BBMP: ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 60 ವರ್ಷದ ರಾಮಯ್ಯ ಎನ್ನುವವರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದಿದೆ. ಈ ಪರಿಣಾಮ ರಾಮಯ್ಯ ದೇಹ ಛಿದ್ರಛಿದ್ರವಾಗಿದೆ. ಸ್ಥಳಕ್ಕೆ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಹೆಬ್ಬಾಳದ ಅಕ್ಷಯಾ ಸಾವು ಮಾಸುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿಯಾಗಿದೆ. ಲಾರಿ ಹರಿದು ಬೈಕ್ನಲ್ಲಿ ತೆರಳುತ್ತಿದ್ದ ರಾಮಯ್ಯ(60) ಮೃತಪಟ್ಟಿದ್ದಾರೆ. ಬಾಗಲೂರು ಕ್ರಾಸ್ ಬಳಿಯ ರೇವಾ ವಿವಿ ಮುಂದೆ ಅಪಘಾತ ಸಂಭವಿಸಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 60 ವರ್ಷದ ರಾಮಯ್ಯ ಎನ್ನುವವರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದಿದೆ. ಈ ಪರಿಣಾಮ ರಾಮಯ್ಯ ದೇಹ ಛಿದ್ರಛಿದ್ರವಾಗಿದೆ. ಸ್ಥಳಕ್ಕೆ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿದ್ದು ವೃದ್ಧ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಲಾರಿ ಹರಿದಿದೆ. ಈ ಪರಿಣಾಮ ರಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮಯ್ಯ ಮೃತ ದೇಹ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಪಿಗೆಹಳ್ಳಿ ನಿವಾಸಿಯಾಗಿರುವ ರಾಮಯ್ಯ, ಸಂಬಂಧಿಕರ ಮನೆ ಕಾರ್ಯಕ್ರಮದ ನಿಮಿತ್ತ ಸಾತನೂರಿಗೆ ತೆರಳಿದ್ದರು. ಸಂಪಿಗೆಹಳ್ಳಿಯ ಮನೆಗೆ ವಾಪಸ್ ತೆರಳುವಾಗ ಘಟನೆ ಸಂಭವಿಸಿದೆ. ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು ಕೆಲ ದಿನಗಳ ಹಿಂದೆ ಅಂಡರ್ ಪಾಸ್ ಇದ್ದರೂ ಬಳಸದೇ ರಸ್ತೆ ದಾಟಲು ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ಮುಂದಾಗಿದ್ದರು. ಈ ವೇಳೆ ಮುಂದೆ ಬಂದ ಬೈಕ್ ಮತ್ತು ಕಾರ್ ಗಳನ್ನು ನಿಲ್ಲಿಸಿದ್ದರು. ಆದರೆ ಅದರ ಹಿಂಬದಿಯಲ್ಲಿ ವೇಗವಾಗಿ ಬರುತಿದ್ದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿತ್ತು. ಮತ್ತೋರ್ವ ಪಾದಚಾರಿ ಸೌಮ್ಯ (28), ಬೈಕ್ ಸವಾರ ವಿಕಾಸ್ (40) ಗಂಭೀರವಾಗಿ ಗಾಯಗೊಂಡಿದ್ದರು. ಬಾಲಕಿ ಅಕ್ಷಯಾ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಳು.
ಅಂಡರ್ ಪಾಸ್ನಲ್ಲಿ ನೀರು ನಿಂತಿತ್ತು ಮಳೆ ನೀರಿನಿಂದ ಅಂಡರ್ ಪಾಸ್ನಲ್ಲಿ ನೀರು ನಿಂತಿತ್ತು. ಹಾಗಾಗಿ ಜನರಿಗೆ ಅಂಡರ್ ಪಾಸ್ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಅನಿವಾರ್ಯವಾಗಿ ಹೆದ್ದಾರಿ ರಸ್ತೆ ಮೇಲೆಯೆ ನಡೆದಾಡುತ್ತಿದ್ದಾರೆ. ಈ ವೇಳೆ ಈ ದಾರುಣ ಘಟನೆ ನಡೆದಿದೆ.
ಬುದ್ಧಿ ಕಲಿಯದ ಬಿಬಿಎಂಪಿ ಅಧಿಕಾರಿಗಳು, ಬ್ಲೇಮ್ ಗೇಮ್: ಇತ್ತೀಚೆಗೆ ರಸ್ತೆ ಗುಂಡಿಗೆ ಒಬ್ಬರು ಬಲಿಯಾಗಿದ್ದರು. ಆ ವರದಿ ಪ್ರಸಾರವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ತರಾತುರಿಯಲ್ಲಿ ಗುಂಡಿ ಮುಚ್ಚಿ, ಆ ಗುಂಡಿ ತೆಗೆದಿದ್ದು ನಾವಲ್ಲ, ಜಲಮಂಡಳಿ ಎಂದು ಸಬೂಬು ಹೇಳಿ ಜಾರಿಕೊಂಡಿತ್ತು. ಆದರೆ ಅಷ್ಟೊತ್ತಿಗೆ ಒಂದು ಪ್ರಾಣ ಹೋಗಿತ್ತು. ಆ ಪ್ರಕರಣದಲ್ಲಿ ಮುಂದೆ ಜಲಮಂಡಳಿಯವರು ಆ ಗುಂಡಿ ತೋಡಿದ್ದು ನಾವಲ್ಲ; ಆ ರಸ್ತೆಯಲ್ಲಿ ನಾವೂ ಯಾವುದೇ ಕಾಮಗಾರಿ ನಡೆಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲಿಗೆ ಬ್ಲೇಮ್ ಗೇಮ್ ಗುಂಡಿಯನ್ನು ಬಿಬಿಎಂಪಿ ತನ್ನ ಮೇಲೆಯೆ ತೋಡಿಕೊಂಡಿತ್ತು.
ಈ ಪ್ರಕರಣದಲ್ಲೂ ಅದೇ ರೀತಿ ಬಾಲಕಿಯ ಸಾವಿನ ಬಳಿಕ ಅಂಡರ್ ಪಾಸ್ ಕ್ಲೀನ್ ಗೆ ಬಿಬಿಎಂಪಿ ಸಿಬ್ಬಂದಿ ಮುಂದಾಗಿದ್ದಾರೆ. ನಿಂತಿದ್ದ ನೀರನ್ನು ಹೊರ ಹಾಕುತ್ತಿದ್ದಾರೆ. ಅದರೊಂದಿಗೆ ಸಾವಿನ ಬಳಿಕವಾದರೂ ಜನ ಸರಾಗವಾಗಿ ಅಂಡರ್ ಪಾಸ್ ಮೂಲಕ ರಸ್ತೆ ದಾಟಲಿ ಎಂಬ ಸದಾಶಯ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ!
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 56 ಲಕ್ಷ ಮನೆಗಳು ಪೂರ್ಣ: ಸರ್ಕಾರ
Published On - 5:18 pm, Thu, 31 March 22