ಗಣರಾಜ್ಯೋತ್ಸವ: ಬೆಂಗಳೂರಿನಲ್ಲಿ ಟ್ರಾಫಿಕ್ ಅಲರ್ಟ್, ವಾಹನ ಸವಾರರೇ ಹೊರಡೋದಕ್ಕೂ ಮುನ್ನ ಈ ಮಾಹಿತಿ ತಿಳಿದಿರಿ
Bengaluru Traffic Advisory: ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ರಿಪಬ್ಲಿಕ್ ಡೇ ಸಂಭ್ರಮಕ್ಕೆ ಕರ್ನಾಟಕವೂ ಅಣಿಯಾಗಿದೆ. ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಪರೇಡ್‌ಗೆ ಸಿದ್ಧತೆ ಮಾಡಲಾಗಿದೆ. ಬೆಂಗಳೂರು ನಗರದ ಹಲವೆಡೆ ರಸ್ತೆ ಸಂಚಾರ ಮಾರ್ಗ ಬದಲಿಸಲಾಗಿದೆ. ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ (Republic Day 2026) ಪರೇಡ್‌ಗೆ ಕರ್ನಾಟಕ ಕೂಡ ಸಿದ್ಧವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಪಡೆಗಳ ಪಥಸಂಚಲನಕ್ಕೆ ಮಾಣೆಕ್ ಶಾ ಪರೇಡ್ ಮೈದಾನ ಸಿದ್ಧವಾಗಿದೆ. ಬೆಳಗ್ಗೆ 8.30ರಿಂದ 10.30 ರವರೆಗೆ ಮಾಣೆಕ್ ಶಾ ಮೈದಾನದ ಸುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗಿದೆ.
ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬೆಳಗ್ಗೆ 8.30ರಿಂದ 10.30ರವರೆಗೆ ಮಾಣೆಕ್ ಶಾ ಮೈದಾನದ ಸುತ್ತ ಸಂಚಾರ ನಿರ್ಬಂಧಿಸಲಾಗಿದೆ. ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್‌ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರಿ ಪೊಲೀಸರಿಂದ ಸೂಚಿಸಿದ್ದಾರೆ.
ಪರ್ಯಾಯ ಮಾರ್ಗಗಳು ಯಾವುವು?
ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು, ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು, ಮೈನ್‌ಗಾರ್ಡ್ ರಸ್ತೆ, ಆಲೀಸ್ ಸರ್ಕಲ್, ಡಿಸ್ಸೆನ್ಸರಿ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆಯ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?
ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ
ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಲರ್ ಕೋಡ್‌ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೇಟ್ ನಂಬರ್ 2ರಲ್ಲಿ ತುರ್ತು ಸೇವಾ ವಾಹನಗಳಿಗೆ ಮತ್ತು ಗೇಟ್ 4ರ ಬಳಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ನಡೆಯಲಿದೆ. ಬೆಳಗ್ಗೆ 9ಗಂಟೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. 1 ಸಾವಿರದ 400 ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಪರೇಡ್‌ನಲ್ಲಿ ತಮಿಳುನಾಡು ಪೊಲೀಸರು ಕೂಡ ಭಾಗಿ ಆಗ್ತಿರುವುದು ವಿಶೇಷ. ಇದರ ಜೊತೆಗೆ ಪಥಸಂಚಲನದಲ್ಲಿ ಸೇನೆ, ಏರ್‌ಫೋರ್ಸ್, ಸಿಆರ್‌ಪಿಎಫ್ ಮಹಿಳಾ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ, ಶಾಲಾ ಮಕ್ಕಳು ಭಾಗಿಯಾಗಲಿದ್ದಾರೆ. ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಒಟ್ಟು 1,100 ಜನ ಭಾಗವಹಿಸಲಿದ್ದಾರೆ.
ರಾಜ್ಯಪಾಲರ ಭಾಷಣದ ಬಗ್ಗೆ ಭಾರಿ ಕುತೂಹಲ
ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸುವ ರಾಜ್ಯಪಾಲರು ಭಾಷಣ ಮಾಡಬೇಕಿದೆ. ಇತ್ತೀಚೆಗೆ ಜಂಟಿ ಅಧಿವೇಶನ ಭಾಷಣದ ವಿವಾದದ ಬಳಿಕ ಸರ್ಕಾರ ರಾಜ್ಯಪಾಲರಿಗೆ ಭಾಷಣ ಸಿದ್ಧಪಡಿಸಿ ನೀಡಿದೆ. ಭಾಷಣದಲ್ಲಿ ಯಾವ ಅಂಶಗಳನ್ನ ಉಲ್ಲೇಖಿಸಲಾಗಿದೆ ಎಂಬ ಕುತೂಹಲವಿದೆ. ಸಿಎಂ ಸಿದ್ದರಾಮಯ್ಯ, ನಾವು ಬರೆದುಕೊಟ್ಟ ಭಾಷಣ ಓದುತ್ತಾರಾ ಇಲ್ವಾ ನಮಗೆ ಗೊತ್ತಿಲ್ಲ ಅಂತಾ ಹೇಳಿದ್ದಾರೆ.
ರಾಜ್ಯಪಾಲರ ಭಾಷಣ ಒಂದೆಡೆಯಾದರೆ, ಇನ್ನುಳಿದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಣರಾಜ್ಯೋತ್ಸವ ಸಂಭ್ರಮ ನೆರವೇರಿಸಲಿದ್ದಾರೆ. ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
