ಪೋಷಕರಿಗೆ ಡಬಲ್ ಶಾಕ್: ವಯೋಮಿತಿ ಗೊಂದಲದ ಬೆನ್ನಲ್ಲೇ ಖಾಸಗಿ ಶಾಲೆಗಳ ಶುಲ್ಕ ಭರ್ಜರಿ ಏರಿಕೆ!

ಬೆಂಗಳೂರಿನಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪೋಷಕರು ಕಂಗಾಲಾಗಿದ್ದಾರೆ. ಒಂದೆಡೆ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆಯ ಗೊಂದಲ ಪೋಷಕರನ್ನು ಕಾಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಶಾಲೆಗಳು ಶೇ 5 ರಿಂದ 15 ರಷ್ಟು ಶುಲ್ಕ ಹೆಚ್ಚಳ ಮಾಡಿ ಬರೆ ಎಳೆದಿವೆ.

ಪೋಷಕರಿಗೆ ಡಬಲ್ ಶಾಕ್: ವಯೋಮಿತಿ ಗೊಂದಲದ ಬೆನ್ನಲ್ಲೇ ಖಾಸಗಿ ಶಾಲೆಗಳ ಶುಲ್ಕ ಭರ್ಜರಿ ಏರಿಕೆ!
ಸಾಂದರ್ಭಿಕ ಚಿತ್ರ
Edited By:

Updated on: Mar 31, 2026 | 7:23 AM

ಬೆಂಗಳೂರು, ಮಾರ್ಚ್​ 31: ರಾಜಧಾನಿ ಬೆಂಗಳೂರಿನಲ್ಲಿ (Bangalore) ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಶಾಲಾ ಪ್ರವೇಶದ ವಯೋಮಿತಿ ನಿಯಮದ ಗೊಂದಲದಿಂದ ಸಂಕಷ್ಟದಲ್ಲಿರುವ ಪೋಷಕರಿಗೆ, ಇದೀಗ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿ ಮತ್ತಷ್ಟು ತಲೆನೋವು ತಂದಿವೆ. ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026–27ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಕೆಲವು ಖಾಸಗಿ ಶಾಲೆಗಳು ಆರಂಭಿಸಿವೆ. ಇದೇ ಸಂದರ್ಭದಲ್ಲಿ ಹಲವು ಶಾಲೆಗಳು 5ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಲು ಮುಂದಾಗಿವೆ ಎಂಬ ಆರೋಪ ಪೋಷಕರ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಈ ವರ್ಷ ಸರ್ಕಾರ ಶಾಲಾ ಪ್ರವೇಶಕ್ಕೆ ಕೇವಲ 60 ದಿನಗಳ ವಯೋಮಿತಿ ಸಡಿಲಿಕೆ ನೀಡಿರುವುದು ಕೂಡ ಪೋಷಕರಿಗೆ ಮತ್ತೊಂದು ಸಮಸ್ಯೆಯಾಗಿದೆ. ಕಳೆದ ವರ್ಷ ಇದ್ದಂತೆ 5.5 ವರ್ಷದ ವಯೋಮಿತಿಯನ್ನು ಮುಂದುವರಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಮಕ್ಕಳನ್ನು ಮತ್ತೆ ಯುಕೆಜಿ ತರಗತಿಯನ್ನು ಪುನರಾವರ್ತನೆ ಮಾಡಿಸಬೇಕಾಗಿ ಬರುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಶುಲ್ಕವನ್ನು ಮತ್ತೊಮ್ಮೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಿರುವುದು ಪೋಷಕರಿಗೆ ಇನ್ನಷ್ಟು ಕಷ್ಟ ತಂದಿದೆ. ಕೆಲ ಶಾಲೆಗಳು ಕನಿಷ್ಠ 5ರಿಂದ 10 ಶೇಕಡಾ, ಕೆಲವು ಶಾಲೆಗಳು 10ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಪ್ರತಿ ವರ್ಷವೂ ಖಾಸಗಿ ಶಾಲೆಗಳು ವಿವಿಧ ಕಾರಣಗಳನ್ನು ನೀಡಿ ಶುಲ್ಕ ಹೆಚ್ಚಿಸುತ್ತಿರುವುದರಿಂದ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸಲು ತಮಿಳುನಾಡು ಮಾದರಿಯಂತೆ ಶುಲ್ಕ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪೋಷಕರ ಸಮನ್ವಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಹೊಸ ಸಂಘರ್ಷಕ್ಕೆ ಕಾರಣವಾಯ್ತು ಮಕ್ಕಳ 1ನೇ ಕ್ಲಾಸ್ ಪ್ರವೇಶ ವಯೋಮಿತಿ ಸಡಿಲಿಕೆ

ಒಟ್ಟಾರೆ, ಒಂದೆಡೆ ವಯೋಮಿತಿ ಗೊಂದಲ ಮತ್ತು ಮತ್ತೊಂದೆಡೆ ಖಾಸಗಿ ಶಾಲೆಗಳ ಶುಲ್ಕ ಏರಿಕೆ ಪೋಷಕರಿಗೆ ದೊಡ್ಡ ಸಂಕಷ್ಟವಾಗಿದ್ದು, ಈ ಸಮಸ್ಯೆಗೆ ಸರ್ಕಾರ ಶೀಘ್ರ ಪರಿಹಾರ ಕಂಡುಹಿಡಿಯಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us