ಕೋಟ್ಯಾಧೀಶ ಆಗುವ ದುರಾಸೆಯಿಂದ ತನ್ನ ಮಾಲಿಕನ ಮಗಳನ್ನೇ ಕಿಡ್ನ್ಯಾಪ್ ಮಾಡಲು ಹೋಗಿ ಸಿಕ್ಕಿಬಿದ್ದ
ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ‘ಸರವಣ' ಎಂಬಾತ ಒಂದೇ ಬಾರಿಗೆ ಕೋಟ್ಯಾಧೀಶ ಆಗುವ ದುರಾಸೆಯಿಂದ ತನ್ನ ಮಾಲಿಕನ ಮಗಳನ್ನೇ ಕಿಡ್ನ್ಯಾಪ್ ಮಾಡಲು ಯತ್ನಸಿ ನಂತರ ತಲೆ ಮರೆಸಿಕೊಂಡಿದ್ದನು. ಇದೀಗ ಆತನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.
ಅನೇಕಲ್: ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂದು ತಿಳಿಯದ ಕಾಲಘಟ್ಟ ಇದು. ಕೊರೋನಾ ಕಷ್ಟಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲಸ ಹುಡುಕಿಕೊಂಡು ಬನ್ನೇರುಘಟ್ಟ ನಿವಾಸಿಯಾದ ಮಂಜುನಾಥ್ ರೆಡ್ಡಿ ಬಳಿ ಬಂದಿದ್ದಾನೆ. ನಂತರ ಆಟೋ ಓಡಿಸಲು ಶುರುಮಾಡಿದ್ದಾನೆ. ಮಂಜುನಾಥ್ ರೆಡ್ಡಿಯ ಬಳಿ ಬಹಳಷ್ಟು ಹಣವಿದೆ ಎಂದು ಲೆಕ್ಕಚಾರ ಹಾಕಿದ ಸರವಣ, ಒಂದೇ ಬಾರಿ ಕೋಟಿ ಸಂಪಾದಿಸುವ ಆಸೆಯಿಂದ ಸರವಣ ಮತ್ತು ಆತನ ಸ್ನೇಹಿತ ಪ್ರಶಾಂತ್ ಇಬ್ಬರು ಸೇರಿಕೊಂಡು ಕೋಟಿ ಇಲ್ಲವಾದರೂ ಇಪ್ಪತ್ತು ಮೂವತ್ತು ಲಕ್ಷವಾದರು ಮಂಜುನಾಥ್ ರೆಡ್ಡಿಯಿಂದ ಪಡೆಯಬೇಕು ಎಂದು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಮಂಜುನಾಥ್ ಮಗಳನ್ನೇ ಅಪಹರಣ ಮಾಡಲು ಯತ್ನಿಸಿದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೋಟಿ ಸಂಪಾದಿಸುವ ಕನಸು ಕಂಡು ಲಕ್ಷಕ್ಕೆ ಟಾರ್ಗೆಟ್ ಮಾಡಿದ ಸರವಣ ಮತ್ತು ಸ್ನೇಹಿತ, ತಾವು ಹಾಕಿಕೊಂಡ ಸಂಚಿನಂತೆ ದ್ವಿಚಕ್ರ ವಾಹನ ತೆಗೆದುಕೊಂಡು ಮಂಜುನಾಥ್ ಅವರ ಮೂರು ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ. ಆದರೆ ಸ್ಥಳೀಯರು ಅವರ ಅಪಹರಣವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿದ್ದ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯನ್ನು ಆ.19 ರಂದು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಖದೀಮರನ್ನು ಹಿಂಬಾಲಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸರವಣ ಹಾಗೂ ಪ್ರಶಾಂತ್ ಮಗುವನ್ನು ಕಾಡಿನಲ್ಲಿ ಬಿಟ್ಟು ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ.
ತನ್ನ ಮಗಳ ಅಪಹರಣದ ಬಗ್ಗೆ ಮಂಜುನಾಥ್ ಅವರು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಯಾರು ಅಪಹರಣ ಮಾಡಿದ್ದಾರೆ ಎಂದು ತಿಳಿದಿರಲಿಲ್ಲ. ಆದರೆ ಘಟನೆ ನಡೆದು ಒಂದು ತಿಂಗಳ ನಂತರ ಮಂಜುನಾಥ್ ರೆಡ್ಡಿ ತನ್ನ ಮಗಳ ಕಿಡ್ನ್ಯಾಪ್ ಸಂಬಂಧಿಸಿದಂತೆ ಸರವಣ ಮೇಲೆ ಅನುಮಾನ ಇದೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಮನೆಯಲ್ಲಿ ಏನೇ ಆದರೂ ಕೂಡಲೇ ಬರುತ್ತಿದ್ದ ಸರವಣ, ಮಗಳು ಕಿಡ್ನ್ಯಾಪ್ ಘಟನೆ ಆದ ದಿನದಿಂದ ಮನೆ ಕಡೆ ಬಂದಿಲ್ಲ ಎಂದಿದ್ದಾರೆ. ಹೀಗಾಗಿ ಸರವಣನ ಸುಳಿವು ಪತ್ತೆ ಹೆಚ್ಚಿದ ಪೊಲೀಸರು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಪುರಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಸತ್ಯವನ್ನು ಬಾಯಿಬಿಡಿಸಿ ಇಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ. ಒಟ್ಟಾರೆಯಾಗಿ ಒಂದೇ ದಿನದಲ್ಲಿ ಕೋಟಿ ಸಂಪಾಧಿಸಲು ಹೋದ ಸರವಣ ಕಂಬಿ ಎಣಿಸುವಂತೆಯಾಗಿದೆ.
ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