
ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧದ ಹಿನ್ನೆಲೆ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಈ ನಡುವೆ ಅಜ್ಜಿ ಮೃತಪಟ್ಟಿರುವ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕೂಡ ಕಣ್ಣೀರು ಹಾಕಿದ್ದಾರೆ. ಅಜ್ಜಿ ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ ಕಾರಣ ಮಾಜಿ ಸಂಸದ ಭಾವುಕರಾಗಿದ್ದಾರೆ. ಅಜ್ಜಿಯನ್ನು ನೆನೆದು ಪ್ರಜ್ವಲ್ ಬಿಕ್ಕಿ ಬಿಕ್ಕಿ ಅತ್ತಿದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಸಮೀಪದ ಕ್ಯಾತನಹಳ್ಳಿ ಬಳಿ ಇರುವ ದೇವೇಗೌಡರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನದ ವೇಳೆಗೆ ನಡೆಯಲಿದೆ. ಅಂತಿಮ ವಿಧಿ ವಿಧಾನ ನೆಯಲಿರುವ ಜಾಗದಲ್ಲಿ ನೆಲ ಸಮತಟ್ಟು ಮಾಡುವ ಜೊತೆಗೆ ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ 4 ಸಾವಿರ ಕುರ್ಚಿಗಳನ್ನು ತರಿಸಿ ಸ್ಥಳದಲ್ಲಿ ಹಾಕಲು ವ್ಯವಸ್ಥೆ ನಡೆಯುತ್ತಿದೆ. ಅಂತ್ಯಕ್ರಿಯೆಯಲ್ಲಿ ರಾಜ್ಯದ ವಿವಿಧ ಭಾಗದ ಜನಪ್ರತಿನಿಧಿಗಳು ಭಾಗಿ ಸಾಧ್ಯತೆ ಹಿನ್ನೆಲೆ ಅಗತ್ಯ ತಯಾರಿ ಶುರುವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಂತಿಮ ನಮನ ಸಲ್ಲಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಅವರು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:13 am, Sun, 19 July 26