AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿ ಜ್ಞಾನ ಜ್ಯೋತಿ: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ!

ಪರಪ್ಪನ ಅಗ್ರಹಾರ ಜೈಲಿನಲ್ಲಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭವಾಗಿದೆ. ತಾಯಂದಿರೊಂದಿಗೆ ಜೈಲಿನಲ್ಲಿರುವ 6 ವರ್ಷದೊಳಗಿನ ಮುಗ್ಧ ಮಕ್ಕಳ ಶಿಕ್ಷಣ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಹೈಟೆಕ್ ಸೌಲಭ್ಯ ಹಾಗೂ ಶಿಕ್ಷಕರ ನೇಮಕ ಮಾಡಲಾಗಿದೆ. ಈಗಾಗಲೇ ಒಂಭತ್ತು ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದು, ಅದರಲ್ಲಿ ಮೂವರು ವಿದೇಶಿ ಮಕ್ಕಳು ಸಹ ಇದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಜ್ಞಾನ ಜ್ಯೋತಿ: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ!
ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! Image Credit source: The New Indian Express
ಭಾವನಾ ಹೆಗಡೆ
|

Updated on: May 07, 2026 | 12:59 PM

Share

ಬೆಂಗಳೂರು, ಮೇ 07: ಪರಪ್ಪನ ಅಗ್ರಹಾರ (Parappana Agrahara) ತನ್ನಲ್ಲಿ ನಡೆಯುವ ಅಕ್ರಮಗಳ ಕಾರಣಕ್ಕೆ ಯಾವಗಲೂ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಮ್ಮೆ ಕೇಂದ್ರ ಕಾರಾಗೃಹ ಸುದ್ದಿ ಮಾಡಿದೆ. ಆದರೆ ಅಲ್ಲಿ ನಡೆಯುವ ಅಕ್ರಮದಿಂದಲ್ಲ; ಬದಲಾಗಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸುತ್ತಿರುವ ಕಾರಣದಿಂದಾಗಿ. ಹೌದು, ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಾಗ, ಅವರನ್ನೇ ಅವಲಂಬಿಸಿರುವ ಹಸುಗೂಸುಗಳು ಮತ್ತು ಆರು ವರ್ಷದೊಳಗಿನ ಮಕ್ಕಳು ಯಾವುದೇ ಅಪರಾಧ ಮಾಡದಿದ್ದರೂ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು (DCP) ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಿದೆ.

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ
  • ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತು, ಇಬ್ಬರು ಶಿಕ್ಷಕರ ನೇಮಕ
  • ಮೂವರು ವಿದೇಶಿ ಪ್ರಜೆಗಳ ಮಕ್ಕಳು ಸೇರಿ ಒಂಭತ್ತು ಮಕ್ಕಳಿಗೆ ಈಗಾಗಲೇ ಆಶ್ರಯ

ಶೈಕ್ಷಣಿಕ ಮತ್ತು ಮಾನಸಿಕ ವಿಕಸನಕ್ಕೆ ಒತ್ತು

ಜೈಲಿನ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಮಾತ್ರವಲ್ಲದೆ, ಅವರ ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಇಬ್ಬರು ವಿಶೇಷ ಶಿಕ್ಷಕರು ಇಲ್ಲಿ ಮಕ್ಕಳಿಗೆ ವರ್ಣಮಾಲೆ, ಅಂಕಿಅಂಶಗಳು, ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಕಲಿಸುತ್ತಿದ್ದಾರೆ. ಜೊತೆಗೆ ಇಂದಿನ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಗುಡ್ ಟಷ್, ಬ್ಯಾಡ್​ ಟಚ್ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ

ಮಕ್ಕಳಲ್ಲಿ ಶಿಸ್ತು ಮತ್ತು ವ್ಯಕ್ತಿತ್ವ ವಿಕಸನ ಬೆಳೆಸಲು ಊಟದ ಕ್ರಮಗಳು (Table Manners), ಹಿರಿಯರಿಗೆ ಗೌರವ ನೀಡುವುದು ಮುಂತಾದ ಸಾಮಾಜಿಕ ಕೌಶಲಗಳನ್ನು ಕಲಿಸಲಾಗುತ್ತಿದೆ. ಜೈಲು ಕೈಪಿಡಿ ಮತ್ತು ಸುಪ್ರೀಂ ಕೋರ್ಟ್ ನಿಯಮದಂತೆ 6 ವರ್ಷದೊಳಗಿನ ಮಕ್ಕಳಿಗೆ ತಾಯಿಯೊಂದಿಗೆ ಇರಲು ಅವಕಾಶವಿದ್ದು, ಅವರ ರಕ್ಷಣೆ ಮತ್ತು ಶಾಲಾ ಸಿದ್ಧತೆಯ ಜವಾಬ್ದಾರಿಯನ್ನು ಈ ಕೇಂದ್ರ ಹೊತ್ತಿದೆ. ಒಂದು ವೇಳೆ ಮಗುವಿಗೆ ಆರು ವರ್ಷ ತುಂಬಿದ ನಂತರ ಕುಟುಂಬದವರು ಜವಾಬ್ದಾರಿ ವಹಿಸಿಕೊಳ್ಳದಿದ್ದರೆ, ಎನ್‌.ಜಿ.ಒಗಳ ಮೂಲಕ ಶಿಕ್ಷಣ ನೀಡಲು ಕ್ರಮ ವಹಿಸಲಾಗುತ್ತದೆ.

ಇದನ್ನೂ ಓದಿ ‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಜೈಲಲ್ಲೇ ಕೂತು ವಿಡಿಯೋ ಮಾಡಿದ ಕೈದಿಗಳು!

ವಿಶೇಷ ಸೌಲಭ್ಯಗಳು ಮತ್ತು ಮೂಲಸೌಕರ್ಯ

ಪ್ರಸ್ತುತ ಒಂಬತ್ತು ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದು, ಅವರಲ್ಲಿ ಮೂವರು ವಿದೇಶಿ ಪ್ರಜೆಗಳ ಮಕ್ಕಳಾಗಿದ್ದಾರೆ. ಜೈಲಿನ ಕಠಿಣ ವಾತಾವರಣವನ್ನು ‘ಕಲಿಕೆಯ ತಾಣ’ವನ್ನಾಗಿ ಬದಲಿಸಲು ಗೋಡೆಗಳ ಮೇಲೆ ಸುಂದರವಾದ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಆಧುನಿಕ ಶೌಚಾಲಯ, ಕೈ ತೊಳೆಯುವ ವ್ಯವಸ್ಥೆ ಮತ್ತು ಆಟವಾಡುವ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’ ಮತ್ತು ಬಾಲನ್ಯಾಯ ಕಾಯ್ದೆಯಡಿ ಈ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More