ಬೆಂಗಳೂರು: ಕೆಂಪೇಗೌಡರು ನಮ್ಮ ಹಿರಿಯ ಸ್ವಾತಂತ್ರ್ಯ ಯೋಧರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಏರ್ ಪೋರ್ಟ್ಗೆ ಕೆಂಪೇಗೌಡರ (KempeGowda) ಹೆಸರಿಡಲು ಅನುಮೋದನೆ ನೀಡಿದರು. ಕೆಂಪೇಗೌಡರು ಯಾರ ಒಬ್ಬರ ಸ್ವತ್ತಲ್ಲ, ಇಡೀ ಜನಾಂಗದ ಸ್ವತ್ತು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿಕೆ ನೀಡಿದರು. ಇಂದು (ಜೂನ್ 27) ನಾಡಪ್ರಭು ಕೆಂಪೇಗೌಡರ 513ನೇ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಸಿಎಂ ಆಗಿದ್ದಾಗ ಹೈದರಾಬಾದ್ಗೂ ನಮಗೂ ಭಾರತದ ಸಿಲಿಕಾನ್ ಹಬ್ ಯಾವುದು ಆಗಬಹುದು ಎಂದು ಪೈಪೋಟಿ ನಡೆಯುತ್ತಿತ್ತು. ಅಂತಿಮವಾಗಿ ಬೆಂಗಳೂರು ಭಾರತದ ಸಿಲಿಕಾನ್ ಹಬ್ ಆಗಿ ಹೆಸರು ಪಡೆಯಿತು. ಇನ್ಫೋಸಿಸ್ನ ನಾರಾಯಣ ಮೂರ್ತಿ ಮತ್ತು ವಿಪ್ರೋದ ಅಜೀಂ ಪ್ರೇಮ್ ಜೀ ಮಾರ್ಗದರ್ಶನ ಇಲ್ಲದೇ ಇರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮೈಸೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಮೊದಲಾದ ನಗರಗಳು ಬೆಳೆಯಬೇಕಾಗಿದೆ. ಬೆಳೆಯಬೇಕಾದರೆ ರಾಜ್ಯ ಸರ್ಕಾರದ ದೃಢ ಮನಸ್ಸು ಅಗತ್ಯ. ಆ ದೃಢ ಮನಸ್ಸನ್ನು ನಾನು ಸಿಎಂ ಬೊಮ್ಮಾಯಿ ಅವರಲ್ಲಿ ಕಂಡೆ ಎಂದು ಹೇಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಮೊತ್ತವಾಗಿ ನೀಡಲ್ಪಟ್ಟ 5 ಲಕ್ಷ ರೂ. ಚೆಕ್ನ್ನು ಮೈಸೂರು ರಾಮಕೃಷ್ಣ ಆಶ್ರಮಕ್ಕೆ ಕಳುಹಿಸಿಕೊಡುತ್ತೇನೆ ಎಂದು ಎಸ್.ಎಂ. ಕೃಷ್ಣ ಘೋಷಣೆ ಮಾಡಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ನೀಡಿದ್ದು, ಕೊಲಂಬಸ್ ಅಮೆರಿಕಾದಲ್ಲಿ ಮೂಲ ನಿವಾಸಿಗಳನ್ನು ಹತ್ಯೆ ಮಾಡಿ ನಗರ ಕಟ್ಟಿದರು. ಕೆಂಪೇಗೌಡರು ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿಕೊಂಡು ಬೆಂಗಳೂರು ಕಟ್ಟಿದರು. ಸಿಎಂ ಆಗಿರುವ ಬೊಮ್ಮಾಯಿ ಮುಂದೆ ಸಾಕಷ್ಟು ಸವಾಲುಗಳಿವೆ. ಎಲ್ಲಾ ಕೆಲಸಗಳನ್ನು ಮೆಷಿನ್ಗಳು ಮಾಡಲು ಆರಂಭಿಸಿದರೆ ವಿದ್ಯೆ ಕಲಿತ ಮಕ್ಕಳ ಪಾಡೇನು ಅನ್ನೋದು ಸಿಎಂ ಮುಂದಿರುವ ಸವಾಲು. ಬೆಂಗಳೂರಿನ ಸುತ್ತ ಮುತ್ತಲಿನ ಜಮೀನುಗಳು ಬೆಂಗಳೂರಿನ ವಿಸ್ತಾರಕ್ಕೆ ಬಲಿಯಾದರೆ ಆ ಜನರು ಏನು ಮಾಡಬೇಕು.
ಇಂದು ಬೆಂಗಳೂರಿನಲ್ಲಿ ಇರುವ ಸ್ಲಂಗಳಲ್ಲಿನ ಬಹಳಷ್ಟು ಜನರು ಭೂಮಿ ಕಳೆದುಕೊಂಡ ಬೆಂಗಳೂರಿನ ಜನರೇ. ದಿನಾಚರಣೆಗಳ ವೇಳೆ ಆಯಾ ಸಮುದಾಯದ ನಾಯಕರು, ಸ್ವಾಮೀಜಿಗಳನ್ನು ಮಾತ್ರ ಕರೆಯುತ್ತೀರಿ. ಹಾಗೆ ಮಾಡದೇ ಇತರ ಸಮುದಾಯದ ಮುಖಂಡರು, ಸ್ವಾಮೀಜಿಗಳನ್ನು ಕೂಡಾ ಕರೆದರೆ ಸಮಾಜದಲ್ಲಿ ಸೌಹಾರ್ದತೆ ಇರುತ್ತದೆ. ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಇರಬೇಕು ಅಂತಾ ಬಹಳ ಜನರ ಅಪೇಕ್ಷೆ ಇದೆ. ಪಠ್ಯದಲ್ಲಿ ಕೆಂಪೇಗೌಡರ ವಿಷಯ ಸೇರಿಸಿದ್ದಕ್ಕೆ ಸಂತೋಷ ಇದೆ ಎಂದು ಹೇಳಿದರು.
ಅಧಿಕಾರ ಬಂದಾಗ ಹಲವಾರು ಸವಾಲುಗಳು ಎದುರಾಗುತ್ತೆ: ಸಿಎಂ ಬಸವರಾಜ ಬೊಮ್ಮಾಯಿ
ಕೆಂಪೇಗೌಡ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಕೆಂಪೇಗೌಡರು ಕೇವಲ ಬೆಂಗಳೂರು ನಗರ ಮಾತ್ರ ಕಟ್ಟಿಲ್ಲ. ಹಲವು ಸಮುದಾಯಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಧಾನಸೌಧದ ಮುಂದೆ ಕೆಂಪೇಗೌಡ ಪ್ರತಿಮೆ ಸ್ಥಾಪನೆಯಾಗಲಿದೆ. ಬಿಬಿಎಂಪಿಯಲ್ಲಿ ಪ್ರತಿಮೆಗೆ 2001ರಲ್ಲೇ ನಿರ್ಣಯ ಪಾಸ್ ಆಗಿತ್ತು. 12 ಲಕ್ಷ ರೂ. ಕೂಡಾ ಮೀಸಲಿಡಲಾಗಿತ್ತು. ಬೆಂಗಳೂರಿನ ಟ್ರಾಫಿಕ್ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಕೋರಮಂಗಲ, ವೈಟ್ ಫೀಲ್ಡ್ ಎಲ್ಲವೂ ಕಮರ್ಷಿಯಲ್ ಆಗಿದೆ. ಎಲ್ಲಾ ಸೌಕರ್ಯವಿರುವ ಬೆಂಗಳೂರು ಚಿಂತನೆಗೆ ಕೆಂಪೇಗೌಡರೇ ಪ್ರೇರಣೆ. ಅಧಿಕಾರ ಬಂದಾಗ ನಮಗೆ ಹಲವಾರು ಸವಾಲುಗಳು ಎದುರಾಗುತ್ತೆ ಎಂದು ಹೇಳಿದರು. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪನೆಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಿದ್ದೇನೆ. ಇಬ್ಬರು ಸ್ವಾಮೀಜಿಗಳ ನಡುವೆ ನಾನು ಕುಳಿತಿದ್ದೆ. ನನಗೆ ವಿಶ್ವಾಸದ ಜೊತೆಗೆ ಚಾಟಿಯೇಟು ಕೊಟ್ಟಿದ್ದಾರೆ. ನಾನು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಸವಾಲುಗಳಿಲ್ಲದೇ ಯಾವುದೇ ದೊಡ್ಡ ಕೆಲಸ ಆಗುವುದಿಲ್ಲ. ಸವಾಲುಗಳನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಪ್ರತಿಭೆಯ ನಗರ: ಡಾ. ಅಶ್ವಥ್ ನಾರಾಯಣ
ಸಮಾರಂಭದಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದು, ಬೆಂಗಳೂರು ದೇಶಕ್ಕೆ ಶಕ್ತಿ ತುಂಬಿದೆ. ಇದಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರದ್ದು ಕೊಡುಗೆ ಇದೆ. ಎಸ್.ಎಂ.ಕೃಷ್ಣ ಅವರ ಕೊಡುಗೆ ಬೆಂಗಳೂರಿಗೆ ಅಪಾರ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ರಾಜ್ಯ ಗುರುತಿಸಲು ಕಾರಣರಾದ ಪ್ರಕಾಶ್ ಪಡುಕೋಣೆ ಕೊಡುಗೆ ಅಪಾರ. ೧೬ನೇ ಶತಮಾನದ ಕೆಂಪೇಗೌಡರ ಕಲ್ಪನೆ ಅದ್ಭುತ. ಪ್ರಸ್ತುತ ಸ್ಪರ್ಧೆಯಲ್ಲಿ ಬೆಂಗಳೂರು ಅಗ್ರಮಾನ್ಯ ಸ್ಥಾನದಲ್ಲಿ ಬೆಳೆದಿದೆ. ವಿಶ್ವದ ೧೦ ಪ್ರಮುಖ ನಗರಗಳಲ್ಲಿ ಬೆಂಗಳೂರು ಒಂದು. ಬೆಂಗಳೂರು ಪ್ರತಿಭೆಯ ನಗರ. ವಿಶ್ವಕ್ಕೆ ಬೇಕಾದ ಎಲ್ಲವನ್ನೂ ಬೆಂಗಳೂರಿನಿಂದ ಪೂರೈಸುತ್ತಿದ್ದೇವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರು ಇಡಲು ನಿರ್ಧರಿಸಿದ್ದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ. ಅದಕ್ಕೆ ಅನುಮೋದನೆ ನೀಡಿದ್ದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್. ವಿಶ್ವದಲ್ಲೇ ಏರ್ ಪೋರ್ಟ್ ಮಧ್ಯೆ ಎಲ್ಲಿಯೂ ಇಂತಹ ಪ್ರತಿಮೆ ಕಾಣಿಸಲ್ಲ.
ಭಾರತದಲ್ಲಿ ಅಂತೂ ಇಂತಹ ಪ್ರತಿಮೆ ಸಾಧ್ಯವೇ ಇಲ್ಲ. ಕೆಲವೇ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳಲಿದೆ. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡರ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತದೆ. ಮೂರು ದಿನಗಳ ಕಾಲ ಬೆಂಗಳೂರು ಹಬ್ಬ ಆಚರಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ: White Spot On Skin: ಮುಖದಲ್ಲಿ ಮೂಡುವ ಬಿಳಿ ಕಲೆಗಳು ಏನನ್ನು ಸೂಚಿಸುತ್ತವೆ?