ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ: ಸೋಮವಾರದಿಂದ ದರ ಏರಿಕೆ ಆಗುವುದಿಲ್ಲ

ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರದಿಂದ ತಾತ್ಕಾಲಿಕ ತಡೆ ನೀಡಲಾಗಿದೆ. ಸಂಸದ ತೇಜಸ್ವಿ ಸೂರ್ಯ ನಿರಂತರ ಪ್ರಯತ್ನಗಳ ಬೆನ್ನಲ್ಲೇ ಕೇಂದ್ರ ಗೃಹ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಸದ್ಯಕ್ಕೆ ದರ ಹೆಚ್ಚಳದ ಭೀತಿ ತಪ್ಪಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ: ಸೋಮವಾರದಿಂದ ದರ ಏರಿಕೆ ಆಗುವುದಿಲ್ಲ
ಮೆಟ್ರೋ
Image Credit source: google
Edited By:

Updated on: Feb 07, 2026 | 5:40 PM

ಬೆಂಗಳೂರು, ಫೆಬ್ರವರಿ 07: ನಮ್ಮ ಮೆಟ್ರೋದ (Namma Metro) ಟಿಕೆಟ್ ದರ ಏರಿಕೆ ಮಾಡುತ್ತಿರುವುದಕ್ಕೆ BMRCL ವಿರುದ್ಧ ಜನಾಕ್ರೋಶ ಭುಗಿಲೆದಿತ್ತು. ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಈ ಮಧ್ಯೆ ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸದ್ಯ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಆ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​​ ಸಿಕ್ಕಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ಸರ್ಕಾರದ ಅನ್ಯಾಯದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ವಿರುದ್ಧ ನಿನ್ನೆ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇಂದು ತಕ್ಷಣದ ಹಸ್ತಕ್ಷೇಪವನ್ನು ಕೋರಿ ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್​​​ ಅವರೊಂದಿಗೆ ಫೋನ್​​​ನಲ್ಲಿ ಮಾತನಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಈ ಬಗ್ಗೆ ಟ್ವೀಟ್​ ಮಾಡಿರುವ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆ ಬಗ್ಗೆ ಮನೋಹರ್ ಲಾಲ್ ಖಟ್ಟರ್ ಜತೆ ದೂರವಾಣಿ ಸಂಭಾಷಣೆ ಮಾಡಿರುವೆ. ಫೆ.9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ: ಸಂಸದ ತೇಜಸ್ವಿ ಸೂರ್ಯ

ದೇಶದಲ್ಲೇ ನಮ್ಮ ಮೆಟ್ರೋ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ಮೆಟ್ರೋ ಪ್ರಯಾಣ ದರ ವ್ಯತ್ಯಾಸದ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದೇನೆ. ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಲಕ್ಷಾಂತರ ಜನರಿಗೆ ಹೊರೆಯಾಗಲಿದೆ. ಸಾರ್ವಜನಿಕ ಸಾರಿಗೆ ತಲುಪಲು ಕಷ್ಟವಾಗುತ್ತದೆ. ಹೀಗಾಗಿ ಪ್ರಸ್ತಾವಿತ ದರ ಏರಿಕೆ ತಾತ್ಕಾಲಿಕವಾಗಿ ತಡೆ ಹಿಡಿಯಲು ಸೂಚಿಸಿದ್ದು, ಸೋಮವಾರದಿಂದ ಮೆಟ್ರೋ ಟೆಕೆಟ್ ದರ ಹೆಚ್ಚಳವಾಗಲ್ಲ. ಪ್ರಯಾಣಿಕರ ಅನುಕೂಲಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಬಿಎಂಆರ್​ಸಿಎಲ್ ಹಿರಿಯ ಅಧಿಕಾರಿಗಳು ಹೇಳಿದ್ದಿಷ್ಟು

ಇನ್ನು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಬಗ್ಗೆ ಟಿವಿ9ಗೆ ಬಿಎಂಆರ್​ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ನಮಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಮಾಹಿತಿ ಬಂದಿಲ್ಲ. ಸರ್ಕಾರದಿಂದ ಮಾಹಿತಿ ಬಂದ ಬಳಿಕ ತೀರ್ಮಾನಿಸುತ್ತೇವೆ. ಅಲ್ಲಿಯವರೆಗೆ ನಮ್ಮ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾಹಿತಿ ಬಂದ ಬಳಿಕ ಟಿಕೆಟ್ ದರ ಇಳಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಸೋಮವಾರದಿಂದ ದರ ಪರಿಷ್ಕರಣೆ ಆಗಲ್ಲ: ಸಂಸದ ಪಿ.ಸಿ. ಮೋಹನ್

ಸಂಸದ ಪಿ.ಸಿ. ಮೋಹನ್ ಮಾತನಾಡಿ, ನಾವು ಬೆಂಗಳೂರು ಸಂಸದರು ಕೇಂದ್ರ ಮಂತ್ರಿಗಳೊಂದಿಗೆ ಮಾತನಾಡಿದ್ದೆವು. ನಾವು ಮಾತಾಡಿದ ಬಳಿಕ ಕೇಂದ್ರ ನಗರಾಭಿವೃದ್ಧಿ ಸಚಿವರು ಬಿಎಂ‌ಆರ್‌ಸಿಎಲ್​ಗೆ ದರ ಪರಿಷ್ಕರಣೆಯನ್ನು ತಡೆಹಿಡಿಯಲು ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ದರ ಹೆಚ್ಚಿಸಿ ಎಂದು ಎಲ್ಲಿಯೂ ಹೇಳಿಲ್ಲ. ಸದ್ಯಕ್ಕೆ ನಮ್ಮ ಮನವಿ ಮೇರೆಗೆ ಪರಿಷ್ಕರಣೆಯನ್ನು ತಡೆಹಿಡಿದಿದ್ದಾರೆ. ಮೌಖಿಕವಾಗಿ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಸೋಮವಾರದಿಂದ ದರ ಪರಿಷ್ಕರಣೆ ಆಗಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:41 pm, Sat, 7 February 26

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us