ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾಮ್​​: BMTCಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಾಲ್ವರು ನೌಕರರು ಸಸ್ಪೆಂಡ್​​

ಬಿಎಂಟಿಸಿಯ ಕೆಲ ನಿರ್ವಾಹಕರು ಶಕ್ತಿ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಟಿಕೆಟ್ ನೀಡಿದ್ದಾರೆ. ಅಲ್ಲದೆ, ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿ ನಿಗಮಕ್ಕೆ ಬರಬೇಕಿದ್ದ ಹಣವನ್ನು ಲಪಟಾಯಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾದ ನಾಲ್ವರು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದ್ದು, ಲಕ್ಷಾಂತರ ರೂಪಾಯಿ ವಂಚನೆ ಬಯಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾಮ್​​: BMTCಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಾಲ್ವರು ನೌಕರರು ಸಸ್ಪೆಂಡ್​​
ನಾಲ್ವರ ಅಮಾನತು ಆದೇಶ
Image Credit source: Tv9 Kannada
Edited By:

Updated on: Apr 12, 2026 | 1:31 PM

ಬೆಂಗಳೂರು, ಏಪ್ರಿಲ್​​ 12: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ನೌಕರು ಮಾತ್ರ ಅನ್ನ ತಿಂದ ಮನೆಗೆ ಕನ್ನ ಹಾಕೋ ಕೆಲಸ ಮಾಡುತ್ತಿದ್ದಾರೆ. ಕನ್ನಡ ಬಾರದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಟಿಕೆಟ್​​ ನೀಡಿ ದುಡ್ಡು ಮಾಡ್ತಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ಯುಪಿಐ ಕ್ಯೂಆರ್​ ಕೋಡ್​​ಗಳನ್ನು ಅಳವಡಿಸಿದೆ. ಇದನ್ನು ಸ್ಕ್ಯಾನ್​​ ಮಾಡಿ ಟಿಕೆಟ್​​ ಹಣ ಪಾವತಿಸುವಂತೆ ಪ್ರಯಾಣಿಕರಿಗೆ ಸೂಚಿವ ಬದಲು, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಮಾಹಿತಿ ನೀಡಿ ದುಡ್ಡು ಪೀಕುವ ಕೆಲಸಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆ ನಿಗಮಕ್ಕೆ ಸೇರಬೇಕಿದ್ದ ಲಕ್ಷ ಲಕ್ಷ ಹಣ ತಮ್ಮ ಜೇಬಿಗೆ ಇಳಿಸಿಕೊಂಡಿದ್ದ ನಾಲ್ಕು ಜನ ಕಿಲಾಡಿ ಕಂಡಕ್ಟರ್​​ಗಳನ್ನೀಗ ಮನೆಗೆ ಕಳುಹಿಸಲಾಗಿದೆ.

ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್​​ ನೀಡ್ತಿದ್ದಿದ್ದು ಹೇಗೆ?

ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡಿ ಅವರಿಗೆ ಟಿಕೆಟ್​​ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್​​ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.

ಇದನ್ನೂ ಓದಿ: BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್

ಕಂಡಕ್ಟರ್​​ಗಳು ಪೀಕಿರುವ ಹಣ ಎಷ್ಟು?

  • ಸೂರ್ಯನಾರಾಯಣ- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್ : 54,290 ರೂ.
  • ಬೊಮ್ಮಲಿಂಗೇಶ್ ಸಿ.-  ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 16,404 ರೂ.
  • ಬ್ರಿಜೇಶ್ ಬಾಬು- ಡಿಪೋ- 51, ಡ್ರೈವರ್ ಕಂ ಕಂಡಕ್ಟರ್: 9,795 ರೂ.
  • ಮೋಹನ್- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 6,117 ರೂ.

ಇನ್ನು ಈ ಕಿಲಾಡಿ ಕಂಡಕ್ಟರ್ಗ​​ಳು ಡಿಪೋದಿಂದ ಬಸ್​​ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್​​ ಕೋಡ್​​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕೇಳಿದಾಗ, ತಮ್ಮ ಮೊಬೈಲ್​​ನಲ್ಲಿರುವ ಸ್ವಂತ ಅಕೌಂಟ್​​ನ ಕ್ಯೂಆರ್​​ ಕೋಡ್​​ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್​​ಗಳು ತಗ್ಲಾಕೊಂಡಿದ್ದು, ಪ್ರತಿಯೊಬ್ಬರ ಅಕೌಂಟ್ ನಲ್ಲಿ 10ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರೋದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮನೆಗೆ ಹೋಗೋದು ಫಿಕ್ಸ್​​ ಎನ್ನಲಾಗಿದೆ. ಇಂತಹುದೇ ಘಟನೆ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 7:11 am, Sun, 12 April 26

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us