ಕಳ್ಳತನ, ದರೋಡೆಯಲ್ಲಿ ಖಾಕಿ ಶಾಮೀಲು: ವಿಚಾರಣೆಗೆ ಬಂದಿದ್ದ ಆರೋಪಿಯಿಂದಲೇ ಹಣ ಎಗರಿಸಿದ ಹೆಡ್ ಕಾನ್ಸ್‌ಟೇಬಲ್
ರಾಜ್ಯದಲ್ಲಿ ಕಾನೂನು ಪಾಲಿಸಬೇಕಾದ ಪೊಲೀಸರೇ ಕಳ್ಳತನ, ದರೋಡೆಗಳಲ್ಲಿ ಶಾಮೀಲಾಗಿರುವುದು ಆಘಾತಕಾರಿ. 11 ಲಕ್ಷ ರೂ. ಕದ್ದ ಹೆಡ್ ಕಾನ್ಸ್‌ಟೇಬಲ್, ATM ದರೋಡೆ ಮಾಸ್ಟರ್‌ಮೈಂಡ್ ಕಾನ್ಸ್‌ಟೇಬಲ್, ಚಿನ್ನದ ವ್ಯಾಪಾರಿ ದರೋಡೆ ಮಾಡಿದ ಪಿಎಸ್‌ಐಗಳ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇಲಾಖೆಯ ಘನತೆಗೆ ಧಕ್ಕೆ ತಂದಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಬೆಂಗಳೂರು, ಡಿ.4: ಕಳ್ಳತನ, ಅಪರಾಧಕ್ಕೆ ಕಡಿವಾಣ (Police corruption Karnataka) ಹಾಕಬೇಕಾದ ಪೊಲೀಸರೇ ಇಂತಹ ಕೃತ್ಯದಲ್ಲಿ ಶಾಮೀಲಾದರೆ ರಾಜ್ಯದ ಕಾನೂನು ಸುವ್ಯಸ್ಥೆಯ ಗತಿ ಏನು? ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ ರಾಜ್ಯದ ಪೊಲೀಸರ ಕತೆ. ಒಬ್ಬಿಬ್ಬರು ಮಾಡುವ ಇಂತಹ ಕೆಲಸದಿಂದ ಇಡೀ ಇಲಾಖೆಗೆ ಕಪ್ಪುಚುಕ್ಕೆ ಬರುತ್ತದೆ. ಕಳ್ಳರ ಜತೆಗೆ ಪೊಲೀಸರೇ ಕೈ ಜೋಡಿಸಿರುವ ಘಟನೆಗಳು ಆಗ್ಗಾಗೆ ಬೆಳಕಿಗೆ ಬರುತ್ತಿದೆ. ಇಂತಹ ಘಟನೆಗಳಿಂದ ರಾಜ್ಯದಲ್ಲಿ ಜನರಿಗೆ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಟಿಎಂಗೆ ಹಣ ಒಯ್ಯುತ್ತಿದ್ದ ವಾಹನದಿಂದ 7.11 ಕೋಟಿ ರೂ. ಹಣ ದರೋಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗೋವಿಂದಪುರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಅವರ ಕೈವಾಡ ಇದೆ ಎಂದು ಹೇಳಲಾಗಿತ್ತು. ಈ ಪ್ರಕರಣದ ನಂತರ ದಾವಣಗೆರೆಯಲ್ಲೂ ಇಂತಹದೇ ಒಂದು ಘಟನೆ ನಡೆದಿದೆ. ಇಬ್ಬರು ಪಿಎಸ್‍ಐ ಸೇರಿ ನಾಲ್ವರು ಪೋಲಿಸರು ಚಿನ್ನದ ವ್ಯಾಪಾರಿ ವಿಶ್ವನಾಥ್ ಬಳಿ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಸೈಬರ್ ವಂಚನೆ ಮಾಡಿದ್ದ ವ್ಯಕ್ತಿಯನ್ನು ವಿಚಾರಣೆಗೆಂದು ಬೆಂಗಳೂರು ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದಿದ್ದಾಗ, ಆರೋಪಿಯ ಕಾರಿನಲ್ಲಿದ್ದ ಹಣವನ್ನು ಪೊಲೀಸ್ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದ ವೇಳೆ ಲಕ್ಷಾಂತರ ರೂಪಾಯಿ ಹಣವನ್ನು ಪೊಲೀಸ್ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ. ಇತ್ತೀಚೆಗೆ ಸೈಬರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿತ್ತು. ಆರೋಪಿ ಮತ್ತು ಆತನ ಕಾರನ್ನು ಸಿಸಿಬಿ ಅಧಿಕಾರಿಗಳು ಕಮಿಷನರ್ ಕಚೇರಿ ತೆಗೆದುಕೊಂಡ ಬಂದಿದ್ದರು. ಈ ವೇಳೆ ಕಾರಿನಲ್ಲಿ 11 ಲಕ್ಷ ರೂ ಹಣವಿತ್ತು. ಈ ಹಣವನ್ನು ಹೆಡ್ ಕಾನ್ಸ್‌ಟೇಬಲ್ ಜಬಿವುಲ್ಲಾ ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಿರಿಯ ಅಧಿಕಾರಿಗಳ ಮುಂದೆ ಹೈಡ್ರಾಮ:
