ಬೆಂಗಳೂರು: ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಕೇಂದ್ರದ (Indian Institute of Science – IISC) ಆವರಣದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಿದುಳು ಸಂಶೋಧನಾ ಕೇಂದ್ರ (Centre for Brain Research – CBR) ಉದ್ಘಾಟಿಸಿದರು. ಈ ಹಿಂದೆ ಸಂಶೋಧನಾ ಕೇಂದ್ರದ ಭೂಮಿಪೂಜೆ ಕಾರ್ಯಕ್ರಮದಲ್ಲಿಯೂ ಮೋದಿ ಅವರು ಪಾಲ್ಗೊಂಡಿದ್ದರು. ಇದೇ ವೇಳೆ ಬಾಗ್ಚಿ-ಪಾರ್ಥಸಾರಥಿ (Bagchi-Parthasarathy Hospital) ಆಸ್ಪತ್ರೆಯನ್ನು ಮೋದಿ ಲೋಕಾರ್ಪಣೆ ಮಾಡಿದರು. ಭಾರತದ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈ ಆಸ್ಪತ್ರೆ ಮತ್ತು ಮಿದುಳು ಸಂಶೋಧನಾ ಕೇಂದ್ರದ ಉದ್ಘಾಟನೆ ಮಹತ್ವದ ಮೈಲಿಗಲ್ಲು ಎನಿಸಿದೆ. ವಿಜ್ಞಾನ ಮತ್ತು ತಾಂತ್ರಿಕತೆಯ ಮೂಲಸೌಕರ್ಯ, ಪರಿಣತಿ ಮತ್ತು ಪ್ರಯೋಗಾಲಯಗಳ ವಿಚಾರದಲ್ಲಿ ಐಐಎಸ್ಸಿ ಕ್ಯಾಂಪಸ್ ಅತ್ಯುತ್ತಮ ರೀತಿಯಲ್ಲಿ ವಿಕಸನಗೊಂಡಿದೆ. ಅದೇ ಕ್ಯಾಂಪಸ್ನಲ್ಲಿ ಸ್ಥಾಪನೆಯಾಗುತ್ತಿರುವ ಈ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೂ ಈ ಮೂಲಸೌಕರ್ಯದ ನೆರವು ದೊರೆಯಲಿದೆ. ಈ ಆಸ್ಪತ್ರೆಯು 2024ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯಲ್ಲಿ ರೋಗಪತ್ತೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸಂಬಂಧಿಸಿದ ಹಲವು ಅತ್ಯಾಧುನಿಕ ಸೌಕರ್ಯಗಳು ಈ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ. ಆಸ್ಪತ್ರೆಯ ಕ್ಲಿನಿಕಲ್ ಮತ್ತು ಸರ್ಜಿಕಲ್ ವಿಭಾಗಗಳು ಸಮಗ್ರ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಒದಗಿಸಲಿವೆ. ಆಕಾಂಲಜಿ, ಕಾರ್ಡಿಯಾಲಜಿ, ನ್ಯೂರೋಲಜಿ, ಎಂಡೊಕ್ರಿನೊಲಜಿ, ಗ್ಯಾಸ್ಟ್ರೊಎಂಟೆರೊಲಜಿ, ನೆಫ್ರೊಲಜಿ, ಯುರೋಲಾಜಿ, ಡರ್ಮಟಾಲಜಿ ಮತ್ತು ಪ್ಲಾಸ್ಟಿಕ್ ಸರ್ಜರಿ, ಆರ್ಗನ್ ಟ್ರಾನ್ಸ್ಪ್ಲಾಂಟ್, ರೊಬೊಟಿಕ್ ಸರ್ಜರಿ, ಅಪ್ತಾಲ್ಮೊಲಜಿ ಮತ್ತಿತರ ವಿಭಾಗಗಳಲ್ಲಿ ಉತ್ಕೃಷ್ಟ ದರ್ಜೆಯ ಸೇವೆ ದೊರೆಯಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ (National Medical Commission – NMC) ನಿಯಮಾವಳಿಗಳಿಗೆ ಅನುಗುಣವಾಗಿಯೇ ಈ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ. ಇಲ್ಲಿ ಎಂಡಿ/ಎಂಎಸ್ ಮತ್ತು ಡಿಎಂ/ಎಂಸಿಎಚ್ ಕೋರ್ಸ್ಗಳನ್ನು ಓದಲು ಅವಕಾಶವಿದೆ. ತರಗತಿಗಳು ಮತ್ತು ಪ್ರಯೋಗಾಲಯಗಳ ಜೊತೆಗೆ ನಿರ್ದಿಷ್ಟ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯೂ ದೊರೆಯಲಿದೆ. ವೈದ್ಯಕೀಯ ಶಿಕ್ಷಣ ಮತ್ತು ಸೇವೆಗಳಲ್ಲಿ ಡಿಜಿಟಲ್ ಸಾಧ್ಯತೆಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಮತ್ತು ಪರಿಹಾರ, ಸಮಗ್ರ ವೈದ್ಯಕೀಯ ದಾಖಲೆಗಳ ನಿರ್ವಹಣೆ ವ್ಯವಸ್ಥೆ ಮತ್ತು ಟೆಲಿಮೆಡಿಸಿನ್ ಸೌಲಭ್ಯ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.
