ಆರ್​ಸಿಬಿಗೆ ಐಪಿಎಲ್ ಟ್ರೋಫಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮಾಚರಣೆ ನೆರವೇರಿದೆ. ವಿವಿಧೆಡೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

ಆರ್​ಸಿಬಿಗೆ ಐಪಿಎಲ್ ಟ್ರೋಫಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ
ಬೆಂಗಳೂರಿನಲ್ಲಿ ಆರ್​​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ
Edited By:

Updated on: Jun 04, 2025 | 6:52 AM

ಬೆಂಗಳೂರು, ಜೂನ್ 4: ಆರ್​ಸಿಬಿ (RCB) ತಂಡ ಚೊಚ್ಚಲ ಐಪಿಎಲ್​​ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳ ಗುಂಪು ಕ್ರೌರ್ಯ ಮೆರೆದಿದೆ. ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿದು ಪರಾರಿಯಾಗಿದೆ.

ಸಂಭ್ರಮಾಚರಣೆ ಮಾಡುತ್ತಾ ದುಷ್ಕರ್ಮಿಗಳು ಬಾರ್​ಗೆ ತೆರಳುತ್ತಿದ್ದರು. ಇದೇ ವೇಳೆ, ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ. ಸ್ಥಳದಲ್ಲಿದ್ದವರ ಪ್ರತಿರೋಧದ ಬಳಿಕ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಆರ್​ಸಿಬಿ ಗೆಲುವಿನ ಜಾತ್ರೆ

ಬಾನಂಗಳದಲ್ಲಿ ಪಟಾಕಿಯಿಂದ ಬೆಳಕಿನ ಚಿತ್ತಾರ, ಮಧ್ಯರಾತ್ರಿ ಆದರೂ ರಸ್ತೆಗಳ ತುಂಬೆಲ್ಲ ಜನ ಸಾಗರ, ಬೀದಿ ಬೀದಿಯಲ್ಲೂ, ದಿಕ್ಕು ದಿಕ್ಕಿನಲ್ಲೂ ಆರ್​ಸಿಬಿ ಆರ್​ಸಿಬಿ ಜಯಘೋಷ, ಈ ದೃಶ್ಯಗಳು ಬೆಂಗಳೂರಿನ ಬಹುತೇಕ ಬೀದಿಗಳಲ್ಲಿ ಸಾಮಾನ್ಯವಾಗಿತ್ತು. ರಾತ್ರಿ ನಗರದಾದ್ಯಂತ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದ್ದಾರೆ. ರಸ್ತೆಗಳ ತುಂಬೆಲ್ಲಾ ಜನ ಕಿಕ್ಕಿರಿದು ಸೇರಿದ್ದರು. ಒಂದೆಡೆ, ಜಯಘೋಷಗಳು ಮೊಳಗುತ್ತಿದ್ದರೆ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರದಿಂದ ಬೆಂಗಳೂರು ಝಗಮಗ ಎನ್ನುತ್ತಿತ್ತು.

ಇದನ್ನೂ ಓದಿ
ಪಂಜಾಬ್ ವಿರುದ್ಧ RCBಗೆ ಗೆಲವು: ಸಿಎಂ ಸೇರಿದಂತೆ ಹಲವು ನಾಯಕರಿಂದ ಅಭಿನಂದನೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!

ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕನ್ನಡದ ಹಾಡುಗಳಿಗೆ ಹುಚ್ಚೆದ್ದು ಸ್ಟೆಪ್ಸ್ ಹಾಕಿದರು. ಆರ್​ಸಿಬಿ ಜಯಘೋಷ ಕಿವಿ ಗಡಚಿಕ್ಕುವಂತಿತ್ತು.

ಎಲೆಕ್ಟ್ರಾನಿಕ್ ಸಿಟಿ, ಚಾಮರಾಜಪೇಟೆಯಲ್ಲೂ ಆರ್​ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಮಧ್ಯರಾತ್ರಿ ಆದರೂ ಅಭಿಮಾನಿಗಳ ಸಾಗರವೇ ರಸ್ತೆಗಳಲ್ಲಿ ತುಂಬಿ ಹೋಗಿತ್ತು.

ಇದನ್ನೂ ಓದಿ: ಪಂಜಾಬ್ ವಿರುದ್ಧ RCBಗೆ ಗೆಲವು: ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರಿಂದ ಅಭಿನಂದನೆಯ ಸುರಿಮಳೆ

ಓರಾಯನ್ ಮಾಲ್ ಆವರಣದಲ್ಲಿ ಎಲ್​​ಇಡಿ ಸ್ಕ್ರೀನ್​ನಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯ ಗೆಲ್ಲುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್

ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆನೇಕಲ್, ಮಾರತ್ತಹಳ್ಳಿ ಸೇರಿದಂತೆ ಹಲವು ಏರಿಯಾಗಳಲ್ಲಿ ಆರ್​​ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗೆದ್ದರು. ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಿಗಟ್ಟಿ ಸಂಭ್ರಮಿಸಿದರು. ಯುವಕರು ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