ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು?

ರಾಜ್ಯದಲ್ಲಿ ರೌಡಿಗಳ ಹೆಡೆಮುರಿ ಕಟ್ಟಬೇಕಾದ ಪೊಲೀಸ್ ಇಲಾಖೆ ಮಾಡಿದ ಅದೊಂದು ದೊಡ್ಡ ಎಡವಟ್ಟಿಗೆ ರೌಡಿಗಳಿಗೆ ರಿಲೀಫ್ ಸಿಕ್ಕಿದೆ. ರೌಡಿಶೀಟರ್​ ರೋಹಿತ್ ಅಲಿಯಾಸ್ ಒಂಟೆ ರೋಹಿತ್ ಸೇರಿದಂತೆ 66 ನಟೋರಿಯಸ್​​ ರೌಡಿ​ಗಳನ್ನು ರೌಡಿಶೀಟ್​​ನಿಂದ ಕೈಬಿಡಲಾಗಿದೆ. ಪೊಲೀಸರು ಸೂಕ್ತ ದಾಖಲೆಗಳನ್ನು ಒದಗಿಸದಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ರೌಡಿ ನಿಗ್ರಹ ಪಡೆ ಮಧ್ಯೆಯೂ 66 ರೌಡಿಗಳಿಗೆ ಮುಕ್ತಿ: ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಏನು?
ರಾಜ್ಯ ಪೊಲೀಸ್​​ ದೂರುಗಳ ಪ್ರಾಧಿಕಾರ
Image Credit source: tv9 kannada
Edited By:

Updated on: Jun 15, 2026 | 7:09 PM

ಬೆಂಗಳೂರು, ಜೂನ್​​ 15: ಡಿಕೆ ಶಿವಕುಮಾರ್ (DK Shivakumar) ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಇತ್ತೀಚೆಗೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದರು. ರೌಡಿಗಳನ್ನ ಮಟ್ಟಹಾಕಲು ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಆ್ಯಂಟಿ ರೌಡಿ ಸ್ಕ್ವಾಡ್ ರಚನೆಗೆ ಸೂಚಿಸಿದ್ದರು. ಆದರೆ ಇದೀಗ ಪೊಲೀಸ್ ಇಲಾಖೆ ಎಡವಟ್ಟಿನಿಂದ ರೌಡಿಪಟ್ಟಿಯಿಂದ (Rowdy Sheeters) 66 ನಟೋರಿಯಸ್​​ ರೌಡಿ​ಗಳಿಗೆ ಮುಕ್ತಿ ನೀಡಲಾಗಿದೆ.

ಮುಖ್ಯಾಂಶಗಳು

  • ಪೊಲೀಸ್ ಇಲಾಖೆ ಎಡವಟ್ಟಿನಿಂದ ರೌಡಿಪಟ್ಟಿಯಿಂದ 66 ನಟೋರಿಯಸ್​​ ರೌಡಿ​ಗಳಿಗೆ ಮುಕ್ತಿ
  • ಮಾರ್ಗಸೂಚಿ ಪಾಲನೆಯಲ್ಲಿ ಎಡವಿದ ಪೊಲೀಸ್ ಇಲಾಖೆ
  • 100ಕ್ಕೂ ಅಧಿಕ ಬಾರಿ ಮನವಿ ಸಲ್ಲಿಸಿದ್ದ ಸೈಲೆಂಟ್ ಸುನಿಲ್

ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸೈಲೆಂಟ್ ಸುನಿಲ್, ಒಂಟೆ ರೋಹಿತ್ ಸೇರಿದಂತೆ ಬರೋಬ್ಬರಿ 66 ರೌಡಿಗಳನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಪೊಲೀಸ್ ದೂರು ಪ್ರಾಧಿಕಾರ ಆದೇಶಿಸಿದೆ. ಹೈಕೋರ್ಟ್ ನೀಡಿದ್ದ ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಪೊಲೀಸರು ಎಡವಿರುವುದೇ ರೌಡಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ರೌಡಿಗಳ ವಿರುದ್ಧ ಸಮರ ಸಾರಿದ ಪೊಲೀಸ್ರು, ವಿಚಾರಣೆಗೆ ಬರದೇ ಆಟವಾಡ್ತಿದ್ದ ರೌಡಿ ಅರೆಸ್ಟ್​

