇ ನಡೆಯುತ್ತದೆ ಎಂದು ಆರೋಪ ಮಾಡಿದರು.

ಶಾಸಕ ವಿಶ್ವನಾಥ್ ಕೊಲೆಸಂಚು ಆರೋಪ: ಸಿಬಿಐ ತನಿಖೆಗೆ ಗೋಪಾಲಕೃಷ್ಣ ಒತ್ತಾಯ
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಗೋಪಾಲಕೃಷ್ಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 03, 2021 | 7:22 PM

Share

ಬೆಂಗಳೂರು: ಶಾಸಕ ಎಸ್​.ಆರ್​.ವಿಶ್ವನಾಥ್ ಹತ್ಯೆ ಸಂಚು ಪ್ರಕರಣದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು. ರಾಜಾನುಕುಂಟೆಯಲ್ಲಿ ಶಾಸಕ ವಿಶ್ವನಾಥ್ ಅವರಿಗಿಂತ ನಾಗಶೆಟ್ಟಿಹಳ್ಳಿ ಸತೀಶ್ ಅವರೇ ಪ್ರಭಾವಶಾಲಿ. ಎಲ್ಲವೂ ಅವರು ಹೇಳಿದಂತೆಯೇ ನಡೆಯುತ್ತದೆ. ನನ್ನ ಮೇಲೆ ಕೇಳಿಬಂದಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆ. ವಿಶ್ವನಾಥ್, ದೇವರಾಜ್, ಸತೀಶ್ ಮೂರೂ ಜನ ಸೇರಿ ನನ್ನನ್ನು ಟ್ರ್ಯಾಪ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ವಿಶ್ವನಾಥ್ ಅವರು ಬಿಡಿಎ ಅಧ್ಯಕ್ಷರಾದ ಮೇಲೆ ಅವರ ಜನರಿಂದ ವಿರೋಧ ಕೇಳಿ ಬರುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ನಾನೊಬ್ಬ ಅಮಾಯಕ. ವಿಶ್ವನಾಥ್ ಅಂದು ಸೋತಿದ್ದಾಗ ಯಾವ ಸ್ಥಾನಕ್ಕೆ ಹೋಗಿದ್ದರು? ಇದೆಲ್ಲದರ ಹಿಂದೆ ನಾಗಶೆಟ್ಟಿಹಳ್ಳಿ ಸತೀಶ್ ಇದ್ದಾರೆ. ಯಲಹಂಕ ಕ್ಷೇತ್ರದಲ್ಲಿ ಶಾಸಕರ ಮಾತು ಏನೂ ನಡೆಯುತ್ತಿಲ್ಲ. ಎಲ್ಲವೂ ಕೂಡಾ ಸತೀಶ್ ಹೇಳಿದಂತೆ ನಡೆಯುತ್ತಿದೆ. ನನ್ನ ಮನೆ ದೇವರು ವೆಂಕಟೇಶ್ವರ. ವಿಶ್ವನಾಥ್ ತಿರುಪತಿ ದೇವಸ್ಥಾನದ ಸದಸ್ಯರಾಗಿದ್ದಾರೆ. ಅಲ್ಲಿ ಬಂದು ಪ್ರಮಾಣ ಮಾಡಲಿ, ನಾನು ಕೂಡಾ ಬಂದು ಪ್ರಮಾಣ ಮಾಡುತ್ತೇನೆ. ನಾನು ತಪ್ಪು ಮಾಡಿದ್ದರೆ ದೇವರು ಶಿಕ್ಷೆ ಕೊಡಲಿ. ಮೂರೂ ಜನ ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಈಗ ಬಹಿರಂಗಗೊಂಡಿರುವುದು ನೂರಕ್ಕೆ ಎಂಬತ್ತು ಭಾಗ ಎಡಿಟ್ ಆಗಿರುವ ವಿಡಿಯೊ. ನಮ್ಮದು ಕೊಲೆಗಡುಕ ಸಂಸ್ಕೃತಿ ಅಲ್ಲ. ಈ ಹಿಂದೆ ನನ್ನೊಂದಿಗೆ ಇದ್ದ ಕುಳ್ಳ ನಾಗರಾಜ್ ಈಗ ವಿಶ್ವನಾಥ್ ಜೊತೆ ಇದ್ದಾನೆ. ನನಗೆ ನ್ಯಾಯಾಲಯ ಜಾಮೀನು ಕೊಟ್ಟಿದೆ. ಪೊಲೀಸರ ತನಿಖೆಗೆ ನಾನು ಎಲ್ಲ ಸಹಕಾರ ಕೊಡುತ್ತೇನೆ. ವಿಡಿಯೊ ನೋಡಿದರೆ ಏಳೆಂಟು ತಿಂಗಳ ಹಿಂದಿನದ್ದು ಅನ್ನಿಸುತ್ತದೆ. ನನಗೆ ಯಾವ ಸುಪಾರಿ‌ ಕಿಲ್ಲರ್ ಸಹ ಗೊತ್ತಿಲ್ಲ. ಸತೀಶ್ ಮತ್ತು ದೇವರಾಜ್ ಅವರ ಕಾಲ್​ಲಿಸ್ಟ್ ತೆಗೆಸಿದರೆ ಎಲ್ಲವೂ ಗೊತ್ತಾಗುತ್ತದೆ. ವಿಡಿಯೊದಲ್ಲಿ ಇರುವ ರೀತಿ ನಾನು ಮಾತಾಡಿಲ್ಲ. ಕೆಲವೇ ದಿನಗಳಲ್ಲಿ ನಾನು ಮತ್ತೊಮ್ಮೆ ಮಾತಾಡುತ್ತೇನೆ. ಎಲ್ಲವನ್ನೂ ವಿವರಿಸುತ್ತೇನೆ ಎಂದರು.

