ಮಹತ್ವದ ನಿರ್ಧಾರಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡಿಗೆ ಬುಲಾವ್ ನೀಡಿದ ಹೈಕಮಾಂಡ್

ಸಿಎಂ ಅಭ್ಯರ್ಥಿ ಅಲ್ಲದೇ ಹೋದರೆ ಕೇವಲ ಶಾಸಕರಾಗಿ ಇನ್ನೇನು ಮಾಡುವುದಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರು ವರಿಷ್ಠರ ಬಳಿ ವಾದ ಮಾಡಿದ್ದಾರೆ. ಇನ್ನು ತಾನು ಕೂಡ ಪಕ್ಷಕ್ಕಾಗಿ, ಗಾಂಧಿ ಪರಿವಾರಕ್ಕಾಗಿ ಕೆಲಸ ಮಾಡಿದ್ದೀನಿ ಎಂದು ಡಿಕೆ ಶಿವಕುಮಾರ್ ವಾದಿಸಿದ್ದಾರೆ. ಗಾಂಧಿ ಕುಟುಂಬ ಏನು ಸೂಚಿಸುತ್ತದೋ ಅದನ್ನೇ ಚಾಚೂ ತಪ್ಪದೇ ಪಾಲಿಸುತ್ತಿನಿ ಎಂದಿದ್ದಾರೆ.

ಮಹತ್ವದ ನಿರ್ಧಾರಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡಿಗೆ ಬುಲಾವ್ ನೀಡಿದ ಹೈಕಮಾಂಡ್
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
TV9kannada Web Team

| Edited By: Ayesha Banu

Jun 27, 2022 | 9:44 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನಾಳೆ ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು(Rahul Gandhi) ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯ ಜೊತೆ ಡಿ.ಕೆ.ಶಿವಕುಮಾರ್ರನ್ನೂ(DK Shivakumar) ಹೈಕಮಾಂಡ್ ಬುಲಾವ್ ಕೊಟ್ಟಿದೆ. ಹೀಗಾಗಿ ಇಬ್ಬರು ನಾಯಕರು ದೆಹಲಿಗೆ ಹಾರಲಿದ್ದು ನಾಳೆ ಮಧ್ಯಾಹ್ನ 3 ಗಂಟೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.

ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ನಾಯಕರ ಜತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ. ಭಾರತ್ ಜೋಡೋ ಯಾತ್ರೆ ಹೊರತಾಗಿ ರಾಜ್ಯ ರಾಜಕಾರಣದ ಬಗ್ಗೆ, ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಹೈಕಮಾಂಡ್ ಮುಂದೆ ಸಿಎಂ‌ ಅಭ್ಯರ್ಥಿ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಬಣ ವಾದ ಮಂಡಿಸಿದೆ. ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡದಿದ್ದರೆ ಸಿದ್ದರಾಮಯ್ಯ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಸಿಎಂ ಅಭ್ಯರ್ಥಿ ಅಲ್ಲದೇ ಹೋದರೆ ಕೇವಲ ಶಾಸಕರಾಗಿ ಇನ್ನೇನು ಮಾಡುವುದಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರು ವರಿಷ್ಠರ ಬಳಿ ವಾದ ಮಾಡಿದ್ದಾರೆ. ಇನ್ನು ತಾನು ಕೂಡ ಪಕ್ಷಕ್ಕಾಗಿ, ಗಾಂಧಿ ಪರಿವಾರಕ್ಕಾಗಿ ಕೆಲಸ ಮಾಡಿದ್ದೀನಿ ಎಂದು ಡಿಕೆ ಶಿವಕುಮಾರ್ ವಾದಿಸಿದ್ದಾರೆ. ಗಾಂಧಿ ಕುಟುಂಬ ಏನು ಸೂಚಿಸುತ್ತದೋ ಅದನ್ನೇ ಚಾಚೂ ತಪ್ಪದೇ ಪಾಲಿಸುತ್ತಿನಿ ಎಂದಿದ್ದಾರೆ. ಚುನಾವಣೆಗೆ 6 ತಿಂಗಳು ಮೊದಲೇ ನಾಯಕತ್ವ ಘೋಷಣೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಸ್ಥಳೀಯ ನಾಯಕರು ತೀವ್ರ ಒತ್ತಡ ಹೇರಿದ್ದಾರೆ. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ನಾಳೆ ರಾಜ್ಯ ನಾಯಕರ ಜೊತೆ ರಾಹುಲ್ ಗಾಂಧಿ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಈ ಮೀನು ಮಾರಾಟವಾಗಿದ್ದು ಬರೋಬ್ಬರಿ 13 ಲಕ್ಷ ರೂಪಾಯಿಗೆ! ಇದರ ದರ ಯಾಕಿಷ್ಟು ದುಬಾರಿ? ಇಲ್ಲಿದೆ ಮಾಹಿತಿ

