ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ವಿರೋಧಿಸಿ ಪ್ರತಿಭಟನೆ: 70 ಮಂದಿ ವಿರುದ್ಧ ದಾಖಲಾಗಿದ್ದ ಕೇಸ್ ಕ್ಲೋಸ್
ಬೆಂಗಳೂರಿನ ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ 70 ಮಂದಿ ಪ್ರತಿಭಟನೆಕಾರರ ವಿರುದ್ಧ ದಾಖಲಾಗಿದ್ದ ಕೇಸ್ ರದ್ದುಗೊಳಿಸಲಾಗಿದೆ.
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣ ಕುರಿತು ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ(Sankey Road flyover protesters) ನಡೆಸಿದ್ದ 70 ಮಂದಿ ನಾಗರೀಕರು ಹಾಗೂ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಮಂಗಳವಾರ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರಂತೆ 70 ಮಂದಿಯ ಪೈಕಿ ಅವಿಜಿತ್ ಮೈಕೆಲ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು 70 ಮಂದಿ ವಿರುದ್ಧ ಪ್ರಕರಣ ಕೈಬಿಡುವಂತೆ ಆದೇಶಿಸಿದೆ.
ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣ ಕುರಿತು ಸ್ಯಾಂಕಿ ಟ್ಯಾಂಕ್ ಬಳಿ ಕಪ್ಪು ಪಟ್ಟಿ ಕಟ್ಟಿಕೊಂಡು ನಾಗರೀಕರು ಮೌನ ಮೆರವಣಿಗೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 19, 2023 ರಂದು ಸದಾಶಿವನಗರ ಪೊಲೀಸರು 70 ಮಂದಿ ಪ್ರತಿಭಟನಾಕಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಈ ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಐಪಿಸಿ ಸೆಕ್ಷನ್ 341, 141, 149 ಮತ್ತು 283 ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದ್ದು, ಅಕ್ರಮ ಬಂಧನ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ನೋಟೀಸ್ ನೀಡಲಾಗಿತ್ತು. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ ಎಂದು ತೋರಿಸಲು ವೀಡಿಯೊ ಪುರಾವೆಗಳನ್ನು ಉಲ್ಲೇಖಿಸಿರುವ ನಾಗರಿಕರು ಈ ಆರೋಪಗಳನ್ನು ನಿರಾಕರಿಸಿದ್ದರು.
Published On - 7:44 am, Thu, 1 June 23