ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತಕ್ಕೆ ಕಾರಣ ಬಹಿರಂಗ: ಕುನ್ಹಾ ಸಲ್ಲಿಸಿದ ವರದಿಯಲ್ಲಿದೆ ಸ್ಫೋಟಕ ಅಂಶ
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದ ತನಿಖಾ ವರದಿ ಬಹಿರಂಗವಾಗಿದೆ. ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ವರದಿಯಲ್ಲಿ ಕಾಲ್ತುಳಿತಕ್ಕೆ ಕಾರಣವೇನು ಎಂಬುವುದು ಅಡಕವಾಗಿದೆ. ವರದಿಯಲ್ಲಿ ಸುರಕ್ಷತಾ ಕ್ರಮಗಳಲ್ಲಿನ ಭಾರಿ ಲೋಪಗಳು ಮತ್ತು ಕರ್ತವ್ಯ ಲೋಪಗಳನ್ನು ಬಹಿರಂಗಪಡಿಸಲಾಗಿದೆ. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.

ಬೆಂಗಳೂರು, ಜುಲೈ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ (Chinnaswamy Stadium Stampede)ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ ದುರಂತದ ತನಿಖಾ ವರದಿ ಬಹಿರಂಗವಾಗಿದೆ. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಸ್ಪೋಟಕ ಅಂಶಗಳು ಬಯಲಾಗಿವೆ. ಕಾಲ್ತುಳಿತ ದುರಂತಕ್ಕೆ ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಕಾರಣ ಎಂದು ವರದಿಯಲ್ಲಿದೆ.
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಗೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಈ ಸಂಭ್ರಮ ದುರಂತವಾಗಿ ಮಾರ್ಪಟ್ಟಿತ್ತು. ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ 11 ಜನ ಮೃತಪಟ್ಟಿದ್ದು, 47ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದುರಂತದ ಕಾರಣಗಳನ್ನು ಕಂಡುಹಿಡಿಯಲು ಜಿಲ್ಲಾಧಿಕಾರಿಗಳ ತನಿಖೆ, ಸಿಐಡಿ ತನಿಖೆ, ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಏಕಸದಸ್ಯ ಸಮಿತಿಯನ್ನು ಸರಕಾರ ರಚಿಸಿತ್ತು. ಒಂದು ತಿಂಗಳಲ್ಲಿ ನಿವೃತ್ತ ನ್ಯಾಯಾಧೀಶರಾದ ಮೈಕಲ್ ಡಿ.ಕುನ್ಹಾ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಶುಕ್ರವಾರ ವಿಧಾನಸೌಧದ ಸಿಎಂ ಕಚೇರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರು ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಮುಚ್ಚಿದ ಕಲಕೋಟೆಯಲ್ಲಿ ಸಲ್ಲಿಸಿದರು. ಎರಡು ಸಂಪುಟಗಳಲ್ಲಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗಿದ್ದು, ಕಾಲ್ತುಳಿತ ದುರಂತಕ್ಕೆ ಕಾರಣ ಏನು ಎಂಬದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ವರದಿಯಲ್ಲಿ ಏನಿದೆ?
- ಕಾಲ್ತುಳಿತಕ್ಕೆ ಕೆಎಸ್ ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ನೇರ ಹೊಣೆ.
- ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು.
- ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ.
- ಚಿನ್ನಸ್ವಾಮಿ ಸ್ಟೇಡಿಯಂ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ.
- ಕ್ರೀಡಾಂಗಣದ ಒಳಗೆ 79 ಮಂದಿ ಪೊಲೀಸರು ಮಾತ್ರ ಇದ್ದರು.
- ಹೊರಗೆ ಪೊಲೀಸರು ಇರಲಿಲ್ಲ. ಆಂಬ್ಯುಲೆನ್ಸ್ ಇರಲಿಲ್ಲ.
- 3.25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ 5.30 ರವರೆಗೆ ಪೊಲೀಸ್ ಕಮಿಷನರ್ಗೆ ಮಾಹಿತಿ ಇಲ್ಲ.
- ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು 4 ಗಂಟೆಗೆ
ಹೀಗೆ ಸಾಲು ಸಾಲು ಲೋಪಗಳನ್ನು ನ್ಯಾ.ಕುನ್ಹಾ ತಮ್ಮ ವರದಿಯಲ್ಲಿ ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಿದ್ದಾರೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬಹುದು ಮತ್ತು ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ: ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ
ಸದ್ಯ ವರದಿ ಸರಕಾರದ ಕೈ ಸೇರಿದೆ, ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಚರ್ಚೆ ನಡೆಸಲಾಗುತ್ತೆ. ಈ ಮಧ್ಯೆ ರಾಜ್ಯ ಪೊಲೀಸ್ ಇಲಾಖೆಯು ಜನಸಂದಣಿ ನಿರ್ವಹಣೆಗಾಗಿ ಹೊಸ ಎಸ್‌ಒಪಿ ರೂಪಿಸಿದೆ. ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದೆ. ಈ ವರದಿಗಳ ಶಿಫಾರಸುಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂಬುದು ಕಾದು ನೋಡಬೇಕು. ಜಸ್ಟಿಸ್ ಮೈಕಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳು ಭವಿಷ್ಯದ ದುರಂತಗಳನ್ನು ತಡೆಯುವಲ್ಲಿ ಯಶಸ್ವಿಯಾಗುತ್ತವೆಯೇ? ಜುಲೈ 17ರ ಕ್ಯಾಬಿನೆಟ್ ಸಭೆ ನಂತರ ಉತ್ತರ ಸಿಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Sat, 12 July 25