ರೌಡಿಶೀಟರ್ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಯುವಂತೆ ನಟೋರಿಯಸ್ ರೌಡಿ ಸೈಲೆಂಟ್ ಸುನಿಲ್ ಅಲಿಯಾಸ್ ಸುನಿಲ್ ಕುಮಾರ್ ಪೊಲೀಸ್ ಪ್ರಾಧಿಕಾರಕ್ಕೆ 100ಕ್ಕೂ ಅಧಿಕ ಬಾರಿ ಮನವಿ ಸಲ್ಲಿಸಿದ್ದ. ಮೇ 19ರಂದು ನಡೆದ ಪೊಲೀಸ್ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ, ಸೈಲೆಂಟ್ ಸುನಿಲ್ ಹೆಸರನ್ನು ಅಮೃತಹಳ್ಳಿ ಠಾಣೆಯ ರೌಡಿಪಟ್ಟಿಯಿಂದ ಹಾಗೂ ರೋಹಿತ್ ಅಲಿಯಾಸ್ ಒಂಟೆ ರೋಹಿತ್ ಸೇರಿದಂತೆ ಒಟ್ಟು 66 ಜನರನ್ನು ರೌಡಿಪಟ್ಟಿಯಿಂದ ಮುಕ್ತಗೊಳಿಸಲು ಆದೇಶ ಹೊರಡಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ, ಪೊಲೀಸರು ರೌಡಿಶೀಟ್ ಮುಂದುವರಿಸಲು ಸೂಕ್ತ ದಾಖಲೆಗಳನ್ನು ಒದಗಿಸದಿರುವುದು ಮತ್ತು ಹೈಕೋರ್ಟ್ ನಿಯಮಗಳನ್ನು ಗಾಳಿಗೆ ತೂರಿರುವುದು.

ಕಳೆದ 2022ರಲ್ಲಿ ಹೈಕೋರ್ಟ್ ಯಾವುದೇ ವ್ಯಕ್ತಿಯ ವಿರುದ್ಧ ರೌಡಿಪಟ್ಟಿ ತೆರೆಯುವ ಮತ್ತು ಅದನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಈ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಇಲಾಖೆ ಸಂಪೂರ್ಣವಾಗಿ ಎಡವಿದೆ. ಇದೇ ಕಾರಣಕ್ಕೆ 66 ರೌಡಿಗಳನ್ನ ರೌಡಿ ಪಟ್ಟಿಯಿಂದ ಕೈ ಬಿಡಲು ಪೊಲೀಸ್ ಪ್ರಾಧಿಕಾರದಿಂದ ಆದೇಶಿಸಲಾಗಿದೆ.

ಹೈಕೋರ್ಟ್ ಮಾರ್ಗಸೂಚಿಗಳೇನು?

  • ಯಾವುದೇ ವ್ಯಕ್ತಿಯ ವಿರುದ್ಧ ಆಯಾ ವ್ಯಾಪ್ತಿಯ ಠಾಣೆಯಲ್ಲಿ ರೌಡಿಶೀಟ್‌ ತೆರೆಯುವ ಮುನ್ನ ಸಂಬಂಧಿತ ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಬೇಕು. ಬಳಿಕ ರೌಡಿಪಟ್ಟಿ ತೆರೆಯುವ ಪ್ರಕ್ರಿಯೆ ಆರಂಭಿಸಬೇಕು.
  • ರೌಡಿಶೀಟ್‌ ತೆಗೆಯುತ್ತಿರುವ ವ್ಯಕ್ತಿಗೆ ಈ ಕುರಿತು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಬೇಕು. ಈ ಕುರಿತು ಆಕ್ಷೇಪಣೆಗಳಿದ್ದರೆ ಎರಡು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಬೇಕು. ಇದರಲ್ಲಿ ಖುದ್ದು ವ್ಯಕ್ತಿಯ ವಿಚಾರಣೆಯ ಅಗತ್ಯವಿರುವುದಿಲ್ಲ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮುಂಚಿತವಾಗಿ ನೋಟಿಸ್‌ ನೀಡುವ ಪ್ರಕ್ರಿಯೆ ಕೈ ಬಿಡಬಹುದು. ಆದರೆ, ಏಕೆ ನೋಟಿಸ್‌ ನೀಡಿಲ್ಲ ಎಂಬುದರ ಬಗ್ಗೆ ರೌಡಿ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು.
  • ಪೊಲೀಸ್‌ ಅಧೀಕ್ಷಕರು (ಎಸ್ಪಿ), ಉಪವಿಭಾಗದ ಅಧಿಕಾರಿಗಳು ರೌಡಿಶೀಟ್‌ಗೆ ಯಾವುದೇ ವ್ಯಕ್ತಿಯ ಹೆಸರನ್ನು ರೌಡಿಪಟ್ಟಿಗೆ ಸೇರಿಸಲು ಅನುಮೋದನೆ ನೀಡುವ ಮುನ್ನ ದಾಖಲೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುವುದು ಕಡ್ಡಾಯ. ಜತೆಗೆ, ಅನುಮೋದನೆಯ ಸ್ಪಷ್ಟ ಕಾರಣ ದಾಖಲಿಸಬೇಕು. ಜತೆಗೆ, ಸಂಬಂಧಪಟ್ಟ ವ್ಯಕ್ತಿಗೆ ಆದೇಶದ ಪ್ರತಿ ನೀಡಬೇಕು. ಈ ಪ್ರತಿಯಲ್ಲಿ ಆದೇಶದ ವಿರುದ್ಧ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂಬ ಉಲ್ಲೇಖ ಮಾಡಿರಬೇಕು.

ರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ 

  •  ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸರು ಠಾಣೆಯ ರೌಡಿಪಟ್ಟಿಯನ್ನು 2 ವರ್ಷಕ್ಕೊಮ್ಮೆ ನಿಯಮಿತವಾಗಿ ಪರಿಶೀಲನೆ ಮಾಡಬೇಕು.
  • ಯಾವುದೇ ಭಾದಿತ ವ್ಯಕ್ತಿಯು ರೌಡಿಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಒಂದು ವರ್ಷದ ಬಳಿಕ ಅಸಮಾಧಾನವಿದ್ದರೆ, ಪಟ್ಟಿಯಿಂದ ತೆಗೆಯುವಂತೆ ಪೊಲೀಸರಿಗೆ ಮನವಿ ಸಲ್ಲಿಸಬಹುದು.
  • ಈ ಮನವಿಯನ್ನು ಪರಿಶೀಲಿಸುವ ಪೊಲೀಸರು ಸನ್ನಡತೆ, ಸಾಮಾಜಿಕ ಸೇವೆ, ಇತರ ಕಾರಣಗಳಿಂದ ರೌಡಿಪಟ್ಟಿಯಿಂದ ತೆಗೆಯಬಹುದು.
  • ಯಾವುದೇ ವ್ಯಕ್ತಿ ತನ್ನ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಲು ಸಂಬಂಧಪಟ್ಟ ಪೊಲೀಸರಿಗೆ ಮನವಿ ಸಲ್ಲಿಸಿದ 60 ದಿನಗಳ ಒಳಗಡೆ ಅಂತಿಮ ನಿರ್ಧಾರ ಕೈಗೊಳ್ಳಬೇಕು.
  • ಒಂದು ವೇಳೆ ಪೊಲೀಸರು ರೌಡಿಶೀಟ್‌ನಿಂದ ಹೆಸರು ತೆಗೆಯಲು ತಿರಸ್ಕರಿಸಿ ಮುಂದುವರಿಸಿದರೆ ಇದರ ವಿರುದ್ಧ ಬಾಧಿತ ವ್ಯಕ್ತಿಯು 30 ದಿನಗಳ ಒಳಗೆ ಪೊಲೀಸ್‌ ದೂರುಗಳ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿಯನ್ನು ಪ್ರಾಧಿಕಾರವು ಬಾಧಿತ ವ್ಯಕ್ತಿಯ ಸಂಬಂಧ ಇರುವ ದಾಖಲೆಗಳು ಹಾಗೂ ಪೊಲೀಸರ ದಾಖಲೆಗಳನ್ನು ಪರಿಶೀಲಿಸಿ 60 ದಿನಗಳ ಒಳಗಡೆ ಮೇಲ್ಮನವಿ ಇತ್ಯರ್ಥಪಡಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರದೀಪ್​ ಚಿಕ್ಕಾಟಿ

ಕ್ರೈಂ ವರದಿಗಾರನಾಗಿ ಟಿವಿ9 ಕನ್ನಡದಲ್ಲಿ ಕೆಲಸ

Read More
Follow Us