ಇಸ್ರೋ ಕ್ಯಾಂಪಸ್ ಮೇಲೆ ಅಪರಿಚಿತರಿಂದ ಡ್ರೋನ್ ಹಾರಾಟ: ಭದ್ರತೆಗೆ ಭಾರೀ ಆತಂಕ

ಬೆಂಗಳೂರಿನ ಇಸ್ರೋ ಐಸೈಟ್ ಕ್ಯಾಂಪಸ್‌ನಲ್ಲಿ ಭದ್ರತಾ ಲೋಪ ಕಂಡುಬಂದಿದ್ದು, ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದಾರೆ. ಸುಮಾರು 100 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ಡ್ರೋನ್ ಪತ್ತೆಯಾದ ಬೆನ್ನಲ್ಲೇ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಿಂದ ಭಾರಿ ಭದ್ರತಾ ಆತಂಕ ವ್ಯಕ್ತವಾಗಿದೆ.

ಇಸ್ರೋ ಕ್ಯಾಂಪಸ್ ಮೇಲೆ ಅಪರಿಚಿತರಿಂದ ಡ್ರೋನ್ ಹಾರಾಟ: ಭದ್ರತೆಗೆ ಭಾರೀ ಆತಂಕ
ಸಾಂದರ್ಭಿಕ ಚಿತ್ರ (AI)
Image Credit source: MediaForge AI
Edited By:

Updated on: May 06, 2026 | 9:35 AM

ಬೆಂಗಳೂರು, ಮೇ 6: ದೇಶದ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಒಂದಾದ ಬೆಂಗಳೂರಿನ (Bengaluru) ಇಸ್ರೋ ಐಸೈಟ್ (ISRO ISITE) ಕ್ಯಾಂಪಸ್ ಬಳಿ ಡ್ರೋನ್ ಹಾರಾಟ ನಡೆಸಿರುವುದು ಈಗ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದು, ಈ ಸಂಬಂಧ ಎಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಾಂಶಗಳು

  • ಮೇ 2ರಂದು ಬೆಳಿಗ್ಗೆ ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ ಸುಮಾರು 12 ಸೆಕೆಂಡ್‌ಗಳ ಕಾಲ ಹಾರಾಡಿದ ಡ್ರೋನ್.
  • ಅನುಮತಿ ಇಲ್ಲದೆ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿರುವುದು ಪತ್ತೆ.
  • ಆಂತರಿಕ ಭದ್ರತೆಯ ದೃಷ್ಟಿಯಿಂದ ಇಸ್ರೋ ಅಧಿಕಾರಿಗಳಿಂದ ಪೊಲೀಸರಿಗೆ ದೂರು ಸಲ್ಲಿಕೆ.

ಇಸ್ರೋ ಐಸೈಟ್ ಕ್ಯಾಂಪಸ್ ಬಳಿ ನಡೆದಿದ್ದೇನು?

ಸಿಐಎಸ್‌ಎಫ್ (CISF) ಯುನಿಟ್‌ನ ಸಬ್ ಇನ್ಸ್‌ಪೆಕ್ಟರ್ ಅವರು ನೀಡಿರುವ ದೂರಿನ ಪ್ರಕಾರ, ಮೇ 2, 2026ರಂದು ಬೆಳಿಗ್ಗೆ ಸುಮಾರು 8:16 ಗಂಟೆಗೆ ಬೆಂಗಳೂರಿನ ಇಸ್ರೋ ಐಸೈಟ್ ಕ್ಯಾಂಪಸ್ ಮೇಲ್ಭಾಗದಲ್ಲಿ ಈ ಡ್ರೋನ್ ಹಾರಾಟ ಕಂಡುಬಂದಿದೆ. ‘ನೋ ಡ್ರೋನ್ ಝೋನ್’ ಎಂದು ಗುರುತಿಸಲ್ಪಟ್ಟಿರುವ ಈ ಪ್ರದೇಶದಲ್ಲಿ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿದೆ. ಸುಮಾರು 10 ರಿಂದ 12 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ಡ್ರೋನ್, ತದನಂತರ ಕಣ್ಮರೆಯಾಗಿದೆ.

ಭದ್ರತೆಗೆ ಭಾರೀ ಆತಂಕ

ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸಂವೇದನಾಶೀಲ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಅನುಮತಿ ಇಲ್ಲದೆ ವೈಮಾನಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇಂತಹ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿರುವುದು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ

ನಿಷೇಧಿತ ಪ್ರದೇಶವೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಅಥವಾ ಕಾನೂನು ಉಲ್ಲಂಘಿಸಿ ಡ್ರೋನ್ ಹಾರಿಸಿದ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಐಎಸ್‌ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಸದ್ಯ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡ್ರೋನ್ ಹಾರಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Wed, 6 May 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us