ಸ್ವಾತಂತ್ರ್ಯ ದಿನಾಚರಣೆ ವೇಳೆ ಮನೆಗಳಲ್ಲಿ ಹಾರಿಸಿದ ರಾಷ್ಟ್ರಧ್ವಜವನ್ನು ಗೌರವಯುತ ವಿಲೇವಾರಿ ಮಾಡುವ ಅಭಿಯಾನಕ್ಕೆ ಕೈ ಜೋಡಿಸಲು ಕರೆ
ಧ್ವಜ ಸಂಗ್ರಹಿಸುವ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು ಬನಶಂಕರಿ, ಜೆಪಿ ನಗರ, ವಿಜಯನಗರ, ಜಯನಗರ 4ನೇ ಬ್ಲಾಕ್ ಮತ್ತು 9ನೇ ಬ್ಲಾಕ್, ಉತ್ತರಹಳ್ಳಿಯಲ್ಲಿ ಸಂಗ್ರಹ ಮಾಡಲಾಗುತ್ತದೆ.
ಬೆಂಗಳೂರು: ಸ್ವಾತಂತ್ರ್ಯ ದಿನದಂದು(Independence Day) ಮನೆ, ಕಟ್ಟಡ, ಕಚೇರಿ ಹೀಗೆ ಎಲ್ಲೆಡೆ ರಾಷ್ಟ್ರಧ್ವಜ (National Flag) ಹಾರಿಸಲಾಯಿತು. ಧ್ವಜ ಸಂಹಿತೆ (Flag Code) ಪ್ರಕಾರ ಧ್ವಜ ಹಾರಿಸಿದ ನಂತರ ಅದನ್ನು ಗೌರವಯುತವಾಗಿ ವಿಲೇವಾರಿ ಮಾಡಬೇಕು. ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಮಡಚಿ, ಸುರಕ್ಷಿತವಾಗಿರಿಸುವುದು ಕೂಡಾ ರಾಷ್ಟ್ರಧ್ವಜಕ್ಕೆ ನಾವು ತೋರಿಸುವ ಗೌರವ. ಹಾಗಾದರೆ ನಾವು ಬಳಸಿದ ಧ್ವಜವನ್ನು ಏನು ಮಾಡುವುದು ಎಂಬ ಚಿಂತೆಯೇ? ಅದಕ್ಕೂ ಪರಿಹಾರವಿದೆ. ಬಳಸಿದ ರಾಷ್ಟ್ರಧ್ವಜವನ್ನು ಗೌರವಯುತವಾಗಿ ವಿಲೇವಾರಿ ಮಾಡಲು ಬೆಂಗಳೂರು ನಗರದ ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಹರ್ ಘರ್ ತಿರಂಗ (Har Ghar Tiranga) ಅಭಿಯಾನದಡಿ ಅಲ್ಲಲ್ಲಿ ಹಾರಿಸಿದ್ದ ತ್ರಿವರ್ಣ ಧ್ವಜಗಳನ್ನು ಸಂಗ್ರಹಿಸುವುದೇ ಈ ಅಭಿಯಾನದ ಉದ್ದೇಶ. ಈ ಬಗ್ಗೆ ಮಾತನಾಡಿದ ಯೂತ್ ಫಾರ್ ಪರಿವರ್ತನ್ ಸಂಸ್ಥಾಪಕ ಅಮಿತ್ ಅಮರ್ ನಾಥ್, ಜನರಿಗೆ ಮೂಲಭೂತ ನಾಗರಿಕ ಪ್ರಜ್ಞೆಯ ಕೊರತೆ ಇದೆ ಎಂದಿದ್ದಾರೆ. ಒಂದು ದಿನ ಧ್ವಜ ಹಾರಿಸಿ ಗೌರವ ಸೂಚಿಸುತ್ತಾರೆ. ಮರುದಿನ ಅದನ್ನು ರಸ್ತೆಯಲ್ಲಿ ಬಿಸಾಡುತ್ತಾರೆ ಎಂದು ಹೇಳಿದ ಅಮಿತ್, ರಾಷ್ಟ್ರಧ್ವಜದ ಗೌರವಯುತ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ತ್ರಿವರ್ಣ ಧ್ವಜ ರಾಷ್ಟ್ರೀಯ ಗುರುತು ಅದನ್ನು ದಿನವೂ ಗೌರವಿಸಬೇಕು ಎಂದಿದ್ದಾರೆ.
