
ಬೆಂಗಳೂರು, ನವೆಂಬರ್ 10: ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ದಾಬೋಲ್ಕರ್ ಹತ್ಯೆ ಪ್ರಕರಣಗಳ ಬಗ್ಗೆ ಕೇರಳದಲ್ಲಿ ಮುಸ್ಲಿಂ ಲೀಗ್ ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ವಿಚಾರ ಸಂಬಂಧ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಿಯಾಂಕ್ ಖರ್ಗೆಯವರೇ ಗೌರಿ ಲಂಕೇಶ್ ಮತ್ತು ಪ್ರೊ. ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ದೊರಕಿಸಬೇಕೆಂಬ ಹೋರಾಟವು ರಾಜಕೀಯ ಭಾಷಣ ಮಾಡುವುದಕ್ಕಿಂತ ಹೆಚ್ಚಿನ ಗಂಭೀರತೆ ಮತ್ತು ಬದ್ಧತೆ ನಿರೀಕ್ಷಿಸುತ್ತದೆ. ಕಾನೂನಿನ ಆಳ್ವಿಕೆಗೆ ಅನುಗುಣವಾಗಿ ನ್ಯಾಯ ದೊರಕಿಸುವುದು ಗೃಹ ಸಚಿವರಾಗಿ ನಿಮ್ಮ ಜವಾಬ್ದಾರಿಯೇ ಹೊರತು ರಾಜಕೀಯ ವೇದಿಕೆಗಳಿಂದ ಪೂರ್ವಾಗ್ರಹಪೀಡಿತ ತೀರ್ಪುಗಳನ್ನು ನೀಡುವುದಲ್ಲ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 2018ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, 2022ರಲ್ಲಿ ವಿಚಾರಣೆ ಆರಂಭವಾಗಿದೆ. ಇದೀಗ ಪ್ರಕರಣವು ಏಳನೇ ನ್ಯಾಯಾಧೀಶರ ಮುಂದೆ ವಿಚಾರಣೆಯಲ್ಲಿದೆ. ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರೊ. ಕಲಬುರ್ಗಿ ಪ್ರಕರಣದಲ್ಲಿ, 2026ರ ಸೆಪ್ಟೆಂಬರ್ ವೇಳೆಗೆ 139 ಸಾಕ್ಷಿಗಳ ಪೈಕಿ ಕೇವಲ 33 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಇವು ತೀರ ವಿಳಂಬವಾಗಿದ್ದು, ಇವುಗಳಿಗೆ ಉತ್ತರ ನೀಡಲೇಬೇಕು. ಈ ಹತ್ಯೆಗಳ ಬಳಿಕದ ಬಹುತೇಕ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಎಸ್‌ಐಟಿಗಳನ್ನು ರಾಜ್ಯ ಸರ್ಕಾರವೇ ರಚಿಸಿದ್ದು, ಪರಿಣಾಮಕಾರಿ ವಿಚಾರಣೆಯನ್ನು ಖಚಿತಪಡಿಸುವಲ್ಲಿ ಗೃಹ ಇಲಾಖೆಯ ಪಾತ್ರದ ಬಗ್ಗೆ ಉತ್ತರ ನೀಡಬೇಕಿದೆ.
ಇದಲ್ಲದೆ, ಕರ್ನಾಟಕದ ಹಾಲಿ ಗೃಹ ಸಚಿವರಾಗಿರುವ ನೀವು, “ಕೇಸ್ ನಡೆಯುತ್ತಿದೆ, ಇನ್ನೂ ಆರು ತಿಂಗಳಲ್ಲಿ ಇದನ್ನು ಮುಗಿಸಿ, ಈ ಎಲ್ಲ ಜನರನ್ನು ಜೈಲಿಗೆ ಹಾಕುತ್ತೇನೆ” ಎಂದು ಹೇಳಿರುವುದು, ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಬೇಕು ಎಂಬುದನ್ನು ನೀವು ಸೂಚಿಸುತ್ತಿರುವಂತೆ ಕಾಣುತ್ತದೆ. ನಿಮ್ಮ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ವಿಚಾರಣೆಗಳ ನ್ಯಾಯಸಮ್ಮತತೆ ಮತ್ತು ಸ್ವತಂತ್ರತೆಯ ಬಗ್ಗೆ ಇದು ಗಂಭೀರ ಆತಂಕಗಳನ್ನು ಹುಟ್ಟುಹಾಕುತ್ತದೆ.
ಇದನ್ನೂ ಓದಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಭೇಟಿ ವೇಳೆ ಮಹತ್ವದ ಮಾತುಕತೆ: ಇಲ್ಲಿದೆ ಇನ್ಸೈಡ್ ಮಾಹಿತಿ
ನೀವು “ಸಂಘ”ದ ಬಗ್ಗೆ ಪ್ರಸ್ತಾಪಿಸಿರುವಾಗ, ಈ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿರುವ ಸಂಬಂಧಪಟ್ಟ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ. ನಿಮ್ಮ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಮೂರು ದಿನಗಳೊಳಗೆ ಒದಗಿಸಿ ಅಥವಾ ರಾಜೀನಾಮೆ ನೀಡಿ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆಗಳಿಗಾಗಿ ನಿಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ ಅವರು ಇಂದಿಗೂ ಮಾನನಷ್ಟ ಮೊಕದ್ದಮೆಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳ ಹಿಂದೆ ಸಂಘಪರಿವಾರದೊಂದಿಗೆ ನಂಟು ಹೊಂದಿರುವವರ ಕೈವಾಡವಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಈ ಎರಡೂ ಪ್ರಕರಣಗಳ ತನಿಖೆಯನ್ನು ಸರ್ಕಾರ ಗಂಭೀರವಾಗಿ ಮುಂದುವರಿಸುತ್ತಿದೆ. ಹತ್ಯೆಗಳಿಗೆ ಕಾರಣರಾದವರನ್ನು ಮುಂದಿನ ಆರು ತಿಂಗಳೊಳಗೆ ಬಂಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.