ರೇಸ್ ಕೋರ್ಸ್ ರಸ್ತೆ ಕಾಮಗಾರಿ: 8 ತಿಂಗಳಾದರೂ ಮುಗಿಯದ ಕೆಲಸಕ್ಕೆ ಸಾರ್ವಜನಿಕರ ಹಿಡಿಶಾಪ!

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜಿಬಿಎ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ನಡೆಸುತ್ತಿರುವ ರಸ್ತೆ ಕಾಮಗಾರಿ 8 ತಿಂಗಳಾದರೂ ಮುಗಿದಿಲ್ಲ. ಯಾವುದೇ ಸುರಕ್ಷತಾ ಬ್ಯಾರಿಕೇಡ್ ಅಥವಾ ಸೂಚನಾ ಫಲಕ ಇಲ್ಲದ ಕಾರಣ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.

ರೇಸ್ ಕೋರ್ಸ್ ರಸ್ತೆ ಕಾಮಗಾರಿ: 8 ತಿಂಗಳಾದರೂ ಮುಗಿಯದ ಕೆಲಸಕ್ಕೆ ಸಾರ್ವಜನಿಕರ ಹಿಡಿಶಾಪ!
ರೇಸ್ ಕೋರ್ಸ್ ರಸ್ತೆಯಲ್ಲಿ ಕಾಮಗಾರಿ

Updated on: May 29, 2026 | 12:32 PM

ಬೆಂಗಳೂರು, ಮೇ 29: ನಗರದ ರಸ್ತೆ ಕಾಮಗಾರಿಗಳು ಸಾರ್ವಜನಿಕರ ತಾಳ್ಮೆ ಪರೀಕ್ಷೆ ಮಾಡುವುದು ಹೊಸದೇನಲ್ಲ. ಇದಕ್ಕೆ ಮತ್ತೊಂದು ತಾಜಾ ಸಾಕ್ಷಿ ಬೆಂಗಳೂರಿನ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ರಸ್ತೆ. ಜಿಬಿಎ (GBA) ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇಲ್ಲಿನ ರಸ್ತೆ ಕಾಮಗಾರಿ ಆರಂಭವಾಗಿ ಬರೋಬ್ಬರಿ 8 ತಿಂಗಳು ಕಳೆದರೂ ಇನ್ನು ಪೂರ್ಣಗೊಂಡಿಲ್ಲ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ರೇಸ್ ಕೋರ್ಸ್ ರಸ್ತೆ ಕಾಮಗಾರಿ ಎಂಟು ತಿಂಗಳಾದರೂ ಮುಗಿಯದೆ ಆಮೆಗತಿಯಲ್ಲಿ ಸಾಗುತ್ತಿದೆ.

  • ಯಾವುದೇ ಮುಂಜಾಗ್ರತಾ ಸುರಕ್ಷತಾ ಬ್ಯಾರಿಕೇಡ್‌ಗಳಿಲ್ಲದೆ ನಿರಂತರವಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.

  • ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ.

ಆಮೆಗತಿಯ ಕಾಮಗಾರಿ

ಬೆಂಗಳೂರಿನ ಅತ್ಯಂತ ಪ್ರಮುಖ ಹಾಗೂ ವಿಐಪಿಗಳು ಹೆಚ್ಚಾಗಿ ಓಡಾಡುವ ರೇಸ್ ಕೋರ್ಸ್ ರಸ್ತೆಯ ಸದ್ಯದ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸದಿಂದಾಗಿ ಸಂಚಾರ ಮಾಡುವುದೇ ಸವಾರರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ರಸ್ತೆ ತುಂಬೆಲ್ಲಾ ಹರಡಿರುವ ಧೂಳಿನಿಂದಾಗಿ ಪಾದಚಾರಿಗಳು ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಿರಂತರವಾಗಿ ಸಂಭವಿಸುತ್ತಿವೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಕಾಮಗಾರಿ ತಡವಾಗುತ್ತಿರುವುದು ಒಂದು ಕಡೆಯಾದರೆ, ಗುತ್ತಿಗೆದಾರರು ಮತ್ತು ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಅಗೆತದ ಕೆಲಸ ನಡೆಯುತ್ತಿದ್ದರೂ ರಸ್ತೆಯಲ್ಲಿ ಯಾವುದೇ ರೀತಿಯ ಸುರಕ್ಷತಾ ಬ್ಯಾರಿಕೇಡ್‌ಗಳನ್ನಾಗಲಿ ಅಥವಾ ಸೂಚನಾ ಫಲಕಗಳನ್ನಾಗಲಿ ಅಳವಡಿಸಿಲ್ಲ.

ಅಭಿವೃದ್ಧಿ ಹೆಸರಲ್ಲಿ ಕಾಮಗಾರಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕನಿಷ್ಠ ಪಕ್ಷ ರಾತ್ರಿ ವೇಳೆ ಕಾಣಿಸುವಂತಹ ರಿಫ್ಲೆಕ್ಟಿವ್ ಬ್ಯಾರಿಕೇಡ್‌ಗಳನ್ನು ಹಾಕಬೇಕಲ್ಲವೇ? ಅಧಿಕಾರಿಗಳ ಈ ಉದಾಸೀನತೆ ಜನರ ಪ್ರಾಣಕ್ಕೆ ಸಂಚಕಾರ ತರುತ್ತಿದೆ” ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಆಮೆಗತಿಯ ಕೆಲಸ ಮತ್ತು ಅಧಿಕಾರಿಗಳ ಸುರಕ್ಷತೆಯ ಉದಾಸೀನತೆ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಮಗಾರಿಯನ್ನು ಮುಗಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಅರುಣ್ ಕುಮಾರ್, ಟಿವಿ9, ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us