
ಬೆಂಗಳೂರು, (ಆಗಸ್ಟ್ 27): ನಗರದ ಬಸವನಗುಡಿಯಲ್ಲಿ ಈದ್ ಮಿಲಾದ್ (Bssawanagud Eid milad) ಮೆರವಣಿಗೆ ವೇಳೆ ಘೋಷಣೆ ಕೂಗುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಹಿಂದೂ ಕಾರ್ಯಕರ್ತನ ಮೇಲೆ ಮೇಲೆ ಹಲ್ಲೆಯಾಗಿದ್ದು, ಪ್ರಚೋದನೆ ಹಾಗೂ ಗಲಾಟೆ ಸೃಷ್ಟಿಸಿದ ಆರೋಪದಡಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿ ಎರಡೂ ಗುಂಪಿನ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಯುವಕರೇ ಮೊದಲು ಗಲಾಟೆ ಮಾಡಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ. ಹೀಗಾಗಿ ಈ ಪ್ರಕರಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಮಧ್ಯೆ ದಕ್ಷಿಣ ಪೊಲೀಸ್ ವಿಭಾಗ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಗಲಾಟೆ ನಡೆದಿದ್ಯಾಕೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಈದ್ ಮಿಲಾದ್ ಮೆರವಣೆಗೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಪೊಲೀಸರು ಮೆರವಣಿಗೆಯನ್ನು ಶಾಂತಿಯುತವಾಗಿ ಕರೆತಂದಿರುತ್ತಾರೆ. ಕೆ.ಆರ್. ರಸ್ತೆಯಲ್ಲಿ ಗರಡಿ ಅಪಾರ್ಟ್‌ಮೆಂಟ್ ಮುಂದೆ ಮೆರವಣಿಗೆ ಬಂದಿತ್ತು ಮುಸ್ಲಿಂ ಸಮುದಾಯದವರು ತಮ್ಮ ಘೋಷಣೆ ಕೂಗಿಕೊಂಡು ಸಾಗುತ್ತಿದ್ದರು. ಈ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿ ಹಾಗೂ ಸಂಘಟನೆಯ ಇತರರು ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮುಸ್ಲಿಂರ ಮೆರವಣಿಗೆಯ ಕಡೆ ನೋಡುತ್ತಾ ಪ್ರಚೋದಿಸಿದ್ರು. ಇದರಿಂದ ಮುಸ್ಲಿಂ ಸಮುದಾಯದವರು ಘೋಷಣೆ ಕೂಗದಂತೆ ತಾಕೀತು ಮಾಡಲು ಬಂದಿದ್ರು. ಆಗ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಪುನೀತ್ ಕೆರೆಹಳ್ಳಿರವರನ್ನು ತಡೆದಿದ್ದಾರೆ. ಈ ವೇಳೆ ಮುಸ್ಲಿಂ ಹುಡುಗರು ಮುರುಳಿ ಎಂಬಾತನಿಗೆ ಯಾವುದೋ ಆಯುಧದಿಂದ ಹಲ್ಲೆ ಮಾಡಿದ್ದಾರೆ.
ಇದನ್ನು ನೋಡಿದ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸದೇ ರಸ್ತೆಯ ಮಧ್ಯದಲ್ಲಿ ಕುಳಿತು ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಹಾಗೂ ಮೆರವಣಿಗೆಗೆ ತೊಂದರೆ ಮಾಡಿದ್ದರು. ಪುನೀತ್ ಕೆರೆಹಳ್ಳಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಬಿಡದೇ ಹಠ ಮಾಡಿದ್ದು, ಆಂಬುಲೇನ್ಸ್ ಕರೆಯಿಸಿ ಎಂದು ಹಠ ಮಾಡಿ ಗಾಯಾಳುವನ್ನು ಬಿಡದೇ ತನ್ನ ಹತ್ತಿರ ಮಲಗಿಸಿಕೊಂಡು ರಸ್ತೆ ಮಧ್ಯೆ ಪ್ರತಿಭಟನೆ ಮಾಡಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಸಮಾಧಾನ ಮಾಡಿ ಗಾಯಾಳುನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಒಂದು ಅಬ್ದುಲ್ ರಜಾಕ್, ಮತ್ತೊಂದು ಪುನೀತ್ ಕೆರೆಹಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ದೂರಿನನ್ವಯ 3 ಕೇಸ್ ದಾಖಲಿಸಿ ತನಿಖೆ ನಡೆಯುತ್ತಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.