PMJVK ಯೋಜನೆ ಫಲಾನುಭವಿಗಳು ಯಾರು? ಜಿಲ್ಲಾ ಮಟ್ಟದ ಮಾಹಿತಿ ಇಲ್ಲವೆಂದ ಕೇಂದ್ರ ಸರ್ಕಾರ

ಪಿಎಂಜೆವಿಕೆ (PMJVK) ಯೋಜನೆಯ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರದ ಬಳಿ ಜಿಲ್ಲಾ ಮಟ್ಟದ ಡೇಟಾಬೇಸ್ ಇಲ್ಲ ಎಂದು ಲೋಕಸಭೆಯಲ್ಲಿ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ರಾಯಚೂರು ಸಂಸದ ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು, PMJVK ಯೋಜನೆಯಡಿ ಫಲಾನುಭವಿಗಳ ಪ್ರದೇಶ, ಮೂಲಸೌಕರ್ಯ ಕೊರತೆ ಅಥವಾ ಯೋಜನೆಯ ಪರಿಣಾಮವನ್ನು ಅಳೆಯುವ ಪ್ರತ್ಯೇಕ ಜಿಲ್ಲಾ ಮಟ್ಟದ ಡೇಟಾಬೇಸ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PMJVK ಯೋಜನೆ ಫಲಾನುಭವಿಗಳು ಯಾರು? ಜಿಲ್ಲಾ ಮಟ್ಟದ ಮಾಹಿತಿ ಇಲ್ಲವೆಂದ ಕೇಂದ್ರ ಸರ್ಕಾರ
ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು
Image Credit source: PTI

Updated on: Jul 24, 2026 | 12:20 PM

ಬೆಂಗಳೂರು, ಜುಲೈ 24: ಕರ್ನಾಟಕದ ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (PMJVK) ಅಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ, ಈ ಯೋಜನೆಯ ಪರಿಣಾಮವನ್ನು ಅಳೆಯಲು ಅಗತ್ಯವಾದ ಜಿಲ್ಲಾ ಮಟ್ಟದ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ.

ರಾಯಚೂರು ಸಂಸದ ಜಿ. ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, PMJVK ಯೋಜನೆಯಡಿ ಫಲಾನುಭವಿಗಳ ಪ್ರದೇಶ, ಮೂಲಸೌಕರ್ಯ ಕೊರತೆ ಅಥವಾ ಯೋಜನೆಯ ಪರಿಣಾಮವನ್ನು ಅಳೆಯುವ ಪ್ರತ್ಯೇಕ ಜಿಲ್ಲಾ ಮಟ್ಟದ ಡೇಟಾಬೇಸ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. PMJVK ಯೋಜನೆಯು ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳ ಅಭಿವೃದ್ಧಿ ಕೊರತೆ ನಿವಾರಣೆಗೆ ರೂಪಿಸಿರುವ ಬೇಡಿಕೆ ಆಧಾರಿತ (Demand-Driven) ಯೋಜನೆಯಾಗಿದೆ. ಆದರೆ, ಫಲಾನುಭವಿಗಳ ಪ್ರದೇಶಗಳನ್ನು ಗುರುತಿಸುವುದು, ಸ್ಥಳೀಯ ಮೂಲಸೌಕರ್ಯದ ಕೊರತೆಗಳನ್ನು ದಾಖಲಿಸುವುದು ಅಥವಾ ಯೋಜನೆಯ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಯಾವುದೇ ಕೇಂದ್ರ ಡೇಟಾಬೇಸ್‌ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಗುಂಡಿ ಬಿದ್ದ ಗುಂಡ್ಲುಪೇಟೆ ಮುಖ್ಯ ರಸ್ತೆಗಳನ್ನು ಸ್ವಂತ ವೆಚ್ಚದಲ್ಲಿ ಮುಚ್ಚಿದ ಕೂಲಿ ಕಾರ್ಮಿಕ

699 ಯೋಜನೆಗಳು, 7 ಕೋಟಿಗೂ ಹೆಚ್ಚು ಅನುದಾನ

ಜನರಿಗಾಗಿ ರೂಪಿಸಲಾದ ಯೋಜನೆಗಳು ನಿಜವಾಗಿಯೂ ಅವರ ಜೀವನದಲ್ಲಿ ಬದಲಾವಣೆ ತಂದಿವೆಯೇ ಎಂಬುದನ್ನು ತಿಳಿಯಲು ಯಾವುದೇ ವ್ಯವಸ್ಥೆ ಇಲ್ಲ. ಸಾರ್ವಜನಿಕ ಹಣ ಅಗತ್ಯವಿರುವ ಸಮುದಾಯಗಳಿಗೆ ತಲುಪುತ್ತಿದೆಯೇ, ಯೋಜನೆಗಳು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ನಾಗರಿಕರು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2021-22ರಿಂದ 2025-26ರವರೆಗೆ ಕರ್ನಾಟಕದಲ್ಲಿ PMJVK ಅಡಿಯಲ್ಲಿ 699 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, 7 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಫಲಿತಾಂಶ ಆಧಾರಿತ ಮೇಲ್ವಿಚಾರಣೆ ಇಲ್ಲದ ಕಾರಣ, ಈ ಹೂಡಿಕೆ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಮೂಲಭೂತ ಸೇವೆಗಳ ಸುಧಾರಣೆಗೆ ಎಷ್ಟು ನೆರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕುಮಾರ ನಾಯಕ ಹೇಳಿದ್ದಾರೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಸುಮಾರು ಶೇ.15ರಷ್ಟಿದ್ದು, ಅನೇಕ ಕುಟುಂಬಗಳು ಸರ್ಕಾರಿ ಕಲ್ಯಾಣ ಯೋಜನೆಗಳನ್ನೇ ಅವಲಂಬಿಸಿವೆ. ಜಿಲ್ಲಾ ಮಟ್ಟದ ಮಾಹಿತಿ ಇಲ್ಲದ ಕಾರಣ, ಯಾವ ಪ್ರದೇಶಗಳು ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿವೆ ಎಂಬುದನ್ನು ಗುರುತಿಸುವುದು ಹಾಗೂ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವುದು ಕಷ್ಟವಾಗುತ್ತಿದೆ ಎಂದು ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-G) ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY)ಗಳಿಗೆ ಇರುವಂತೆ ಜಿಲ್ಲಾವಾರು ಕಾರ್ಯಕ್ಷಮತೆಯ ಮೇಲ್ವಿಚಾರಣಾ ವ್ಯವಸ್ಥೆಯನ್ನು PMJVKಗೂ ಜಾರಿಗೊಳಿಸಬೇಕು ಎಂದು ಕುಮಾರ ನಾಯಕ ಆಗ್ರಹಿಸಿದ್ದಾರೆ. ಯೋಜನೆಯ ಫಲಿತಾಂಶಗಳನ್ನು ನಿಯಮಿತವಾಗಿ ದಾಖಲಿಸಿ, ಅಭಿವೃದ್ಧಿಯಿಂದ ವಂಚಿತ ಪ್ರದೇಶಗಳನ್ನು ಗುರುತಿಸಿ, ಭವಿಷ್ಯದ ಹೂಡಿಕೆಗಳನ್ನು ಅಗತ್ಯವಿರುವ ಕಡೆಗೆ ಕೇಂದ್ರೀಕರಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಯೋಜನೆಯ ನೈಜ ಲಾಭ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us