AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2026: ಹೊಸ ವರ್ಷಾಚರಣೆಗೆ ಗುಡ್ ನ್ಯೂಸ್: ತಡರಾತ್ರಿ ವರೆಗೂ ಇರುತ್ತೆ ನಮ್ಮ ಮೆಟ್ರೋ ರೈಲು ಸಂಚಾರ!

ಹೊಸ ವರ್ಷಾಚರಣೆ ಸಂಭ್ರಮದಲ್ಲಿರುವ ಬೆಂಗಳೂರು ಜನರಿಗೆ ಬಿಎಂಆರ್​​ಸಿಎಲ್ ಶುಭ ಸುದ್ದಿ ನೀಡಿದೆ. ನ್ಯೂ ಇಯರ್ ಸಂದರ್ಭ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಡಿಸೆಂಬರ್ 31 ರಂದು ಮೆಟ್ರೂ ರೈಲು ಸೇವೆಗಳನ್ನು ರಾತ್ರಿ 3 ಗಂಟೆ ವರೆಗೆ ವಿಸ್ತರಣೆ ಮಾಡಲಾಗಿದೆ. ಯಾವ ಮಾರ್ಗಗಳಲ್ಲಿ ಯಾವ ನಿಲ್ದಾಣದಿಂದ ಕೊನೆಯ ರೈಲು ಎಷ್ಟು ಗಂಟೆಗೆ ಹೊರಡಲಿದೆ ಎಂಬ ಮಾಹಿತಿ ಇಲ್ಲಿದೆ.

New Year 2026: ಹೊಸ ವರ್ಷಾಚರಣೆಗೆ ಗುಡ್ ನ್ಯೂಸ್: ತಡರಾತ್ರಿ ವರೆಗೂ ಇರುತ್ತೆ ನಮ್ಮ ಮೆಟ್ರೋ ರೈಲು ಸಂಚಾರ!
ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)
Ganapathi Sharma
|

Updated on: Dec 31, 2025 | 7:29 AM

Share

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ (New Year) ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದೇ ವೇಳೆ, ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಕೂಡ ರಾತ್ರಿ ಸಂಚಾರದ ಸಮಯ ವಿಸ್ತರಣೆ ಮಾಡಿದೆ. ಈ ಕುರಿತು ಪ್ರಕಟಣೆ ಮೂಲಕ ಬಿಎಂಆರ್​ಸಿಎಲ್ (BMRCL) ಮಾಹಿತಿ ಹಂಚಿಕೊಂಡಿದ್ದು, ಯಾವ ಮಾರ್ಗಗಳಲ್ಲಿ ಎಷ್ಟು ಗಂಟೆಗೆ ಕೊನೆಯ ಮೆಟ್ರೋ ಸಂಚಾರ ಮಾಡಲಿದೆ ಎಂಬ ಮಾಹಿತಿ ನೀಡಿದೆ. ಯಾವ ನಿಲ್ದಾಣದಿಂದ ಕೊನೆಯ ರೈಲು ಎಷ್ಟು ಗಂಟೆಗೆ ಹೊರಡಲಿದೆ ಎಂಬ ಮಾಹಿತಿಯನ್ನೂ ನೀಡಿದೆ.

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಕೊನೆಯ ರೈಲುಗಳು ಹೊರಡುವ ಸಮಯದ ವಿವರ

31 ಡಿಸೆಂಬರ್ 2025ರ ಮಧ್ಯರಾತ್ರಿಯ ನಂತರ, ಅಂದರೆ 1ನೇ ಜನವರಿ 2026ರಂದು ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ಮೆಟ್ರೋ ರೈಲುಗಳ ಸಮಯ ಈ ಕೆಳಕಂಡಂತಿದೆ;

  • ನೇರಳೆ ಮಾರ್ಗ: ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟದ ವರೆಗೆ – ಬೆಳಗಿನ ಜಾವ 1:45ಗಂಟೆಗೆ, ಚಲ್ಲಘಟ್ಟದಿಂದ ವೈಟ್​ಫೀಲ್ಡ್ ವರೆಗೆ – ಬೆಳಗಿನ ಜಾವ 2 ಗಂಟೆಗೆ
  • ಹಸಿರು ಮಾರ್ಗ: ಮಾದಾವರ ದಿಂದ ರೇಷ್ಮೆ ಸಂಸ್ಥೆಯ ವರೆಗೆ – ಬೆಳಗಿನಜಾವ 2 ಗಂಟೆಗೆ, ರೇಷ್ಮೆ ಸಂಸ್ಥೆಯಿಂದ ಮಾದಾವರದ ವರೆಗೆ: ಬೆಳಗಿನಜಾವ 2:00ಗಂಟೆಗೆ
  • ಹಳದಿ ಮಾರ್ಗ: ಆ.ರ್‌ವಿ ರಸ್ತೆ ಯಿಂದ ಬೊಮ್ಮಸಂದ್ರದ ವರೆಗೆ – ಬೆಳಗಿನಜಾವ 3:10 ಗಂಟೆಗೆ, ಬೊಮ್ಮಸಂದ್ರ ದಿಂದ ಆರ್‌ವಿ ರಸ್ತೆಯ ವರೆಗೆ – ಬೆಳಗಿನಜಾವ 1:30 ಗಂಟೆಗೆ

ಬಿಎಂಆರ್​ಸಿಎಲ್ ಎಕ್ಸ್ ಸಂದೇಶ

ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣ: ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ಬೆಳಗಿನ ಜಾವ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್​​ನಿಂದ ಹೊರಡಲಿದೆ.

ಎಷ್ಟು ನಿಮಿಷಕ್ಕೊಂದು ರೈಲು ಸಂಚಾರ?

31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ವಿಸ್ತರಿತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಕ್ಲೋಸ್

ಎಂ.ಜಿ ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ, ರಾತ್ರಿ 10 ರಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪ್ರಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ರಾತ್ರಿ 11 ರ ನಂತರ ಈ ನಿಲ್ದಾಣಗಳಲ್ಲಿಲ್ಲ ಟೋಕನ್ ಮಾರಾಟ

ಟಿಕೆಟ್ ಕೌಂಟರ್‌ಗಳಲ್ಲಿ ಜನ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ, ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸುವಂತೆ ಅಥವಾ ಸಾಕಷ್ಟು ನಗದು ಇರುವ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