ಜುಲೈ 18ರಂದು ರಾಷ್ಟ್ರಪತಿ ಚುನಾವಣೆ; ಬಿಜೆಪಿ ಶಾಸಕರು, ಸಚಿವರಿಗೆ ಅಣಕು ಮತದಾನದ ಮೂಲಕ ತರಬೇತಿ
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಇಂದು (ಜುಲೈ 16) ರಾತ್ರಿ ಬಿಜೆಪಿ ಶಾಸಕರು, ಸಚಿವರಿಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭೋಜನಕೂಟ ಏರ್ಪಡಿಸಲಾಗಿದೆ.
ಬೆಂಗಳೂರು: ಜುಲೈ 18ರಂದು ರಾಷ್ಟ್ರಪತಿ ಚುನಾವಣೆ (Presidential Election) ಹಿನ್ನೆಲೆ ಇಂದು (ಜುಲೈ 16) ರಾತ್ರಿ ಬಿಜೆಪಿ (BJP) ಶಾಸಕರು, ಸಚಿವರಿಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭೋಜನಕೂಟ ಏರ್ಪಡಿಸಲಾಗಿದೆ. ರಾತ್ರಿ ಹೋಟೆಲ್ನಲ್ಲೇ ವಾಸ್ತವ್ಯ ಹೂಡುವಂತೆ ಸೂಚಿಸಲಾಗಿದೆ. ನಾಳೆ ಅಣಕು ಮತದಾನದ ಮೂಲಕ ಶಾಸಕರಿಗೆ ತರಬೇತಿ ನೀಡಲಾಗುತ್ತದೆ.
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ: ರಾಜ್ಯಕ್ಕೆ ಬಂತು ಬ್ಯಾಲೆಟ್ ಬಾಕ್ಸ್
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ವಿ.ರಾಘವೇಂದ್ರ, ಬಿ.ಎಸ್.ಮಹಾಲಿಂಗೇಶ್ ನೇತೃತ್ವದ ತಂಡ ದೆಹಲಿಯಿಂದ 8:30 ರ ವಿಮಾನದಲ್ಲಿ ಕೆಐಎಬಿ ಮೂಲಕ ಬೆಂಗಳೂರಿಗೆ ಆಗಮಿಸಿದ್ದು, ಮತದಾನದ ಬ್ಯಾಲೆಟ್ ಪೇಪರ್, ವಿಶೇಷ ಪೆನ್ ಸೇರಿದಂತೆ ಅವಶ್ಯಕ ಸಾಮಾಗ್ರಿಗಳನ್ನು ಬೆಂಗಳೂರಿಗೆ ತಂದಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ವಿಧಾನಸೌಧಕ್ಕೆ ತಲುಪಿದ್ದು, ವಿಧಾನಸೌಧದ ಕೊಠಡಿ ಸಂಖ್ಯೆ 108 ರಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ರಾಷ್ಟ್ರಪತಿ ಚುನಾವಣಾ ಸಹಾಯಕಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು. ಜುಲೈ 18ರಂದು ವಿಧಾನಸೌಧದಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ರಾಜ್ಯದ 224 ಶಾಸಕರು, ಓರ್ವ ಸಂಸದರು ಮತದಾನ ಮಾಡಲಿದ್ದಾರೆ. ಅನಾರೋಗ್ಯದ ಕಾರಣ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಬೆಂಗಳೂರಿನಲ್ಲೇ ಮತದಾನ ಮಾಡಲಿದ್ದಾರೆ.
ಶ್ರೀನಿವಾಸ ಪ್ರಸಾದ್ ಮನವಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅನುಮತಿ ನೀಡಿದೆ. ಉಳಿದ 27 ಸಂಸದರು ದೆಹಲಿಯಲ್ಲಿ ಮತದಾನ ಮಾಡಲಿದ್ದಾರೆ.