ಬೆಂಗಳೂರಿನ ಗಾಂಧಿನಗರ ಹೋಟೆಲ್​ಗೆ ನನ್ನನ್ನು ಕುಳ್ಳ ದೇವರಾಜ್ ಕರೆಸಿಕೊಂಡಿದ್ದ. ಸೆಂದಿಲ್​ ಜತೆ ಸೇರಿ ನನ್ನನ್ನು ಸಿಸಿಬಿ ಎಸಿಪಿ ಕರೆಯುತ್ತಿದ್ದಾರೆ ಎಂದು ಕರೆದೊಯ್ದಿದ್ದ. ರಾತ್ರಿ 10 ಗಂಟೆಯವರೆಗೆ ಪೊಲೀಸರು ನನ್ನ ವಿಚಾರಣೆ ನಡೆಸಿದ್ದರು. ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ನಾನು ಉತ್ತರ ನೀಡಿ ಬಂದೆ. ನಂತರ ಶಾಸಕ ಎಸ್.ಆರ್.ವಿಶ್ವನಾಥ್​ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಮ್ಮ ಕ್ಷೇತ್ರದಲ್ಲಿ ಸತೀಶ್​ ಎಂಬುವರು ಹೇಳಿದಂತೆ ಪೊಲೀಸ್ ಅಧಿಕಾರಿ ವರ್ಗಾವಣೆ ಸೇರಿದಂತೆ ಎಲ್ಲವೂ ನಡೆಯುತ್ತೆ. ಯಲಹಂಕ ಕ್ಷೇತ್ರದ ಉಸ್ತುವಾರಿ ಸತೀಶ್​ ನೋಡಿಕೊಳ್ತಿದ್ದಾನೆ ಎಂದು ಆರೋಪ ಮಾಡಿದರು.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಸತ್ಯಾಂಶ ಬಯಲಿಗೆ ಬರುತ್ತೆ. ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ನಾನು ರೌಡಿಶೀಟರ್​ ಸಹ ಅಲ್ಲ. ನಾನು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕ್ಷೇತ್ರದಲ್ಲಿ ನನಗಿರುವ ಒಳ್ಳೆಯ ಹೆಸರು ಕೆಡಿಸಲು ಈ ಪ್ರಯತ್ನ ಮಾಡಲಾಗಿದೆ. ಆರೋಪಗಳನ್ನು ನಾನು ನಾನು ಧೈರ್ಯವಾಗಿ ಎದುರಿಸಿದ್ದೇನೆಂದು ಬಿಜೆಪಿ ನಾಯಕರೇ ಕರೆ ಮಾಡಿ ಹೇಳಿದ್ದಾರೆ. ಮೂರ್ನಾಲ್ಕು ದಿನಗಳಿಂದ ನಮ್ಮ ಮನೆಯಲ್ಲಿ ಯಾರೂ ಊಟ ಮಾಡಿಲ್ಲ. ದುಡ್ಡು ಕೊಟ್ಟಿರೋದು ಈ ವಿಚಾರಕ್ಕೆ ಅಲ್ಲ, ಅದು ಎಂಟು ಎಕರೆ ಲ್ಯಾಂಡ್ ಸೆಟಲ್​ಮೆಂಟ್​ನದ್ದು. ವಿಶ್ವನಾಥ್ ಮತ್ತು ನನಗೆ ಯಾವುದೇ ಸಂಬಂಧ, ವ್ಯವಹಾರ ಇಲ್ಲ. ಅವರದ್ದೇ ಸರ್ಕಾರ ಇದ್ದರೂ ನಿನ್ನೆ ಎಲ್ಲಾ ಕಡೆ ಪ್ರತಿಭಟನೆ ಮಾಡಿಸಿದರು ಎಂದರು.

