ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಪತ್ರ ಬಂದಿದೆ: ಸಚಿವ ಆರ್ ಅಶೋಕ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಬಂದಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ (Chamrajpet) ಈದ್ಗಾ ಮೈದಾನದಲ್ಲಿ (Idgah Maidan) ಗಣೇಶ ಹಬ್ಬ (Ganesh Chaturthi) ಆಚರಣೆಗೆ ನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಬಂದಿದೆ ಎಂದು ಬೆಂಗಳೂರಿನಲ್ಲಿ (Bengaluru) ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದಾದ್ದರಿಂದ ಅಲ್ಲಿ ಏನಾಗಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತೆ ಎಂದರು.
ಬೇರೆ ಯಾರಿಗೂ ಆ ಕುರಿತು ನಿರ್ಧರಿಸಲು ಅಧಿಕಾರ ಇಲ್ಲ. 75 ವರ್ಷದಲ್ಲಿ ಆ ಮೈದಾನದಲ್ಲಿ ಧ್ವಜ ಹಾರಿಸಿರಲಿಲ್ಲ. ಈಗ ನಾನು ಕಂದಾಯ ಸಚಿವನಾದ ಬಳಿಕ ನಾವು ಮೊದಲ ಬಾರಿಗೆ ಧ್ವಜ ಹಾರಿಸಿದ್ದೇವೆ. ಅಲ್ಲಿನ ಸ್ಥಳಿಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಭಿನಂದಿಸಿದರು.
ಸಚಿವ ಮಾಧುಸ್ವಾಮಿ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿ ಅವರು ಆ ತರಹದ ಅರ್ಥದಲ್ಲಿ ಹೇಳಿಲ್ಲ. ಯಾರೋ ಒಬ್ಬ ಅನಾಮಧೇಯ ವ್ಯಕ್ತಿ ಕರೆ ಮಾಡಿದಾಗ ಆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆ ರೀತಿ ಪ್ರತಿಕ್ರಿಯೆ ನೀಡಿದ್ದು ಒಳ್ಳೆಯದಲ್ಲ. ಅವರು ಈಗಾಗಲೇ ನನಗೆ ಆ ರೀತಿ ಭಾವನೆ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆ ಸಿಎಂ ಬೊಮ್ಮಾಯಿ ಅವರ ಜೊತೆ ಕೂಡಾ ಮಾಧುಸ್ವಾಮಿ ಮಾತನಾಡಿದ್ದಾರೆ. ಆ ವಿಷಯವನ್ನು ಇಲ್ಲಿಗೆ ಬಿಡೋಣ. ಮುಸ್ಲಿಂ ಪ್ರದೇಶದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಬೇಕಿತ್ತು ಎಂಬ ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಸ್ಲಿಂ ಏರಿಯಾ ಅಂದರೆ ಅದು ಪಾಕಿಸ್ತಾನಕ್ಕೆ ಸೇರಿದ್ಯಾ? ಮುಸ್ಲಿಮರಿರುವ ಮಾತ್ರಕ್ಕೆ ಪಾಕಿಸ್ತಾನ ಅಂದುಕೊಂಡಿದ್ದಾರಾ? ಎಂದು ವಾಗ್ದಾಳಿ ಮಾಡಿದರು.
ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ವೀರ ಸಾವರ್ಕರ್ ಬ್ರಿಟಿಷರ ಜತೆ ಹೋರಾಟ ಮಾಡಿದ್ದಾರೆ. ಸಾವರ್ಕರ್ ಫೋಟೋ ಹಾಕಲು ಇವರನ್ಯಾಕೆ ಕೇಳಬೇಕು? ವೀರ ಸಾವರ್ಕರ್ ಅವರನ್ನು ಅವರು ಒಪ್ಪದೇ ಇರಬಹುದು. ಆದರೆ ಸಾವರ್ಕರ್ ಒಬ್ಬ ದೇಶಭಕ್ತ ಎಂದು ತಿಳಿಸಿದರು.
ವೀರ್ ಸಾವರ್ಕರ್ ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು. ಅಂಡಮಾನ್ ಜೈಲಿನಲ್ಲಿದ್ದವರು ಯಾರೂ ಬದುಕಿ ಬಂದಿಲ್ಲ. ಒಂದೋ ಖಾಯಿಲೆಯಿಂದ ಸಾಯ್ತಾರೆ ಇಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದಾರೆ. ಇವರ ಲೀಡರ್‌ಗಳಿಗೆ ಅಂತಹ ಶಿಕ್ಷೆ ಯಾಕೆ ಕೊಟ್ಟಿಲ್ಲ? ಟಿಪ್ಪು, ಹೈದರಾಲಿ ಅಂತ ಮೆರೆಯುತ್ತಾರಲ್ಲಾ ಅವರಿಗೆ ಯಾಕೆ ಕರಿನೀರಿನ ಶಿಕ್ಷೆ ನೀಡಿಲ್ಲ? ಎಂದು ಪ್ರಶ್ನಿಸಿದರು.
ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೋಟೊ ಹಾಕಲು ಇವರನ್ನ ಯಾಕೆ ಕೇಳಬೇಕು? ಯಾವ ಯಾವ ಧರ್ಮದವರು ಇದ್ದಾರೆ ಅಂತ ಇವರನ್ನು ಕೇಳಿ ಹಾಕಬೇಕಾ? ಯಾವ ಧರ್ಮ, ಜಾತಿ ಇದ್ದಾರೆ ಅಂತ ನೋಡಿ ಫೋಟೋ ಹಾಕಲು ಸಂವಿಧಾನದ ಅಡಿ ನಿಯಮ ಇದ್ಯಾ? ಸಾವರ್ಕರ್ ಅವರನ್ನು ಅವರು ಒಪ್ಪದೇ ಇರಬಹುದು. ಆದರೆ ಸಾವರ್ಕರ್ ಒಬ್ಬ ದೇಶಭಕ್ತ ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Wed, 17 August 22