ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವಗಳ ಮೇಲೆ ನಡೆಯುತ್ತಿದ್ಯಾ ಹಣ ಮಾಡುವ ದಂಧೆ?
ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ವಾರಸುದಾರರಿಲ್ಲದ ಶವಗಳ ಅಂಗಾಂಗ ಮಾರಾಟ ಮಾಡಲಾಗುತ್ತಿದೆ. ಅನಾಥ ಶವಗಳನ್ನು ಉಚಿತವಾಗಿ ಸಂಸ್ಕಾರ ಮಾಡುತ್ತಿದ್ದೇವೆ ಅಂತಾ ದುಡ್ಡು ಮಾಡ್ತಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಬೆಂಗಳೂರು, ಜುಲೈ 31: ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಆಸ್ಪತ್ರೆಗಳು ಹೆಣದ ಮೇಲೆ ದುಡ್ಡ ಮಾಡಲು ಮುಂದಾಗಿದ್ದಾವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ವಾರಸುದಾರರಿಲ್ಲದ ಅನಾಥ ಶವಗಳನ್ನು(Orphan Corpse) ಸರ್ಕಾರಿ ಆಸ್ಪತ್ರೆಗಳು ಮಾರಾಟ ಮಾಡಿ ಹಣ ಮಾಡುತ್ತಿವೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್(NR Ramesh) ಆರೋಪಿಸಿದ್ದಾರೆ. ಅಲ್ಲದೆ ಶವಗಳ ಅಂಗಾಂಗಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಆರೋಪಿಸಿದ್ದಾರೆ.
ಎನ್.ಆರ್. ರಮೇಶ್ ಅವರು ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಗಂಭೀರ ಆರೋಪ ಮಾಡಿದ್ದು ಈ ಬಗ್ಗೆ ತನಿಖಾ ತಂಡ ರಚನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ, ಕೆ. ಸಿ. ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಬೋರಿಂಗ್ ಆಸ್ಪತ್ರೆಗಳು ಸೇರಿದಂತೆ ಹಲವು ಆಸ್ಪತ್ರೆಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ವಾರಸುದಾರರಿಲ್ಲದ ಶವಗಳ ಅಂಗಾಂಗ ಮಾರಾಟ ಮಾಡಲಾಗುತ್ತಿದೆ. ಅನಾಥ ಶವಗಳನ್ನು ಉಚಿತವಾಗಿ ಸಂಸ್ಕಾರ ಮಾಡುತ್ತಿದ್ದೇವೆ ಅಂತಾ ದುಡ್ಡು ಮಾಡ್ತಿದ್ದಾರೆ. ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಈ ದಂಧೆ ನಡೆಸಲಾಗುತ್ತಿದೆ. ಅನಾಥ ರೋಗಿಗಳು ಮತ್ತು ಶವಗಳ ಪರಿಶೀಲನಾ ಸಮಿತಿ ರಚಿಸುವ ಸಂಬಂಧ ಸೂಕ್ತ ಕ್ರಮಕ್ಕೆ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಅನಾಥರ ಶವಗಳನ್ನು ಸಂಸ್ಕಾರ ಮಾಡಿರುವ ಸ್ಥಳಗಳಿಂದ ಹೊರತೆಗೆದು ಪ್ರಾಮಾಣಿಕ ಹಿರಿಯ ಅಥವಾ ನಿವೃತ್ತ ಫಾರೆನ್ಸಿಕ್ ತಜ್ಞರಿಂದ ಪರೀಕ್ಷೆ ಮಾಡಿಸಿ ಆಗ ಅಕ್ರಮ ಬಯಲಾಗುತ್ತೆ ಎಂದು ಎನ್.ಆರ್. ರಮೇಶ್ ಪತ್ರದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಮತ್ತು ಅಪಘಾತ ಪ್ರಕರಣಗಳ ರೋಗಿಗಳನ್ನು ದಾಖಲಿಸಿಕೊಳ್ಳುವ ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವ ಸಂಬಂಧ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ವಾರಸುದಾರರು ಪತ್ತೆಯಾಗದ ಮತ್ತು ಅನಾಥ ರೋಗಿಗಳು ಮತ್ತು ಶವಗಳ ಪರಿಶೀಲನಾ ಸಮಿತಿ ರಚಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹಾಗೂ ಗೃಹ ಸಚಿವ ಪರಮೇಶ್ವರಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:00 am, Mon, 31 July 23