ಹಣ ಇದ್ದವರ ಮನೆಗೆ ಕರೆದು ಚಕ್ಕಂದ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್: ಪೊಲೀಸ್ ಹಿಂದೆ ಬಿದ್ದಿದ್ದ ಮಹಿಳೆ ಅಂತಿಂಥವಳಲ್ಲಾ ಗೊತ್ತಾ!
ರಾಮಮೂರ್ತಿ ನಗರ ಇನ್ಸ್‌ಪೆಕ್ಟರ್ ಸತೀಶ್ ಬಳಿ ಪ್ರೀತಿಸುವಂತೆ ದುಂಬಾಲು ಬಿದ್ದು, ಬ್ಲ್ಯಾಕ್‌ಮೇಲ್ ಮಾಡಿ ಬಂಧಿತಳಾದ ವನಜಾ ಅಲಿಯಾಸ್ ಸಂಜನಾ ಕುರಿತು ಹಲವು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಶ್ರೀಮಂತರನ್ನು ಗುರಿಯಾಗಿಸಿ ಸ್ನೇಹ ಬೆಳೆಸಿ, ಲೈಂಗಿಕ ಸಂಪರ್ಕ ಸಾಧಿಸಿ, ಫೋಟೋ-ವಿಡಿಯೋ ಮೂಲಕ ಹಣ, ಚಿನ್ನಾಭರಣ ವಸೂಲಿ ಮಾಡುತ್ತಿದ್ದಳು ಎಂಬುದು ಈಗ ಬೆಳಕಿಗೆ ಬಂದಿದೆ.

ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನ (Bengaluru) ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಬಳಿ ಪ್ರೀತಿಸುವಂತೆ ಪೀಡಿಸಿ, ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ಪ್ರಕರಣದ ಆರೋಪಿ ವನಜಾ ಅಲಿಯಾಸ್ ಸಂಜನಾ ಕುರಿತು ಆತಂಕಕಾರಿ ಮಾಹಿತಿ ಒಂದೊಂದಾಗಿ ಹೊರಬರುತ್ತಿದೆ. ಇನ್ಸ್ಪೆಕ್ಟರ್ ಸತೀಶ್ ದಾಖಲಿಸಿದ್ದ ಎಫ್ಐಆರ್ ಆಧಾರದಲ್ಲಿ ಸಂಜನಾಳನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ, ಆಕೆಯ ವಿರುದ್ಧದ ಹಲವು ಆರೋಪಗಳು ಬೆಳಕಿಗೆ ಬಂದಿವೆ.
ಹಣ ಇರುವವರ ಜತೆ ಸ್ನೇಹ, ಮನೆಗೆ ಊಟಕ್ಕೆ ಆಹ್ವಾನಿಸಿ ಚಕ್ಕಂದ!
ಸಂಜನಾ ಹಣವಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸ್ನೇಹ ಬೆಳೆಸಿ, ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದಳು. ಅವರ ಲೈಂಗಿಕ ಸಂಪರ್ಕವನ್ನೂ ಹೊಂದುತ್ತಿದ್ದಳು. ಬಳಿಕ ಅವರ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ, ಚಿನ್ನಾಭರಣ ಕಸಿದುಕೊಳ್ಳುತ್ತಿದ್ದಳು ಎಂಬ ಆರೋಪವಿದೆ.
ಇದೇ ರೀತಿಯಲ್ಲಿ ಸತೀಶ್ ರೆಡ್ಡಿ ಎಂಬ ಗುತ್ತಿಗೆದಾರನನ್ನು ಹನಿಟ್ರ್ಯಾಪ್‌ಗೆ ಬೀಳಿಸಿ, ಮೊದಲ ಹಂತದಲ್ಲಿ ಮೂರು ಲಕ್ಷ ರೂಪಾಯಿ, ಚಿನ್ನದ ಸರ, ಬ್ರೇಸ್ಲೆಟ್ ಹಾಗೂ ಉಂಗುರ ಪಡೆದುಕೊಂಡಿದ್ದಳು. ಈ ಸಂಬಂಧ 2022ರಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಷ್ಟೇ ಅಲ್ಲದೆ, ಗುತ್ತಿಗೆದಾರ ಸತೀಶ್ ರೆಡ್ಡಿ ಅವರ ಎರಡು ಅಂತಸ್ತಿನ ಕಟ್ಟಡವನ್ನು ಲಪಟಾಯಿಸಲು ಯತ್ನಿಸಿದ್ದ ಆರೋಪದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿಯೂ ಮತ್ತೊಂದು ಪ್ರಕರಣ ದಾಖಲಾಗಿದೆ. ಇದೇ ರೀತಿಯಲ್ಲಿ ಹಲವರನ್ನು ಹನಿಟ್ರ್ಯಾಪ್‌ಗೆ ಸೆಳೆಯಲು ಯತ್ನಿಸಿದ್ದಾಳೆ ಎಂಬ ಆರೋಪ ಸಂಜನಾ ಮೇಲಿದೆ.
