ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆ ದರೋಡೆ: ಒಂದಲ್ಲ ಎರಡಲ್ಲ 3 ತಿಂಗಳು ಸ್ಕೆಚ್ ಹಾಕಿ ಕಳ್ಳತನ ಮಾಡಿದ್ದ ಗ್ಯಾಂಗ್ ಅರೆಸ್ಟ್
Rockline Venkatesh Brother House Robbery: ಸ್ಯಾಂಡಲ್‌ವುಡ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆ ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ತಿಂಗಳಗಳ ಕಾಲ ಸ್ಕೆಚ್ ಹಾಕಿ ಮನೆ ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಗ್ಯಾಂಗ್ ಕಳ್ಳತನ ಮಾಡಲು ಹೇಗೆ ಪ್ಲ್ಯಾನ್ ಮಾಡಿತ್ತು ಎನ್ನುವ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ನವೆಂಬರ್ 28): ಸ್ಯಾಂಡಲ್‌ವುಡ್ ನಿರ್ಮಾಪಕ ಹಾಗೂ ನಟ ರಾಕ್‌ಲೈನ್ ವೆಂಕಟೇಶ್(rockline venkatesh) ಅವರ ಸಹೋದರನ ಮನೆ ಕಳ್ಳತನ ಪ್ರಕರಣವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇದಿಸಿದ್ದು, ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರ ತಮ್ಮ ಭ್ರಮರೇಶ್ ಅವರು ಕುಟುಂಬ ಸಮೇತ ಕಳೆದ ತಿಂಗಳು ಯುರೋಪ್ಗೆ ಪ್ರವಾಸ ಹೋಗಿದ್ದ ವೇಳೆ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಇದೀಗ ಪೊಲೀಸರು, 7 ಆರೋಪಿಗಳ ತಂಡವನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ ಸುಮಾರು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಒಂದಲ್ಲ ಎರಡಲ್ಲ 3 ತಿಂಗಳುಗಳ ಕಾಲ ಸ್ಕೆಚ್
ರಾಕ್‌ಲೈನ್ ವೆಂಕಟೇಶ್ ಅವರ ತಮ್ಮ ಭ್ರಮರೇಶ್ ಅವರ ಮನೆಗೆ ಕನ್ನ ಹಾಕಲು ಈ ನೇಪಾಳಿ ಗ್ಯಾಂಗ್ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ತಿಂಗಳುಗಳ ಕಾಲ ಸ್ಕೆಚ್ ಹಾಕಿತ್ತು ಎಂದು ತಿಳಿದುಬಂದಿದೆ. ಭ್ರಮರೇಶ್ ಅವರ ನಿವಾಸದ ಪಕ್ಕದ ನಿರ್ಮಾಣ ಹಂತದ ಕಟ್ಟಡದಿಂದಲ್ಲಿ ಕುಳಿತುಕೊಂಡು ಮನೆ ದರೋಡೆಗೆ ಪ್ಲ್ಯಾನ್ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ರಾಕ್‌ಲೈನ್ ವೆಂಕಟೇಶ್ ಸೋದರನ ಮನೆಯಲ್ಲಿ 5 ಕೆಜಿ ಚಿನ್ನ ಕಳ್ಳತನ; ದೂರು ದಾಖಲು
ಮೂರು ತಿಂಗಳನಿಂದ ಕಾದ ಈ ನೇಪಾಳಿ ಗ್ಯಾಂಗ್, ಭ್ರಮರೇಶ್ ಅವರು ಕುಟುಂಬ ಅಕ್ಟೋಬರ್ನಲ್ಲಿ ಯೂರೋಪ್ ಪ್ರವಾಸಕ್ಕೆ ಹೋಗುತ್ತಿದ್ದಂತೆಯೇ ಇತ್ತ ಮನೆಗೆ ಕನ್ನ ಹಾಕಿದ್ದು, ಸುಮಾರು 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಇನ್ನು ಪ್ರವಾಸ ಮುಗಿಸಿಕೊಂಡು ಅಕ್ಟೋಬರ್ 30ರಂದು ವಾಪಸ್ ಮನೆಗೆ ಬಂದ ಬಳಿಕ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಭ್ರಮರೇಶ್ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ (Mahalakshmi Layout Police) ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