ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆಗೆ ಇಳಿಯಲಿವೆ 2866 ಹೊಸ ವಾಹನಗಳು

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಆತಂಕಕಾರಿ ಮಟ್ಟದಲ್ಲಿದ್ದು, ಪ್ರತಿದಿನ 2,866 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ರಾಜ್ಯದ ಒಟ್ಟು 3.4 ಕೋಟಿ ವಾಹನಗಳಲ್ಲಿ 1.22 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ರಸ್ತೆ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚು ವಾಹನಗಳಿಂದ ಟ್ರಾಫಿಕ್ ಸಮಸ್ಯೆ ಜಟಿಲವಾಗಿದೆ. ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ ಮೆಟ್ರೋ, ಬಿಎಂಟಿಸಿ ಬಳಸಲು ತಜ್ಞರ ಸಲಹೆ ನೀಡಿದ್ದಾರೆ.

ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆಗೆ ಇಳಿಯಲಿವೆ 2866 ಹೊಸ ವಾಹನಗಳು
ಸಾಂದರ್ಭಿಕ ಚಿತ್ರ
Edited By:

Updated on: Apr 26, 2026 | 11:03 PM

ಬೆಂಗಳೂರು, ಏ.26: ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾಡುವುದು ಅಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಈಗಾಗಲೇ ವಿಶ್ವದ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದೆ. ನಗರದ ಸಂಚಾರ ದಟ್ಟಣೆಗೆ ತುಪ್ಪ ಸುರಿಯುವಂತೆ ಪ್ರತಿದಿನ ಸಾವಿರಾರು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರತಿದಿನ 2,866 ಹೊಸ ವಾಹನಗಳ ಸೇರ್ಪಡೆಯಾಗುತ್ತಿದೆ.

ಪ್ರತಿದಿನ 1,910 ಹೊಸ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತಿದೆ. ಪ್ರತಿದಿನ 564 ಹೊಸ ಕಾರುಗಳು ಬರುತ್ತಿದೆ. ಕಳೆದ 7 ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 3.40 ಕೋಟಿ ವಾಹನಗಳಿದ್ದರೆ, ಅದರಲ್ಲಿ ಸಿಂಹಪಾಲು ಅಂದರೆ ಬರೋಬ್ಬರಿ 1 ಕೋಟಿ 22 ಲಕ್ಷ ವಾಹನಗಳು ಬೆಂಗಳೂರಿನಲ್ಲಿಯೇ ಇವೆ. ಅಕ್ಕಪಕ್ಕದ ಜಿಲ್ಲೆ ಹಾಗೂ ಹೊರರಾಜ್ಯದ ವಾಹನಗಳನ್ನು ಸೇರಿಸಿದರೆ ಪ್ರತಿದಿನ ನಗರದ ರಸ್ತೆಗಳಲ್ಲಿ ಸುಮಾರು ಒಂದೂವರೆ ಕೋಟಿ ವಾಹನಗಳು ಸಂಚರಿಸುತ್ತಿವೆ. ಕೇವಲ 40 ಸಾವಿರ ವಾಹನಗಳು ಓಡಾಡಬೇಕಾದ ಸಾಮರ್ಥ್ಯವಿರುವ ರಸ್ತೆಗಳಲ್ಲಿ ಕೋಟಿಗೂ ಅಧಿಕ ವಾಹನಗಳು ಜಿಗಿಯುತ್ತಿರುವುದು ಟ್ರಾಫಿಕ್ ಸಮಸ್ಯೆಯನ್ನು ಜಟಿಲಗೊಳಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ‘ಅಂಬಾರಿ’ ದರ್ಬಾರ್: ಬಿಸಿಲಲ್ಲೂ ಡಬಲ್ ಡೆಕ್ಕರ್ ಬಸ್ ಏರಿ ಸಿಟಿ ಬ್ಯೂಟಿ ನೋಡಲು ಜನವೋ ಜನ!

“ಇದೇ ವೇಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದರೆ ಮುಂದಿನ ಮೂರು ವರ್ಷಗಳಲ್ಲಿ ಕೇವಲ ದ್ವಿಚಕ್ರ ವಾಹನಗಳ ಸಂಖ್ಯೆಯೇ ಒಂದು ಕೋಟಿ ದಾಟಲಿದೆ” ಎಂದು ಟ್ರಾಫಿಕ್ ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ (BMTC) ಮತ್ತು ಮೆಟ್ರೋ (Namma Metro) ಬಳಸಬೇಕು ಎಂದು ಸಲಹೆ ನೀಡಿದ್ದಾರೆ.ಈಗಾಗಲೇ ಟ್ರಾಫಿಕ್ ಕಿರಿಕಿಯಿಂದ ಹೈರಾಣಾಗಿರುವ ಬೆಂಗಳೂರಿಗರಿಗೆ ಪ್ರತಿದಿನ ರಸ್ತೆಗಿಳಿಯುವ ಈ 3 ಸಾವಿರ ಹೊಸ ವಾಹನಗಳು ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:20 pm, Sun, 26 April 26

Follow Us