ಕಡಬಗರೆ ಶ್ರೀನಿವಾಸ್ ಪ್ರಕರಣದಲ್ಲಿ ಶಾಸಕರ ಪಾತ್ರ ಇತ್ತು ಎಂದು ಶ್ರೀನಿವಾಸ್ ಅವರೇ ಹೇಳಿದ್ದಾರೆ. ಕಡಬಗೆರೆ ಶ್ರೀನಿವಾಸ ಪ್ರಕರಣವನ್ನೂ ಸಿಬಿಐಗೆ ವಹಿಸಲಿ. ಅಂದು ಶಾಸಕರು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಬಳಿ ರಕ್ಷಣೆ ಕೇಳಿದ್ರಾ ಅನ್ನೋದು ನನಗೆ ಗೊತ್ತಿಲ್ಲ. ದೇವರಾಜ್ ಪೋರ್ಜರಿ ಮಾಡಿಸುತ್ತಾನೆ. ನೂರಾರು ಪ್ರಕರಣಗಳು ಅವನ ಮೇಲಿವೆ. ಯಲಹಂಕದಲ್ಲಿ ಹಲವು ಕುಖ್ಯಾತರಿದ್ದಾರೆ. ನಾನು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ, ಎಲ್ಲ ದಾಖಲೆಗಳನ್ನು ಮುಂದಿಡುತ್ತೇನೆ. ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಹಿಂದೆ ಕೆಲವರನ್ನು ಬಂಧಿಸಿದ್ದರು. ಆದರೆ ನಿಜವಾದ ಅಪರಾಧಿಗಳನ್ನು ಹಿಡಿಯಲಿಲ್ಲ ಎಂದು ಆರೋಪಿಸಿದರು.

ನ್ಯಾಯಾಧೀಶರ ಮುಂದೆ ಶರಣಾದ ಗೋಪಾಲಕೃಷ್ಣ ಶಾಸಕ ಎಸ್​.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಗೋಪಾಲಕೃಷ್ಣ 2ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರ ಎದುರು ಶರಣಾದರು. ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದರು.

ಇದನ್ನೂ ಓದಿ: ಬಿಜೆಪಿ ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಗೋಪಾಲಕೃಷ್ಣ, ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲು ಇದನ್ನೂ ಓದಿ: ಬಿಜೆಪಿ ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಗೋಪಾಲಕೃಷ್ಣ, ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲು