ಕ್ಯೂ ತಪ್ಪಿಸಲು ಕ್ಯೂಆರ್​ ಟಿಕೆಟ್ ಮಿಷನ್​​: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬಂದಿದೆ ಹೊಸ ವ್ಯವಸ್ಥೆ​

Namma Metro QR Ticket Machine: ಬೆಂಗಳೂರು ಜನರಿಗೆ ವೇಗದ ಮತ್ತು ಸುಖಕರ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಸಹಾಯಕಾರಿಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್​ನಲ್ಲಿನ ಸರತಿ-ಸಾಲು ತಪ್ಪಿಸಲು ಬಿಎಂಆರ್​ಸಿಎಲ್​ ಕ್ಯೂಆರ್ ಕೋಡ್​ ಪರಿಚಯಿಸಿತ್ತು. ಇದೀಗ ಬಿಎಂಆರ್​ಸಿಎಲ್​ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ವಿನೂತನ ಪ್ರಯೋಗ ಮಾಡಿದೆ.​​

ಕ್ಯೂ ತಪ್ಪಿಸಲು ಕ್ಯೂಆರ್​ ಟಿಕೆಟ್ ಮಿಷನ್​​: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬಂದಿದೆ ಹೊಸ ವ್ಯವಸ್ಥೆ​
ನಮ್ಮ ಮೆಟ್ರೋ
Follow us
Kiran Surya
| Updated By: ವಿವೇಕ ಬಿರಾದಾರ

Updated on:May 01, 2024 | 8:10 AM

ಬೆಂಗಳೂರು, ಮೇ 01: ಬೆಂಗಳೂರಿನ (Bengaluru) ಜನ ಇದೀಗ ನಮ್ಮ ಮೆಟ್ರೋ (Namma Metro) ಪ್ರಯಾಣವನ್ನು ನೆಚ್ಚಿಕೊಂಡಿದ್ದಾರೆ‌. ತಮ್ಮ ಸ್ವಂತ ವಾಹನ ಬಿಟ್ಟು ಮೆಟ್ರೋ ಹತ್ತುತ್ತಿದ್ದಾರೆ. ಜನರ ಅನುಕೂಲಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪರಿಚಯಿಸಿದ ಕ್ಯೂಆರ್ ಕೋಡ್ ಯಶಸ್ವಿಯಾಗಿದೆ.‌ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬಿಎಂಆರ್​ಸಿಎಲ್​ ನಮ್ಮ ಮೆಟ್ರೋ ನಿಲ್ದಾಣದಲ್ಲಿಯೇ ಕ್ಯೂಆರ್ ಟಿಕೆಟ್ ಮಿಷನ್​ ಅಳವಡಿಕೆ ಮಾಡಿದೆ.

ಟ್ರಾಫಿಕ್ ಸಾಗರದಿಂದ ಬಳಲಿರುವ ರಾಜಧಾನಿ ಜನರು ಮೆಟ್ರೋ ಮೊರೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ಟೋಕನ್‌‌ ಟಿಕೆಟ್ ಕಿರಿಕಿರಿ ತಪ್ಪಿಸಲು ಪರಿಚಯಿಸಿದ ಕ್ಯೂಆರ್ ಕೋಡ್ ಅನ್ನು ತಿಂಗಳಿಗೆ 25 ಲಕ್ಷ ಜನ ಬಳಕೆ ಮಾಡುತ್ತಾರೆ. ಈಗ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲು ನಮ್ಮ ಮೆಟ್ರೋ ನಿಲ್ದಾಣದಲ್ಲೇ ಒಂದೇ ನಿಮಿಷದೊಳಗೆ ಕ್ಯೂಆರ್ ಕೋಡ್ ಖರೀದಿಗೆ ವ್ಯವಸ್ಥೆ ಮಾಡಿದೆ.

ಬಿಎಂಆರ್​ಸಿಎಲ್ ನವೆಂಬರ್ 2022ರಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಆರಂಭ ಮಾಡಿತ್ತು. ಈಗ ತಿಂಗಳಿನಲ್ಲಿ 25 ಲಕ್ಷ ಜನರು ಆನ್​ಲೈನ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಇದರಿಂದ ಟಿಕೆಟ್ ಕೌಂಟರ್ ಸಿಬ್ಬಂದಿಯ ಒತ್ತಡ ಕಮ್ಮಿಯಾಗಿದೆ. ಮೊಬೈಲ್‌ನಲ್ಲಿ ನೆಟ್‌ವರ್ಕ್ ಸರಿಯಿಲ್ಲದಾಗ ಪ್ರಯಾಣಿಕರು ಕ್ಯೂಆರ್‌ ಟಿಕೆಟ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ವೇಳೆ ಈ ಕ್ಯೂಆರ್‌ ಟಿಕೆಟ್ ಮಿಷನ್​ ಸಹಾಯಕವಾಗಲಿದೆ. ಜೊತೆಗೆ ಟೋಕನ್​ಗಾಗಿ ಕ್ಯೂನಲ್ಲಿ ನಿಲ್ಲುವ ಸಮಸ್ಯೆ ಕೂಡ ತಪ್ಪುತ್ತೆ ಎಂದು ಬಿಎಂಆರ್​ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಯಶವಂತ್ ಚೌವ್ಹಾಣ್ ಹೇಳಿದರು.

ಇದನ್ನೂ ಓದಿ: ಬೇಸಿಗೆ ಎಫೆಕ್ಟ್: ನಮ್ಮ ಮೆಟ್ರೋದಲ್ಲಿ ಒಂದೇ ದಿನ 7, ಬಿಎಂಟಿಸಿಯಲ್ಲಿ 40 ಲಕ್ಷ ಜನ ಪ್ರಯಾಣ

ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 8 ಕಡೆಗಳಲ್ಲಿ ಹಾಗೂ ಎಂಜಿ ರಸ್ತೆಯಲ್ಲಿ 6 ಕಡೆಗಳಲ್ಲಿ ಮಿಷನ್​​ಗಳ ಮೂಲಕ ಕ್ಯೂಆರ್ ಟಿಕೆಟ್ ಖರೀದಿ ವ್ಯವಸ್ಥೆ ಮಾಡಲಾಗಿದೆ. ಟೋಕನ್ ಖರೀದಿ ಮಾಡಲು ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ಪ್ರಯಾಣಿಕರು ನಿಲ್ಲುವ ಸಮಯವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇವಲ ಒಂದು ವಾರದ ಹಿಂದೆ ಅಳವಡಿಕೆ ಮಾಡಿರುವ ಟಿಕೆಟ್ ಜನರೇಟ್ ಮಷಿನ್‌ಗಳಿಗೆ ಜನರಿಂದಲೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಐಪಿಎಲ್ ಪಂದ್ಯದ ಸಮಯದಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇದರ ಪ್ರಯೋಜನ‌ವಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಣೆ ಮಾಡುವ ಪ್ಲಾನ್​ನಲ್ಲಿ ಬಿಎಂಆರ್ಸಿಎಲ್ ಇದೆ.

ಒಟ್ಟಾರೆ‌ ನಮ್ಮ ಮೆಟ್ರೋ ಪ್ರಯಾಣಿಕರ‌ ಅನುಕೂಲಕ್ಕಾಗಿ ಪರಿಚಯಿಸಿದ ಕ್ಯೂಆರ್ ಟಿಕೆಟ್ ಮಿಷನ್​​ಗೆ ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Wed, 1 May 24