ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್
ಲೋನ್ ಇರುವ ಕಾರುಗಳಿಗೆ ನಕಲಿ ಆರ್‌ಸಿ ಮತ್ತು ಎನ್‌ಒಸಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಒಟ್ಟು ನಾಲ್ವರು ಖದೀಮರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಮತ್ತು ವಿಲ್ಸನ್ ಗಾರ್ಡನ್ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳು ಖೆಡ್ಡಾಗೆ ಬಿದ್ದಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಬೆಂಗಳೂರು, ಸೆಪ್ಟೆಂಬರ್ 23: ಲೋನ್ ಕಟ್ಟದ ಕಾರುಗಳನ್ನು ಕೊಂಡು ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣಗಳ ಸಂಬಂಧ ಗುರುಪ್ರಸಾದ್, ಸೋಮೇಶ್, ಸಂತೋಷ್ ಮತ್ತು ಪ್ರಭಾಕರ್ ಎಂಬವರನ್ನು ಬಂಧಿಸಲಾಗಿದೆ. ಲೋನ್ ಇದ್ದ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಗ್ಯಾಂಗ್, ಬಳಿಕ ಆ ಲೋನ್ ಕಟ್ಟಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡ್ತಿತ್ತು. ಹೆಚ್ಚಿನ ಬೆಲೆಗೆ ಅವುಗಳನ್ನು ಗ್ರಾಹಕರಿಗೆ ಮಾರುತ್ತಿತ್ತು ಎಂಬ ಆಘಾತಕಾರಿ ವಿಷಯ ವಿಚಾರಣೆ ವೇಳೆ ಬಯಲಾಗಿದೆ.
1 ಕೋಟಿ 51 ಲಕ್ಷದ 30 ಸಾವಿರ ಮೌಲ್ಯದ ವಾಹನಗಳು ವಶಕ್ಕೆ
ಲೋನ್ ಇರುವ ಕಾರುಗಳ ಮಾಲೀಕರನ್ನೇ ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿ ಗುರುಪ್ರಸಾದ್, ಮೊದಲು ಕಾರು ಮಾಲೀಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಕಾರಿನ ಲೋನ್ ಕ್ಲಿಯರ್ ಮಾಡಿಸಿ ಒಳ್ಳೆಯ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸುತ್ತಿದ್ದ. ಬಳಿಕ ಕಾರು ಮಾಲೀಕರಿಗೆ 1-2 ಲಕ್ಷ ರೂಪಾಯಿ ಹಣ ನೀಡಿ ಕಾರನ್ನು ಪಡೆದುಕೊಳ್ಳುತ್ತಿದ್ದ. ನಂತರ ಅದೇ ಕಾರುಗಳನ್ನು ಐದರಿಂದ ಹತ್ತು ಲಕ್ಷ ರೂಪಾಯಿಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಹಣ ಪಡೆದುಕೊಂಡ ಬಳಿಕ ಕಾರು ಮಾಲೀಕರ ಕೈಗೆ ಸಿಗದೇ ಎಸ್ಕೇಪ್ ಆಗುತ್ತಿದ್ದ. ಈ ಹಿನ್ನೆಲೆ ಆರೋಪಿ ಗುರುಪ್ರಸಾದ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಲಾಕ್ ಮಾಡಿದ್ದಾರೆ. ಈತನ ವಿರುದ್ಧ ವಿಲ್ಸನ್ ಗಾರ್ಡನ್, ಸುಬ್ರಹ್ಮಣ್ಯಪುರ ಹಾಗೂ ಆಡುಗೋಡಿ ಪೊಲೀಸ್ ಠಾಣೆಗಳಲ್ಲೂ ಇದೇ ರೀತಿ ಪ್ರಕರಣಗಳು ದಾಖಲಾಗಿರೋದು ಪತ್ತೆಯಾಗಿದೆ. ಪ್ರಕರಣ ಸಂಬಂಧ 14 ಕಾರು, ಒಂದು ಗೂಡ್ಸ್ ವಾಹನ, ಎರಡು ಆಟೋ ಹಾಗೂ ಆರು ಬೈಕ್‌ಗಳನ್ನು ವಶಕ್ಕೆ ಪಡೆಯಾಲಿದೆ. ವಾಹನಗಳ ಒಟ್ಟು ಮೊತ್ತ 1 ಕೋಟಿ 51 ಲಕ್ಷದ 30 ಸಾವಿರ ರೂಪಾಯಿಯಾಗಿದೆ.
ಇದನ್ನೂ ಓದಿ: ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ತಿದ್ದ ಕುಟುಂಬಕ್ಕೆ ಶಾಕ್: ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ ಕದ್ದ ಖದೀಮರು!
ಕರ್ನಾಟಕ ಸರ್ಕಾರದ ಹೆಸರಿನ ನಕಲಿ ದಾಖಲೆಗಳು ಪತ್ತೆ
ಇನ್ನು ಲೋನ್ ಕಟ್ಟದ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡುತ್ತಿದ್ದ ಮತ್ತೊಂದು ಗ್ಯಾಂಗ್ ಕೂಡ ವಿಲ್ಸನ್ ಗಾರ್ಡನ್ ಪೊಲೀಸರ ಬಲೆಗೆ ಬಿದ್ದಿದೆ. ಸೋಮೇಶ್, ಸಂತೋಷ್ ಹಾಗೂ ಪ್ರಭಾಕರ್ ಬಂಧಿತರು. ಈ ಕಿಲಾಡಿಗಳು ಲೋನ್ ಕ್ಲಿಯರ್ ಆಗಿದೆ ಎಂದು ತೋರಿಸಲು ನಕಲಿ ಎನ್‌ಒಸಿ ಸೃಷ್ಟಿಸಿ ಬಳಿಕ ನಕಲಿ ಆರ್‌ಸಿ ಕಾರ್ಡ್ ತಯಾರಿಸಿ ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ತನಿಖೆ ವೇಳೆ ಹಳೆಯ ಆಸ್ತಿ ಪತ್ರ, ಹಕ್ಕುಪತ್ರ, ಜಮೀನು ದಾಖಲೆಗಳು ಸೇರಿದಂತೆ ಮೈಸೂರು ಸರ್ಕಾರ, ಬಿಡಿಎ ಹಾಗೂ ಕರ್ನಾಟಕ ಸರ್ಕಾರದ ಹೆಸರಿನ ನಕಲಿ ದಾಖಲೆಗಳು ಕೂಡ ಆರೋಪಿಗಳ ಬಳಿ ಪತ್ತೆಯಾಗಿವೆ. ಪ್ರಕರಣ ಸಂಬಂಧ 11 ಕಾರುಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:36 pm, Wed, 23 September 26




