Ganesh Chaturthi 2026: ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಗೆ ಜಿಬಿಎ ನಿಷೇಧ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಪಿಓಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಪರಿಸರ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಕೆರೆ ಹಾಗೂ ಜಲಮೂಲಗಳ ಮಾಲಿನ್ಯ ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ನೈಸರ್ಗಿಕ ಜೇಡಿಮಣ್ಣಿನ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಬಳಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಉಲ್ಲಂಘಿಸಿದರೆ ಕಠಿಣ ಕ್ರಮ ಗ್ಯಾರಂಟಿ.

ಮುಖ್ಯಾಂಶಗಳು
- ಜಿಬಿಎ ವ್ಯಾಪ್ತಿಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ರಾಸಾಯನಿಕ ಬಣ್ಣಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ ಎಂದು ಪರಿಸರ ಇಲಾಖೆ ಆತಂಕ ವ್ಯಕ್ತಪಡಿಸಿದೆ.
- ಸಾರ್ವಜನಿಕರು ಕೇವಲ ಪರಿಸರಸ್ನೇಹಿ ಜೇಡಿಮಣ್ಣಿನ ಗಣಪತಿ ಮೂರ್ತಿಗಳನ್ನು ಬಳಸಲು ಕಟ್ಟುನಿಟ್ಟಿನ ಸೂಚನೆ.
ಬೆಂಗಳೂರು, ಆಗಸ್ಟ್ 10: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜಿಬಿಎ (GBA) ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರಸ್ನೇಹಿ ಹಬ್ಬದ ಆಚರಣೆಗೆ ಕರೆ ನೀಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಿದೆ.
ಪಿಓಪಿ ಮತ್ತು ರಾಸಾಯನಿಕ ಬಣ್ಣಗಳಿಗೆ ಸಂಪೂರ್ಣ ನಿರ್ಬಂಧ
ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP), ಭಾರ ಲೋಹಗಳನ್ನು (Heavy Metals) ಒಳಗೊಂಡ ರಾಸಾಯನಿಕ ಬಣ್ಣಗಳು ಮತ್ತು ಜೈವಿಕ ವಿಘಟನೆಯಾಗದ ಕೃತಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ಜಲಮೂಲಗಳಲ್ಲಿ ಅವುಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಜಲಮೂಲಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಇಂತಹ ವಿಷಕಾರಿ ರಾಸಾಯನಿಕಯುಕ್ತ ಮೂರ್ತಿಗಳನ್ನು ನಗರದ ಕೆರೆ, ಬಾವಿ ಸೇರಿದಂತೆ ಪ್ರಮುಖ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ತೀವ್ರ ಜಲಮಾಲಿನ್ಯ ಉಂಟಾಗುತ್ತಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “ಹಬ್ಬದ ದಿನಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿಗೆ ಬಿಡುವುದರಿಂದ ನೀರು ಮತ್ತು ಭೂಮಿ ಎರಡೂ ಕಲುಷಿತಗೊಳ್ಳುತ್ತಿವೆ. ಇದು ಒಟ್ಟಾರೆ ಪರಿಸರ ವ್ಯವಸ್ಥೆ ಹಾಗೂ ಜಲಚರಗಳಿಗೆ ಭಾರಿ ಹಾನಿ ಉಂಟುಮಾಡುತ್ತಿದೆ,” ಎಂದು ತಿಳಿಸಿದ್ದಾರೆ.
ಪರಿಸರಸ್ನೇಹಿ ಗಣಪತಿ ಬಳಕೆಗೆ ಅಧಿಕಾರಿಗಳ ಮನವಿ
ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು, ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳು ಕೇವಲ ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