ಸಿಎಂ ಅಭ್ಯರ್ಥಿ ಘೋಷಿಸಲು ಸಿದ್ದು ಬಣ ಒತ್ತಡ ಕಳೆದ ಕೆಲ ದಿನಗಳ‌ ಹಿಂದೆಯೇ ರಾಹುಲ್ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಬಣ ಮುಂದಾಗಿತ್ತು. ಸಿದ್ದರಾಮಯ್ಯರನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಡ ಹೇರಲು ನಿರ್ಧಾರ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಘೋಷಣೆ ಮಾಡದೇ ಇದ್ದರೆ ಪಕ್ಷಕ್ಕೆ ಮತ ಬರೊಲ್ಲ ಎಂದು ಸಿದ್ದು ಬೆಂಬಲಿಗರು ವಾದ ಮಾಡಿದ್ದಾರೆ. ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ರೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ಪಕ್ಷಕ್ಕಾಗಿ ದುಡಿಯಲಿದ್ದಾರೆ ಎಂದು ಬೆಂಬಲಿಗರು ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಪಕ್ಷ ಬಿಡೋಲ್ಲ ಆದರೆ ಚುನಾವಣೆ ಎದುರಿಸೋಲ್ಲ ಈ ಮೂಲಕ ಪರೋಕ್ಷವಾಗಿ ಹೈಕಮಾಂಡ್ ಮೇಲೆ‌ ಒತ್ತಡ ಹೇರಲು ತಂತ್ರ ರೂಪಿಸಲಾಗಿದೆ.

ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಲಿಂಗಾಯಿತ ಒಕ್ಕಲಿಗ ಮತ ಬರೋಲ್ಲ ಎಂಬುದು ಡಿಕೆ ಶಿವಕುಮಾರ್ ಹಾಗೂ ಮೂಲ ಕಾಂಗ್ರೆಸ್ಸಿಗರ ವಾದ. ದಲಿತ ನಾಯಕರು ಸಹ ಪಕ್ಷಕ್ಕಾಗಿ ಕೆಲಸ ಮಾಡೋಲ್ಲ. ಹೀಗಾಗಿ ಸಾಮೂಹಿಕ ನಾಯಕತ್ವಕ್ಕೆ‌ ಮನ್ನಣೆ ನೀಡುವಂತೆ ಸಲಹೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣವನ್ನ ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ ಒಂದಾಗಿಸಿದ ಬಳಿಕ‌ ತಿಕ್ಕಾಟ ತಣ್ಣಗಾಗಿತ್ತು. ಆದ್ರೆ ಈಗ ಘರ್ಷಣೆ ಇಲ್ಲದೇ ಇದ್ದರೂ ಎಲ್ಲವನ್ನು ಮುಕ್ತವಾಗಿ ಚರ್ಚಿಸಲು ರಾಹುಲ್ ಗಾಂಧಿ ನಿರ್ಧಾರ ಮಾಡಿದ್ದಾರೆ. ಚುನಾವಣೆ ಸಮೀಪಿಸುವ ಮುನ್ನವೇ ಎಲ್ಲಾ ಗೊಂದಲ ನಿವಾರಿಸಲು ರಾಹುಲ್ ಮುಂದಾಗಿದ್ದು ಇದಕ್ಕಾಗಿ ಉಭಯ ನಾಯಕರ ಜೊತೆ ಮಾತುಕತೆ ನಡೆಸಲು ದೆಹಲಿಗೆ ಕರೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada