ಅಪರಾಧಿ ವಾಮಂಜೂರು ಪ್ರವೀಣ್ ಬಿಡುಗಡೆಗೆ ಪತ್ನಿಯಿಂದಲೇ ವಿರೋಧ: ಗೃಹ ಸಚಿವರನ್ನ ಭೇಟಿಯಾದ ಮೃತರ ಕುಟುಂಬ
ವಾಮಂಜೂರು ಪ್ರವೀಣ್ ಬಿಡುಗಡೆಗೆ ಸರ್ಕಾರದ ನಿರ್ಧಾರಕ್ಕೆ ಸ್ವತಃ ಪತ್ನಿಯಿಂದಲೇ ವಿರೋಧ ವ್ಯಕ್ತವಾಗಿದ್ದು, ಸದ್ಯ ಗೃಹ ಸಚಿವರನ್ನ ಭೇಟಿ ಮಾಡಿ ಬಿಡುಗಡೆ ಮಾಡದಂತೆ ಮನವಿ ಮಾಡಿದರು.
ಬೆಂಗಳೂರು: ಸನ್ನಡತೆ ಆಧಾರದಲ್ಲಿ ಕೈದಿ ವಾಮಂಜೂರು ಪ್ರವೀಣ್ (vamanjoor Praveen Kumar) ಬಿಡುಗಡೆಗೆ ಸರ್ಕಾರದ ನಿರ್ಧಾರಕ್ಕೆ ಸ್ವತಃ ಪತ್ನಿಯಿಂದಲೇ ವಿರೋಧ ವ್ಯಕ್ತವಾಗಿದ್ದು, ಸದ್ಯ ಗೃಹ ಸಚಿವರನ್ನ ಭೇಟಿ ಮಾಡಿರುವ ಮೃತರ ಕುಟುಂಬ ಮತ್ತು ಪ್ರವೀಣ್ ಪತ್ನಿ, ಪ್ರವೀಣ್ ಬಿಡುಗಡೆ ಮಾಡದಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಸರ್ಕಾರದ ನಡೆಗೆ ಎರಡು ಕುಟುಂಬದವರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಪ್ರವೀಣ್ ಬಿಡುಗಡೆ ಮಾಡದಂತೆ ಮನವಿ ಮಾಡಲಾಗಿದೆ. 1994ರಲ್ಲಿ ನಾಲ್ವರನ್ನು ಕೊಲೆ ಮಾಡಿದ್ದ ವಾಮಂಜೂರು ಪ್ರವೀಣ್, ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಮಂಗಳೂರು ಪೊಲೀಸ್ ಕಮಿಷನರ್ ಮೂಲಕ ಸರ್ಕಾರಕ್ಕೆ ಮನವಿ:
ಮಂಗಳೂರು ಪೊಲೀಸ್ ಕಮಿಷನರ್ಗೆ ಹತ್ಯೆಯಾದವರ ಕುಟುಂಬ ಮನವಿ ಮಾಡಿಕೊಂಡಿದೆ. ಹಂತಕ ಪ್ರವೀಣನನ್ನು ಬಿಡುಗಡೆ ಮಾಡದಂತೆ ಕಮಿಷನರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹತ್ಯೆಯಾದ ಅಪ್ಪಿ ಶೇರಿಗಾರ್ತಿ ಅವರ ಪುತ್ರ ಸೀತಾರಾಮ ಗುರುಪುರ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಹಂತಕ ಪ್ರವೀಣನನ್ನು ಬಿಡುಗಡೆ ಮಾಡದಂತೆ ಪತ್ನಿಯಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ನೊಂದವರಿಂದ ಮಾಹಿತಿ ಸಂಗ್ರಹಿಸುವಂತೆ ಎಸಿಪಿ ರವೀಶ್ ನಾಯ್ಕ್ಗೆ ಸೂಚಿಸಲಾಗಿದ್ದು, ಮಾಹಿತಿ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಕರಣ ಏನು?
1994ರ ಫೆಬ್ರವರಿ 23ರಂದು ಪ್ರವೀಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ವಾಮಂಜೂರು ಗ್ರಾಮದಲ್ಲಿ ನಾಲ್ವರನ್ನ ಕೊಂದಿದ್ದ. ಅಪ್ಪಿ ಶೇರಿಗಾರ್ತಿ(75), ಪುತ್ರಿ ಶಕುಂತಲಾ(36), ಪುತ್ರ ಗೋವಿಂದ(30) ಮೊಮ್ಮಗಳು ದೀಪಿಕಾ(9) ಹೀಗೆ ಒಂದೇ ಕುಟುಂಬದ ನಾಲ್ವರನ್ನು ಕೊಂದು ಪ್ರವೀಣ ಚಿನ್ನಾಭರಣ ದೋಚಿದ್ದ. ನಾಲ್ವರನ್ನು ಕೊಂದ ಆರೋಪದ ಮೇಲೆ ಜೈಲುಪಾಲಾಗಿದ್ದ ಪ್ರವೀಣನ ಬಿಡುಗಡೆಗೆ ಇದೀಗ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಾತಕಿ ಪ್ರವೀಣನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟು ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟು ಮತ್ತು 2003 ರಲ್ಲಿ ಸುಪ್ರೀಂ ಕೋರ್ಟು ಕೂಡಾ ಎತ್ತಿ ಹಿಡಿದಿತ್ತು.
ಮರಣ ದಂಡನೆಯ ಶಿಕ್ಷೆಯ ಬಳಿಕ ಪಾತಕಿ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯನ್ನು 2013 ಎಪ್ರಿಲ್ 4 ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ 2014 ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಪ್ರವೀಣ್ ಬಿಡುಗಡೆ ಮಾಡಲು ಸರ್ಕಾರದ ವತಿಯಿಂದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಾತಕಿ ಪ್ರವೀಣನು ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿಯನ್ನು ಸಂತ್ರಸ್ತ ಕುಟುಂಬಸ್ಥರು ಮತ್ತು ಖುದ್ದು ಪಾತಕಿಯ ಪತ್ನಿಯೂ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರವೇ ದೇಶಕ್ಕೆ 75ನೇ ಸ್ವಾತಂತ್ರ್ಯೋತ್ಸವ. ಈ ಸಂದರ್ಭದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೋ ಎಂಬ ಆತಂಕ, ದುಗುಡದಲ್ಲಿ ಸಂತ್ರಸ್ತ ಕುಟುಂಬಸ್ಥರು ಕಾಯುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:12 am, Wed, 10 August 22