AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಂಡ ಬಿಎಂಟಿಸಿ! ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿ

ಮಹಿಳೆಯರಿಗೆ ಅನುಕೂಲವಾಗಲಿ ಎಂದು ಜಾರಿಯಾದ ಶಕ್ತಿ ಯೋಜನೆಯಿಂದ ಬಿಎಂಟಿಸಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಮಹಿಳೆಯರ ಉಚಿತ ಪ್ರಯಾಣದಿಂದ ಸರ್ಕಾರದಿಂದ 850 ಕೋಟಿ ರೂ. ಬಾಕಿ ಇದೆ. ಇಂಧನ ಬೆಲೆ ಏರಿಕೆ, ಸಿಬ್ಬಂದಿ ವೇತನ ಹಾಗೂ ನಿರ್ವಹಣಾ ವೆಚ್ಚಗಳು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ ಎಂದು ತಿಳಿದುಬಂದಿದೆ.

ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಂಡ ಬಿಎಂಟಿಸಿ! ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿ
ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಂಡ ಬಿಎಂಟಿಸಿ! ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿ Image Credit source: Deccan herald
ಭಾವನಾ ಹೆಗಡೆ
|

Updated on: Mar 30, 2026 | 10:35 AM

Share

ಬೆಂಗಳೂರು, ಮಾರ್ಚ್​ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಶಕ್ತಿ ಯೋಜನೆಯ ಪರಿಣಾಮವಾಗಿ ಗಂಭೀರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಈ ಯೋಜನೆಗಾಗಿ ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿಯಾಗಿದ್ದು, ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಹೆಚ್.ಎಸ್ ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಬಹಿರಂಗವಾಗಿದೆ.

ಶಕ್ತಿ ಯೋಜನೆ ಆರಂಭವಾದ ನಂತರದಿಂದ ಫೆಬ್ರವರಿ 2026ರವರೆಗೆ ರಾಜ್ಯದಾದ್ಯಂತ ಮಹಿಳೆಯರು ಒಟ್ಟು 680.87 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪ್ರಯಾಣಗಳನ್ನು ಮಾಡಿದ್ದಾರೆ. ಇದರಲ್ಲೂ BMTC ಪಾಲು 217.62 ಕೋಟಿ ರೂಪಾಯಿಯಷ್ಟಿದೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಯೋಜನೆಯ ವೆಚ್ಚವೂ ಏರಿಕೆಯಾಗುತ್ತಿದೆ. ಆದರೆ ಸರ್ಕಾರದಿಂದ ಆಗುತ್ತಿರುವ ಪರಿಹಾರ ಮೊತ್ತವು ಅದರ ಅನುಪಾತದಲ್ಲಿ ಹೆಚ್ಚಳ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಯೋಜನೆಗಾಗಿ ಸರ್ಕಾರದಿಂದ 3,097.27 ಕೋಟಿ ರೂ. ಸಂದಾಯವಾಗಬೇಕಿತ್ತು. ಆದರೆ ಸಧ್ಯಕ್ಕೆ ಕೇವಲ 2,247.35 ಕೋಟಿ ರೂ. ಮಾತ್ರ ಪರಿಹಾರವಾಗಿ ಲಭ್ಯವಾಗಿದ್ದು, ಸುಮಾರು 850 ಕೋಟಿ ರೂ. ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.

ನಿರ್ವಹಣಾ ವೆಚ್ಚ ಹೆಚ್ಚಾಗಿ ಪೇಚಾಟ

ಅದಲ್ಲದೆ ಶಕ್ತಿ ಯೋಜನೆ ಜಾರಿಗೂ ಮೊದಲೇ ಬಿಎಂಟಿಸಿ 1,383.86 ಕೋಟಿ ರೂಪಾಯಿಯಷ್ಟು ಕೊರತೆಯಿತ್ತು ಎಂಬುದು ತಿಳಿದುಬಂದಿದೆ. ಇಂಧನ ಕಂಪನಿಗಳಿಗೆ ಬಾಕಿ ಪಾವತಿಗಳು, ಭವಿಷ್ಯ ನಿಧಿ (PF) ಬಾಧ್ಯತೆಗಳು ಮತ್ತು ಪೂರೈಕೆದಾರರಿಗೆ ಕೊಡಬೇಕಾದ ಹಣಗಳು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿವೆ. ನಂತರದ ಅವಧಿಯಲ್ಲಿ ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಪರಿಷ್ಕರಣೆ ಹಾಗೂ ನಿರ್ವಹಣಾ ವೆಚ್ಚಗಳ ಹೆಚ್ಚಳದಿಂದ ಭಾರ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಈ ಸವಾಲುಗಳನ್ನು ಮನಗಂಡ ರಾಜ್ಯ ಸರ್ಕಾರವು ಪ್ರತಿ ತಿಂಗಳೂ ಶಕ್ತಿ ಯೋಜನೆಯಡಿ ಮುಂಗಡ ಹಣ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. 2026ರ ಮಾರ್ಚ್ ತನಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಬಿಎಂಟಿಸಿ ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಲು ಸರ್ಕಾರವು 589.20 ಕೋಟಿ ರೂ. ಸಾಲವನ್ನು ಪಡೆಯಲು ಅನುಮತಿ ನೀಡಿದ್ದು, ಅದರ ಮರುಪಾವತಿಗೆ ಬಜೆಟ್ ಸಹಾಯವನ್ನು ಒದಗಿಸುತ್ತಿದೆ.

ಇದನ್ನೂ ಓದಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ!

ಹೆಚ್ಚುವರಿ ಬಸ್ಸುಗಳ ಖರೀದಿ

ಅಲ್ಲದೆ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಪಿಎಂ ಇ-ಡ್ರೈವ್ ಸ್ಕೀಮ್ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ 2026–27ರ ಬಜೆಟ್‌ನಲ್ಲಿ ಹೆಚ್ಚುವರಿ 1,000 ಡೀಸೆಲ್ ಬಸ್ಸುಗಳ ಖರೀದಿ ಘೋಷಿಸಲಾಗಿದೆ.

ಒಟ್ಟಾರೆ, ಶಕ್ತಿ ಯೋಜನೆ ಮಹಿಳೆಯರ ಸಾರ್ವಜನಿಕ ಸಾರಿಗೆ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಿದರೂ, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಪ್ರಯಾಣಿಕರ ಸಂಖ್ಯೆಯ ಏರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳ ಹೆಚ್ಚಳ ನಡುವೆಯೂ ಸಮರ್ಪಕ ಪರಿಹಾರ ದೊರೆಯದಿದ್ದರೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us