ವಿಜ್ಞಾನ ಮತ್ತು ಪರಿಹಾರಗಳ ಕ್ಷೇತ್ರದಿಂದ ಆಚೆಗೂ ಐಐಎಸ್ಸಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯ ಅನುಕೂಲಗಳು ಹಲವು. ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರ ಗುರಿ ಮತ್ತು ನೀತಿಗಳನ್ನು ಅಳವಡಿಸಿಕೊಳ್ಳಲು ದೇಶಕ್ಕೆ ಇದು ಮಾರ್ಗದರ್ಶನ ಮಾಡಲಿದೆ. ಕ್ಲಿನಿಕಲ್ ಸಂಶೋಧನೆ ಮತ್ತು ತರಬೇತಿಗೆ ರಾಷ್ಟ್ರಮಟ್ಟದಲ್ಲಿ ಇದು ಒಂದು ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. ಆರೋಗ್ಯ ಕ್ಷೇತ್ರದ ಮುಂದಿನ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇದು ದೇಶಕ್ಕೆ ಸಹಕಾರಿಯಾಗಲಿದೆ. ಮಿದುಳು ಸಂಶೋಧನಾ ಕೇಂದ್ರವನ್ನು (Centre for Brain Research – CBR) ಸ್ವಾಯುತ್ತ, ಲಾಭದ ಉದ್ದೇಶವಿಲ್ಲದ ಸಂಶೋಧನಾ ಸಂಸ್ಥೆ ಎಂದು ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆ 1960ರ ಅನ್ವಯ ಸ್ಥಾಪಿಸಲಾಗಿದೆ. ಇನ್ಫೋಸಿಸ್ ಕಂಪನಿಯ ಸಹ ಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಸುಧಾ ಗೋಪಲಕೃಷ್ಣನ್ ಅವರ ದೇಣಿಗೆ ಈ ಸಂಸ್ಥೆಗೆ ಮೂಲ ಆಧಾರವಾಗಿದೆ. ಇತರ ಹಲವು ದಾನಿಗಳು ಸಂಸ್ಥೆಗೆ ದೇಣಿಗೆ ನೀಡಿದ್ದಾರೆ. ಆದರೆ ಕ್ರಿಸ್ ಗೋಪಾಲಕೃಷ್ಣನ್ ಅವರು ನೀಡಿರುವ ಮೊತ್ತ ಐತಿಹಾಸಿಕ ಪ್ರಮಾಣದ್ದು ಎನಿಸಿದೆ. ವಯಸ್ಸು ಮತ್ತು ಮಿದುಳಿನ ಸಮಸ್ಯೆಗಳಿಗೆ ಇರುವ ಸಂಬಂಧಗಳ ಬಗ್ಗೆ ಈ ಸಂಸ್ಥೆಯು ಸಂಶೋಧನೆ ನಡೆಸುತ್ತದೆ.
