
ಬೆಂಗಳೂರು, ಜೂನ್ 26: ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ನೆಮ್ಮದಿಯಾಗಿ ಸಂಚರಿಸಬಹುದು ಎಂದು ನಂಬಿರುವ ಬೆಂಗಳೂರಿನ ಕೋಟ್ಯಂತರ ಪ್ರಯಾಣಿಕರ ಜೀವನಾಡಿ ನಮ್ಮ ಮೆಟ್ರೋ (Namma Metro) ಇತ್ತೀಚಿನ ದಿನಗಳಲ್ಲಿ ಸರಣಿ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ರೈಲ್ವೆ ಹಳಿ, ಸಿಗ್ನಲಿಂಗ್ ಸಮಸ್ಯೆ, ವಿದ್ಯುತ್ ವ್ಯತ್ಯಯ ಹಾಗೂ ಸ್ಮಾರ್ಟ್ ಕಾರ್ಡ್ ಸರ್ವರ್ ವೈಫಲ್ಯ ಸೇರಿದಂತೆ 2024 ರಿಂದ 2026 ರ ಜೂನ್ 26 ರವರೆಗಿನ ಕೇವಲ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 21 ಬಾರಿ ತಾಂತ್ರಿಕ ಅಡಚಣೆಗಳು ವರದಿಯಾಗಿವೆ. ಅದರಲ್ಲೂ ವಿಶೇಷವಾಗಿ ಕಚೇರಿ ಅವಧಿಯಲ್ಲೇ (Peak Hours) ಈ ಯಡವಟ್ಟುಗಳು ಮರುಕಳಿಸುತ್ತಿರುವುದು ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ. ಅಲ್ಲದೆ, ಬಿಎಂಆರ್‌ಸಿಎಲ್ (BMRCL) ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಿರಂತರ ವೈಫಲ್ಯಗಳ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ರೈಲುಗಳು ನಿರಂತರ ಕೈಕೊಡುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದ ರೈಲ್ವೆ ಕಮೀಷನರ್ ಆಫ್ ಸೇಫ್ಟಿ (ದಕ್ಷಿಣ ವಲಯ) ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಜೂನ್ 23, 2026 ರಂದು ಕರೆಂಟ್ ಕಲೆಕ್ಟರ್ ಡಿವೈಸ್ (CCD) ದೋಷದಿಂದ ಇಡೀ ನಗರದ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿದ್ದನ್ನು ಪತ್ರದಲ್ಲಿ ಅವರು ನೆನಪಿಸಿದ್ದಾರೆ. ಬಿಎಂಆರ್‌ಸಿಎಲ್ ಪ್ರಯಾಣಿಕರಿಂದ ದೇಶದಲ್ಲೇ ಅತ್ಯಧಿಕ ಪ್ರಮಾಣದ ದರ ವಸೂಲಿ ಮಾಡುತ್ತದೆ, ಆದರೂ ಇಷ್ಟೊಂದು ಭಾರಿ ಪ್ರಮಾಣದಲ್ಲಿ ತಾಂತ್ರಿಕ ದೋಷಗಳು ಬೇರೆಲ್ಲೂ ಕಂಡುಬರುವುದಿಲ್ಲ ಎಂದು ಉಲ್ಲೇಖಿಸಿ ಕಿಡಿಕಾರಿದ್ದಾರೆ. ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಉತ್ತರದಾಯಿಯಾಗಬೇಕಿದೆ ಎಂದಿರುವ ತೇಜಸ್ವಿ ಸೂರ್ಯ, 5 ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
This is just crazy.
Another day. Another disruption.
Since January 2024, this is the 21st reported technical disruption on Namma Metro.
No metro charges commuters as much as BMRCL does. Yet few metro systems have seen this frequency of disruptions.
I have written to the… https://t.co/O8ZCPvqtbI pic.twitter.com/8qIEOPGkm1
— Tejasvi Surya (@Tejasvi_Surya) June 25, 2026
ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 11 ಬಾರಿ ನೇರಳೆ ಮಾರ್ಗವೊಂದರಲ್ಲೇ ತಾಂತ್ರಿಕ ದೋಷಗಳು ವರದಿಯಾಗಿವೆ. ಬೆಂಗಳೂರಿನ ನಿವಾಸಿಗಳು ಮತ್ತು ಪ್ರಯಾಣಿಕರು ಸುರಕ್ಷಿತ, ನಂಬಿಕಸ್ಥ ಹಾಗೂ ಪಾರದರ್ಶಕ ಮೆಟ್ರೋ ವ್ಯವಸ್ಥೆಯನ್ನು ಹೊಂದಲು ಅರ್ಹರಾಗಿದ್ದು, ಬಿಎಂಆರ್‌ಸಿಎಲ್ ತಕ್ಷಣವೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Fri, 26 June 26