ಡಾಂಬರು, ನಿರ್ಮಾಣ ಸಾಮಗ್ರಿ ಬೆಲೆ ಏರಿಕೆ: 1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರರು

ಬಿಟುಮಿನ್ ಸೇರಿದಂತೆ ಪ್ರಮುಖ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ನಾಗರಿಕ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆ. ಇದರಿಂದ ನಗರದ ರಸ್ತೆ ನವೀಕರಣ ಹಾಗೂ ಅಭಿವೃದ್ಧಿ ಕೆಲಸಗಳಿಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ 'ಸ್ಟಾರ್ ರೇಟ್' ವ್ಯವಸ್ಥೆ ಜಾರಿಗೆ ಸರ್ಕಾರವನ್ನು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ಡಾಂಬರು, ನಿರ್ಮಾಣ ಸಾಮಗ್ರಿ ಬೆಲೆ ಏರಿಕೆ: 1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರರು
1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿ ಸ್ಥಗಿತ

Updated on: Aug 10, 2026 | 1:55 PM

ಮುಖ್ಯಾಂಶಗಳು

  • ನಿರ್ಮಾಣ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ
  • 1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿಗಳು ಸ್ಥಗಿತ
  • ‘ಸ್ಟಾರ್‌ ರೇಟ್‌’ ವ್ಯವಸ್ಥೆ ಜಾರಿಗೆ ಗುತ್ತಿಗೆದಾರರಿಂದ ಆಗ್ರಹ

ಬೆಂಗಳೂರು, ಆಗಸ್ಟ್​​ 10: ಬಿಟುಮಿನ್ (ಡಾಂಬರು) ಸೇರಿದಂತೆ ವಿವಿಧ ನಿರ್ಮಾಣ ಸಾಮಗ್ರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಾಗರಿಕ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಟೆಂಡರ್‌ ಆಗಿರುವ ಕಾಮಗಾರಿಗಳಿಗೂ ‘ಸ್ಟಾರ್‌ ರೇಟ್‌’ ವ್ಯವಸ್ಥೆ ಜಾರಿಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಸಿಟಿ ಕಾರ್ಪೊರೇಷನ್ಸ್‌ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಸರ್ಕಾರವನ್ನು ಒತ್ತಾಯಿಸಿದೆ. ಟೆಂಡರ್‌ ನೀಡಿದ ಸಂದರ್ಭದಲ್ಲಿ ನಿಗದಿಪಡಿಸಿದ ದರದಲ್ಲೇ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಬಿಟುಮಿನ್‌ ಬೆಲೆ ಕ್ವಿಂಟಲ್‌ಗೆ 92,000ಕ್ಕೆ ಏರಿಕೆ

ಅಮೆರಿಕ-ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಬಿಟುಮಿನ್‌ ಬೆಲೆ ಕ್ವಿಂಟಲ್‌ಗೆ 45,000ರಿಂದ 92,000ಕ್ಕೆ ಏರಿಕೆಯಾಗಿದೆ. ಸಿಮೆಂಟ್‌, ಜಲ್ಲಿ, ಉಕ್ಕು ಸೇರಿದಂತೆ ಇತರ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಟೆಂಡರ್‌ ನೀಡಿದ ಸಂದರ್ಭದಲ್ಲಿ ನಿಗದಿಯಾಗಿದ್ದ ದರದಲ್ಲೇ ಕಾಮಗಾರಿ ನಡೆಸುತ್ತಿರುವುದರಿಂದ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಗೆ ಜಿಬಿಎ ನಿಷೇಧ

ಕಾಮಗಾರಿಗಳ ಅನುಷ್ಠಾನ ವಿಳಂಬವಾಗುವುದರಿಂದ ನಗರದಾದ್ಯಂತ ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ರಸ್ತೆ ಗುಂಡಿಗಳ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಡಾಂಬರೀಕರಣ ಕಾಮಗಾರಿಗಳಿಗೆ ಮೂರು ತಿಂಗಳ ಅವಧಿಗೆ ‘ಸ್ಟಾರ್‌ ರೇಟ್‌’ ಜಾರಿಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಆದೇಶಿಸಿದೆ. ಆದರೆ ಈ ದರವನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಜಿಬಿಎ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ ಎಂದು ಸಂಘ ಆರೋಪಿಸಿದೆ. ಅಲ್ಲದೆ, ಸಂಘದ ನಿಯೋಗ ಇತ್ತೀಚೆಗೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದೆ ಎಂದು ನಂದಕುಮಾರ್‌ ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:50 pm, Mon, 10 August 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us