ಪ್ರಬಲರು ಎಸ್ಸಿ, ಎಸ್ಟಿ ಮೀಸಲಾತಿ ಕೇಳುವುದು ಹೊಸ ರೂಪಾಂತರಿ ಅಟ್ರಾಸಿಟಿ ಪ್ರಕರಣ ಎಂದ ಶಾಸಕ ಎಂ.ಪಿ. ಕುಮಾರಸ್ವಾಮಿ
ಬೇಡ ಜಂಗಮ ವೀರಶೈವ, ಲಿಂಗಾಯತರು ಪರಿಶಿಷ್ಟರಲ್ಲ ಎಂದು ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರು: ಬೇಡ ಜಂಗಮ ವೀರಶೈವ, ಲಿಂಗಾಯತರು ಪರಿಶಿಷ್ಟರಲ್ಲ ಎಂದು ವಿಧಾನ ಮಂಡಲ SC, ST ಕಲ್ಯಾಣ ಸಮಿತಿ ಅಧ್ಯಕ್ಷ, ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪ್ರಬಲರು ಎಸ್ಸಿ, ಎಸ್ಟಿ ಮೀಸಲಾತಿ ಕೇಳುವುದು ಹೊಸ ರೂಪಾಂತರಿ ಅಟ್ರಾಸಿಟಿ ಪ್ರಕರಣವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಗುರು ಸ್ಥಾನದಲ್ಲಿರುವ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅವರಿಗೆ ಎಸ್ಸಿ ಸರ್ಟಿಫಿಕೇಟ್ನ್ನು ರಾಜ್ಯ ಸರ್ಕಾರ ನೀಡಬಾರದು. ಎಸ್ಸಿ, ಎಸ್ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಸಾಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲ್ವರ್ಗಗಳು ನಮ್ಮನ್ನು ಎಸ್ಸಿ, ಎಸ್ಟಿಗೆ ಸೇರಿಸಿ ಎಂದು ಒತ್ತಡ ಹಾಕುವುದು ಪ್ರಬಲರು ದುರ್ಬಲರ ಮೇಲೆ ನಡೆಸುವ ದೌರ್ಜನ್ಯವಾಗಿದೆ ಎಂದರು.
ಸಮುದಾಯದಲ್ಲಿ ಮೇಲಿನ ಗುರು ಸ್ಥಾನದಲ್ಲಿರುವ ಜಂಗಮರು ಎನ್ನುವ ಉಪ ಜಾತಿಯ ಕೆಲವು ವ್ಯಕ್ತಿಗಳು ಎಸ್ಸಿ ಬೇಡ ಜಂಗಮ ಎಂಬ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಆ ಜನರ ಅನ್ನ ಕಸಿದುಕೊಳ್ಳುತ್ತಿರುವುದು ಮಹಾಪಾಪ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಗುರುಗಳ ಸ್ಥಾದಲ್ಲಿರುವ ಜಂಗಮರು ಎಸ್ಸಿಗಳಾಗಲು ಸಾಧ್ಯವೇ? ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ 101 ಜಾತಿಗಳ 19ನೇ ಕ್ರಮ ಸಂಖ್ಯೆಯಲ್ಲಿ ಬೇಡ ಜಂಗಮ ಅಥವಾ ಬುಡ್ಗ ಜಂಗಮ ಅಥವಾ ಮೂಲ ಜಂಗಮ್ ಎಂಬ ಹೆಸರಿನ ಜಾತಿಯಿದೆ ಎಂದು ತಿಳಿಸಿದ್ದಾರೆ.
ಈ ಜಾತಿಯನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸುವ ಮುನ್ನ ಕುಲಶಾಸ್ತ್ರ, ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗಿದೆ. ಬೇಡ ಜಂಗಮರು ಆಂಧ್ರ ಪ್ರದೇಶ ಮೂಲದವರು. ಇವರ ಮಾತೃ ಭಾಷೆ ತೆಲುಗು ಆಗಿದ್ದು. ಮಾಂಸಹಾರಿಗಳು, ಹೊಟ್ಟೆ ಪಾಡಿಗಾಗಿ ವೇಷದಾರಿಗಳಾಗಿ ಊರೂರು ಸುತ್ತಿ ಬಿಕ್ಷೆ ಬೇಡುವುದು ಇವರ ಕಾಯಕವಾಗಿದೆ.
ಇವರಲ್ಲಿ ವಿದ್ಯಾವಂತರ ಸಂಖ್ಯೆ ಶೇ. 1 ರಷ್ಟು ಆಗಿದೆ. ಈ ಜನಾಂಗದ ಗುಣ ಲಕ್ಷಣಗಳಲ್ಲಿ ಶೇ ಒಂದು ಭಾಗವೂ ಹೊಂದಿರದ ವೀರಶೈವ ಲಿಂಗಾಯತ ಜನಾಂಗದವರು ಜಂಗಮ್ ಎಂಬ ಪದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.