ಆರೋಪಿಯನ್ನು ಕಮಿಷನರ್ ಕಚೇರಿಗೆ ಕರೆದುಕೊಂಡ ಬಂದ ಸಂದರ್ಭದಲ್ಲಿ ಕಾರಿನಲ್ಲಿದ್ದ 11 ಲಕ್ಷ ಹಣವನ್ನು ಹೆಡ್ ಕಾನ್ಸ್‌ಟೇಬಲ್ ಜಬಿವುಲ್ಲಾ ಕಳ್ಳತನ ಮಾಡಿದ್ದಾರೆ. ಹಣ ಕಳ್ಳತನ ಮಾಡಿ ಏನು ಗೊತ್ತೇ ಇಲ್ಲ ಅನ್ನೋ ರೀತಿ ನಾಟಕ ಮಾಡಿದ್ದಾರೆ. ಸ್ವಲ್ಪ ದಿನದ ನಂತರ ಆರೋಪಿ ಜಮೀನು ತೆಗೆದುಕೊಂಡು ಜೈಲಿನಿಂದ ಹೊರ ಬಂದ ವೇಳೆ ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿದೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳನ್ನು ಆರೋಪಿ ಪ್ರಶ್ನಿಸಿದ್ದಾರೆ. ಆರೋಪಿಯ ಮಾತು ಕೇಳಿ ಅಧಿಕಾರಿಗಳು ಗಾಬರಿಗೊಂಡು, ಹಣದ ಬ್ಯಾಗ್ ಹುಡುಕಲು ಶುರು ಮಾಡಿದ್ದಾರೆ. ಈ ವೇಳೆ ಸಿಸಿಬಿ ಕಚೇರಿ ಹೊರೆಗೆ ಇರುವ ಸಿಸಿಟಿವಿ ದೃಶ್ಯವನ್ನು ನೋಡಿದಾಗ ಹೆಡ್ ಕಾನ್ಸ್‌ಟೇಬಲ್ ಜಬಿವುಲ್ಲಾ ಹಣ ಬ್ಯಾಗ್ನ್ನು ಎತ್ತಿಕೊಂಡು ಹೋಗಿರುವುದು ಕಂಡು ಬಂದಿದೆ. ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರು ಜಬಿವುಲ್ಲಾ ಅವರ ಮನೆಗೆ ಭೇಟಿ ನೀಡಿ ತನಿಖೆ ಮಾಡಿದ್ದಾರೆ. ಈ ವೇಳೆ ಜಬಿವುಲ್ಲಾ ಅಧಿಕಾರಿಗಳ ಮುಂದೆ ಹೈಡ್ರಾಮ ಮಾಡಿದ್ದಾರೆ. ನಂತರ ಅಧಿಕಾರಿಗಳು ಮನೆಯೆಲ್ಲ ಹುಡುಕಾಡಿದ್ದಾರೆ. ಈ ವೇಳೆ ಬೆಡ್ ಕೆಳಗೆ ಹಣ ಜೋಡಿಸಿಟ್ಟಿರುವುದು ಕಂಡು ಬಂದಿದೆ. ಇದರಲ್ಲಿ ಎರಡು ಲಕ್ಷ ಮಾತ್ರ ಇತ್ತು. ಉಳಿದ ಹಣದಲ್ಲಿ ಜಬಿವುಲ್ಲಾ ತಮ್ಮ ಹೆಂಡತಿಗೆ ಒಡವೆ ಮಾಡಿಸಿದ್ದಾರೆ. ಇದೀಗ ಸದ್ಯ 2 ಲಕ್ಷ ಹಣ ವಾಪಸ್ ಕೊಟ್ಟಿದ್ದು, ಉಳಿದ ಹಣವನ್ನು ತಕ್ಷಣವೇ ನೀಡುವಂತೆ ಆದೇಶ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವ್ಯಾಪಾರಿ ಬಳಿ ಚಿನ್ನ ದರೋಡೆ: ಓರ್ವ PSI ಸೇವೆಯಿಂದ ವಜಾ, ಮತ್ತೋರ್ವ ಇನ್ಸ್ಪೆಕ್ಟರ್ ಅಮಾನತು
7.11 ಕೋಟಿ ರೂ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್ ಕಾನ್ಸ್‌ಟೇಬಲ್:
ಎಟಿಂಗಳಿಗೆ ಹಣ ಒಯ್ಯುತ್ತಿದ್ದ ವಾಹನವನ್ನು ಅಧಿಕಾರಿಗಳ ಸೋಗಿನಲ್ಲಿ ತಡೆದು 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಹಾಡಹಗಲೇ ಹಣ ಲೂಟಿ ಹೊಡೆಯಲು ಗೋವಿಂದಪುರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ಸಾಥ್ ನೀಡಿದ್ದರು ಎಂದು ಹೇಳಲಾಗಿದೆ. ಇಡೀ ದರೋಡೆಯ ಮಾಸ್ಟರ್‌ಮೈಂಡ್ ಆಗಿದ್ದು, ಹುಡುಗರನ್ನ ದರೋಡೆಗೆ ಸಿದ್ಧಪಡಿಸಿದ್ದರು ಎಂದು ಪ್ರಾರ್ಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಚಿನ್ನದ ವ್ಯಾಪಾರಿಯಿಂದ ಪೊಲೀಸ್ ಅಧಿಕಾರಿಗಳು ದರೋಡೆ:
ನಾವು ಐಜಿ ಸ್ಕ್ವಾಡ್ ಎಂದು ನಕಲಿ ಗನ್ ಐಡಿ ಕಾರ್ಡ್ ತೋರಿಸಿ ಚಿನ್ನದ ವ್ಯಾಪಾರಿ ವಿಶ್ವನಾಥ್ ನನ್ನು ಹೆದರಿಸಿದ ಬಂಗಾರವನ್ನು ದರೋಡೆ ಮಾಡಿದ್ದರು. ನವೆಂಬರ್ 24ರಂದು ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಇದೀಗ ಪೊಲೀಸರೇ ಪ್ರಮುಖ ಆರೋಪಿಗಳು ಎಂದು ಹೇಳಲಾಗಿದೆ. ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ಈಗಾಗಲೇ ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 4 December 25