ಪೊಲೀಸ್ ಅಧಿಕಾರಿಗಳನ್ನೂ ಬಿಡದ ಚಾಲಾಕಿ
ಪೊಲೀಸ್ ಅಧಿಕಾರಿಗಳನ್ನೂ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಗಳು ಸಂಜನಾ ವಿರುದ್ಧ ಇವೆ. 2018ರಲ್ಲಿ ದಾವಣಗೆರೆ ಮೂಲದ ಹೆಡ್ ಕಾನ್ಸ್‌ಟೇಬಲ್ ಜಗದೀಶ್ ವಿರುದ್ಧ ಮದುವೆ ನೆಪದಲ್ಲಿ ವಂಚನೆ ಮಾಡಿದ್ದಾರೆ ಎಂದು ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ತನಿಖೆಯಲ್ಲಿ ಅದು ಸುಳ್ಳು ದೂರು ಎಂದು ಸಾಬೀತಾಗಿ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರು.
ಇತ್ತೀಚೆಗೆ ರಾಮಮೂರ್ತಿ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಅವರನ್ನು ಪ್ರೀತಿಯ ಹೆಸರಲ್ಲಿ ಗಾಳ ಹಾಕಿ, ನಿರಂತರ ಕಾಟ ನೀಡಿದ ಪ್ರಕರಣದಲ್ಲಿ ಸಂಜನಾ ಬಂಧನಕ್ಕೊಳಗಾಗಿದ್ದಾಳೆ. ನಾನು ಪೊಲೀಸ್ ಅಧಿಕಾರಿ ಪತ್ನಿ ಎಂದು ಹೇಳಿಕೊಂಡು ಹಲವರನ್ನು ಬೆದರಿಸಿದ್ದಾಳೆ ಎಂಬ ಆರೋಪವೂ ದಾಖಲಾಗಿದೆ.
ಇದನ್ನೂ ಓದಿ: Love U ಚಿನ್ನಿ: ಲವ್ ಮಾಡುವಂತೆ ಇನ್ಸ್ಪೆಕ್ಟರ್ ಹಿಂದೆ ಬಿದ್ದ ಕಾಂಗ್ರೆಸ್ ಕಾರ್ಯಕರ್ತೆ, ಆಮೇಲೇನಾಯ್ತು?
ಸದ್ಯ ಪೊಲೀಸರು ಸಂಜನಾ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ತನಿಖೆ ನಡೆಸುತ್ತಿದ್ದು, ಆಕೆಯಿಂದ ವಂಚನೆಗೆ ಒಳಗಾದ ಇತರ ಸಂತ್ರಸ್ತರು ಇದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.
ವಂಚನೆಗೆ ಸಿಎಂ, ಡಿಸಿಎಂ ಹೆಸರನ್ನೂ ಬಳಸಿದ್ದ ಆರೋಪಿ
ಆರೋಪಿ ಸಂಜನಾ ಕಾಂಗ್ರೆಸ್ ಕಾರ್ಯಕರ್ತೆ ಎನ್ನಲಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡು ಇನ್ಸ್ಪೆಕ್ಟರ್ ಅನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ವಿಚಾರ ಬುಧವಾರ ಬಯಲಾಗಿತ್ತು. ಅಷ್ಟೇ ಅಲ್ಲದೆ, ಮೋಟಮ್ಮ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನೂ ಕಳುಹಿಸಿದ್ದಳು ಎಂಬುದೂ ಬಯಲಾಗಿತ್ತು.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Thu, 18 December 25