Glad to inaugurate the Centre for Brain Research at @iiscbangalore. The joy is greater because I also had the honour of laying the foundation stone for this project. This Centre will be at the forefront of research on how to manage brain related disorders. pic.twitter.com/QU7Oe55s9w
— Narendra Modi (@narendramodi) June 20, 2022
ಮಾನವನ ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥೈಸುವ ನಿಟ್ಟಿನಲ್ಲಿ ಕಳೆದ 30 ವರ್ಷಗಳಲ್ಲಿ ವಿಶ್ವದ ವಿವಿಧೆಡೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಂಶೋಧಕರ ಸಂಖ್ಯೆಯು ಹೆಚ್ಚಾಗಿದೆ. ಹಿಂದೆ ಅಸಾಧ್ಯ ಎನಿಸುವಂತಿದ್ದ ಹಲವು ತಾಂತ್ರಿಕ ಆವಿಷ್ಕಾರಗಳು ಇದೀಗ ಸಾಧ್ಯವಾಗಿದೆ. ಮಾಲಿಕ್ಯುಲರ್ ಬಯಾಲಜಿ ಮತ್ತು ಬ್ರೇನ್ ಇಮೇಜಿಂಗ್ಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಕಂಡು ಬಂದಿದೆ. ನರವಿಜ್ಞಾನವು (ನ್ಯೂರೊಸೈನ್ಸ್) ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವೈದ್ಯಕೀಯ ವಿಜ್ಞಾನ ಕ್ಷೇತ್ರವಾಗಿದೆ. ಮಿದುಳಿನ ಕಾರ್ಯನಿರ್ವಹಣೆಯಲ್ಲಿ ಆಗುವ ತೊಂದರೆಯಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಉತ್ತರ ಅಮೆರಿಕ ಮತ್ತು ಯೂರೋಪ್ನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ಮಿದುಳನ್ನು ಕೇಂದ್ರೀಕರಿಸಿದಂತೆ ವೈದ್ಯಕೀಯ ವಿಜ್ಞಾನದ ವಿವಿಧ ಶಾಖೆಗಳನ್ನು ಆಳವಾಗಿ ಅಭ್ಯಾಸ ಮಾಡಲು ಮತ್ತು ಸಂಶೋಧನೆ ನಡೆಸಲು ಸಿಬಿಆರ್ ಅವಕಾಶ ಕಲ್ಪಿಸಲಿದೆ.
At a time when every nation must give topmost importance to healthcare, efforts like the Bagchi Parthasarathy Multispeciality Hospital assume great importance. In the times to come, it will strengthen healthcare capacities and encourage pioneering research in the sector. pic.twitter.com/BhFoPMoaUk
— Narendra Modi (@narendramodi) June 20, 2022
ಮಿದುಳಿನ ಕಾರ್ಯನಿರ್ವಹಣೆ, ಆರೋಗ್ಯ ಮತ್ತು ರೋಗಗಳ ಬಗ್ಗೆ ಸಿಬಿಆರ್ ಹತ್ತಾರು ಬಗೆಯ ಸಂಶೋಧನೆಗಳನ್ನು ಆರಂಭಿಸಲಿದೆ. ಡೆಮೆನ್ಷಿಯಾ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಮಿದುಳು ಸಮಸ್ಯೆಗಳ ಬಗ್ಗೆ ಸಿಬಿಆರ್ ಸಮಗ್ರ ಸಂಶೋಧನೆ ನಡೆಸಲಿದೆ. ದೀರ್ಘಾವಧಿ ಸಂಶೋಧನೆ ನಡೆಸಬೇಕಾದ ಗ್ರಹಿಕೆ (ಕಾಗ್ನಿಷನ್), ವಂಶವಾಹಿ (ಜೆನೆಟಿಕ್ಸ್) ಮತ್ತು ಮಿದುಳು ರಚನೆಗೆ (ಬ್ರೇನ್ ಇಮೇಜಿಂಗ್) ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಸಿಬಿಆರ್ ರೂಪಿಸಿದೆ. ಡಿಜಿಟಲ್ ದತ್ತಾಂಶ ಕ್ರೋಡೀಕರಣ ಮತ್ತು ವಿಶ್ಲೇಷಣೆಗೆ ವ್ಯವಸ್ಥೆ ರೂಪಿಸಲಾಗಿದೆ. ಹೀಗಾಗಿ ದೊಡ್ಡಮಟ್ಟದ ಜನಸಂಖ್ಯೆಯನ್ನು ಸಂಶೋಧನೆಗೆ ಒಳಪಡಿಸಲು, ದತ್ತಾಂಶ ವಿಶ್ಲೇಷಿಸಲು ಸಾಧ್ಯವಾಗಲಿದೆ. ಭಾರತದ ವಿವಿಧೆಡೆ ಇರುವ, ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನರವಿಜ್ಞಾನಿಗಳು ಒಗ್ಗೂಡಿ, ವಿವಿಧ ಹಂತಗಳ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಲು ಸಿಬಿಆರ್ ವೇದಿಕೆ ಕಲ್ಪಿಸಿಕೊಡಲಿದೆ. ನರದೌರ್ಬಲ್ಯ ಮತ್ತು ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಇಲ್ಲಿ ಅವಕಾಶ ಸಿಗಲಿದೆ.
Published On - 2:20 pm, Mon, 20 June 22