ಧ್ವಜ ಸಂಗ್ರಹಿಸುವ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು ಬನಶಂಕರಿ, ಜೆಪಿ ನಗರ, ವಿಜಯನಗರ, ಜಯನಗರ 4ನೇ ಬ್ಲಾಕ್ ಮತ್ತು 9ನೇ ಬ್ಲಾಕ್, ಉತ್ತರಹಳ್ಳಿಯಲ್ಲಿ ಸಂಗ್ರಹ ಮಾಡಲಾಗುತ್ತದೆ. ಈ ಅಭಿಯಾನಕ್ಕೆ ಕರೆ ನೀಡಿದ ಮೊದಲ ದಿನವೇ ಹಲವಾರು ಕರೆಗಳು ಬಂದಿವೆ ಎಂದು ಪ್ರಸ್ತುತ ಸಂಘಟನೆ ಹೇಳಿದೆ. ಇಂಡಿಯನ್ ಆಯಿಲ್ ಕೂಡಾ ಧ್ವಜ ಸಂಗ್ರಹಣೆ ಶುರು ಮಾಡಿದ್ದು, ಜನರು ಹತ್ತಿರದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ನಲ್ಲಿ ಬಳಸಿದ ಧ್ವಜಗಳನ್ನು ಕೊಡಬಹುದು. ಆದರೆ ಈ ಅಭಿಯಾನ ಬೆಂಗಳೂರಲ್ಲಿ ಇಲ್ಲ, ಮುಂಬೈಯಲ್ಲಿ ಮಾತ್ರ ನಡೆಯುತ್ತಿದೆ ಎಂದು ಹೇಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ನವರು ರಾಷ್ಟ್ರಧ್ವಜವನ್ನು ವಿಲೇವಾರಿಗಾಗಿ ತಂದ ಹಲವರನ್ನು ವಾಪಸ್ ಕಳುಹಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಬಾವುಟವನ್ನು ವಿಲೇವಾರಿ ಮಾಡುವ ಬಗ್ಗೆ ಸರ್ಕಾರ ಹೇಳಿಕೊಡಬೇಕಿತ್ತು ಎಂದಿದ್ದಾರೆ ಅಮಿತ್.
ರಾಷ್ಟ್ರಧ್ವಜವನ್ನು ಹಾರಿಸಲು ಕರೆ ನೀಡುವಾಗಲೇ ಅದನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದನ್ನೂ ಮೊದಲೇ ಹೇಳಿಕೊಡಬೇಕಿತ್ತು ಎಂದಿದ್ದಾರೆ ಅವರು. ಬೀಯಿಂಗ್ ಸೋಷ್ಯಲ್ ಮತ್ತು ನೆಕ್ಸಸ್ ಕೋರಮಂಗಲ ಜಂಟಿಯಾಗಿ ಧ್ವಜ ಸಂಗ್ರಹ ಅಭಿಯಾನ ಶುರು ಮಾಡಿವೆ. ಧ್ವಜ ಸಂಹಿತೆ ಪ್ರಕಾರವೇ ಧ್ವಜವನ್ನು ವಿಲೇವಾರಿ ಮಾಡಬೇಕು. ಜನರು ಇಲ್ಲಿ ಬಂದು ಧ್ವಜಗಳನ್ನು ಕೊಡಬಹುದು ಎಂದು ಬೀಯಿಂಗ್ ಸೋಷ್ಯಲ್ ಸಂಸ್ಥಾಪಕ ಪ್ರವೀಣ್ ಶುಕ್ಲಾ ಹೇಳಿದ್ದಾರೆ. ನಮ್ಮಲ್ಲಿಗೆ ಬರಲು ಸಾಧ್ಯವಾಗದೇ ಇದ್ದರೆ ಕರೆ ಮಾಡಿ, ನಾವು ನಿಮ್ಮ ಮನೆ ಬಾಗಿಲಿಗೆ ಬಂದು ಧ್ವಜ ಸಂಗ್ರಹಿಸುತ್ತೇವೆ. ಅದನ್ನು ನಮ್ಮ ಸ್ವಯಂಸೇವಕರು ನೆಕ್ಸಸ್ ಕೋರಮಂಗಲಕ್ಕೆ ತಲುಪಿಸುತ್ತಾರೆ ಎಂದು ಹೇಳಿದ್ದಾರೆ.