ಬೆಂಗಳೂರಲ್ಲಿ ಸರ್ಕಾರಿ ಅಧಿಕಾರಿಗಳಿಂದ 200 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು
ಬೆಂಗಳೂರಿನಲ್ಲೊಂದು ಬಹುದೊಡ್ಡ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಅಧಿಕಾರಿಗಳಿಂದ 200 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ಲೋಕಾಯುಕ್ತಕ್ಕೆ ಹಾಗೂ ಸಿಎಂಗೆ ದೂರು ಸಲ್ಲಿಸಿದ್ದಾರೆ. ಅವರು ನೀಡಿದ ದೂರಿನಲ್ಲೇನಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ (Bengaluru) ಸರ್ಕಾರಿ ಅಧಿಕಾರಿಗಳು 200 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಉನ್ನತ ಹುದ್ದೆಯಲ್ಲಿರೋ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್ಆರ್ ರಮೇಶ್ ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ನಿಯಮವನ್ನು ಗಾಳಿಗೆ ತೂರಿ ಪ್ರಭಾವಿಗಳಿಗೆ ಸರ್ಕಾರಿ ಜಮೀನು ಮಾರಾಟ ಮಾಡಲಾಗಿದೆ. ಬೆಂಗಳೂರು ಡಿಸಿ ಕಚೇರಿ ಸಹಾಯಕನಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕೆಲ ಭ್ರಷ್ಟ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ADLR ಸಚಿನ್, JDLR ನಿಸ್ಸಾರ್ ಅಹಮದ್, ತಹಶೀಲ್ದಾರ್ ಶ್ರೀನಿವಾಸ್, ವಿಶೇಷ ತಹಶೀಲ್ದಾರ್ ನಾಗರಾಜ್, AC ರಜನೀಕಾಂತ್, RI ನವೀನ್ ವಿರುದ್ಧವೂ ದೂರು ದಾಖಲಾಗಿದೆ. ಸರ್ಕಾರಿ ಜಮೀನು ಕಬಳಿಸಿರುವ ಆರೋಪದಲ್ಲಿ ಎಂ. ಮಂಜುನಾಥ್, ಆರ್. ಶೋಭ ಮಂಜುನಾಥ್, ಉಮೇಶ್ ಬಾಬು ಎಸ್. ಬಿ., ಜಲಜದಾಸ್ ಮತ್ತು ಬಿ. ಕೆ. ರಾಘವೇಂದ್ರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ಮಧುಮೇಹಿಗಳಿಗೆ ಕೆಎಂಎಫ್ ದೀಪಾವಳಿ ಗಿಫ್ಟ್: ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳು ಮಾರುಕಟ್ಟೆಗೆ
ಬೆಂಗಳೂರು ಉತ್ತರಹಳ್ಳಿಯ U.M. ಕಾವಲ್ ನ ಸರ್ವೆನಂ 18 ರಲ್ಲಿರುವ 35 ಎಕರೆ 11 ಗುಂಟೆ ಜಮೀನು ಇದೀಗ ಅಕ್ರಮವಾಗಿ ಖಾಸಗಿ ವ್ಯಕ್ತಿ ಪಾಲಾಗಿದೆ. ಸಂಪೂರ್ಣವಾಗಿ ಸರ್ಕಾರಿ ‘ಎ’ ಮತ್ತು ‘ಬಿ’ ಕರಾಬು ಜಮೀನು ಪ್ರಭಾವಿಗಳ ಪಾಲಾಗಿದೆ. ಪ್ರಸ್ತುತ ಈ ಜಮೀನಿನಲ್ಲಿ ಎರಡು ವರ್ಷದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಪೋಡಿ ಮಾಡಲಾಗಿದೆ. ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಭೂ ಪರಿವರ್ತನೆ ಮಾಡಿಸಿದ್ದರು ಎಂದು ದಾಖಲೆ ಸಮೇತ ಬಿಜೆಪಿ ಮುಖಂಡ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Thu, 16 October 25



