ಮುಷ್ಕರಕ್ಕೆ ಮುಂದಾದ ಸ್ಟೇಷನ್ ಮಾಸ್ಟರ್ಗಳು: ರೈಲು ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಮುಷ್ಕರದ ಭಾಗವಾಗಿ ಎಲ್ಲ ಸ್ಟೇಷನ್ ಮಾಸ್ಟರ್ಗಳು ಒಂದೇ ದಿನ ಸಾಮೂಹಿಕವಾಗಿ ರಜೆ ಹಾಕಲಿದ್ದಾರೆ.
ಬೆಂಗಳೂರು: ಅಖಿಲ ಭಾರತ ಸ್ಟೇಷನ್ ಮಾಸ್ಟರ್ಗಳ ಒಕ್ಕೂಟವು (All India Station Masters Association – AISMA) ಮಂಗಳವಾರ (ಮೇ 31) ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ಭಾಗವಾಗಿ ಎಲ್ಲ ಸ್ಟೇಷನ್ ಮಾಸ್ಟರ್ಗಳು ಒಂದೇ ದಿನ ಸಾಮೂಹಿಕವಾಗಿ ರಜೆ ಹಾಕಲಿದ್ದಾರೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಖಾಲಿ ಇರುವ ಸ್ಟೇಷನ್ ಮಾಸ್ಟರ್ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಬೇಕು. ರಾತ್ರಿಪಾಳಿ ಭತ್ಯೆ ನೀಡುವುದನ್ನು ಮುಂದುವರಿಸಬೇಕು. ಸಂಬಳ ಹೆಚ್ಚಿಸಬೇಕು. ಬಾಕಿ ಇರುವ ಬಡ್ತಿಗಳನ್ನು ನೀಡಬೇಕು. ಭದ್ರತೆ ಮತ್ತು ಮಾನಸಿಕ ಒತ್ತಡ ಭತ್ಯೆಯನ್ನು ಕೊಡಬೇಕು ಎಂದು ಸ್ಟೇಷನ್ ಮಾಸ್ಟರ್ಗಳ ಒಕ್ಕೂಟ ಆಗ್ರಹಿಸಿದೆ. ಈ ಹಿಂದೆಯೇ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಗುತ್ತಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ಹೇಳಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿದ್ದ ಸ್ಟೇಷನ್ ಮಾಸ್ಟರ್ಗಳ ಒಕ್ಕೂಟದ ಕೇಂದ್ರ ಸಮಿತಿ ಸಭೆಯಲ್ಲಿ ಮೇ 31ಕ್ಕೆ ಸಾಮೂಹಿಕ ರಜೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ ರೈಲ್ವೆ ಮಂಡಳಿಯ ಅಧ್ಯಕ್ಷರು, ಸಿಇಒ ಮತ್ತು ಎಲ್ಲ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ ಎಂದು ಒಕ್ಕೂಟದ ಮುಖಂಡ ಬಿ.ಎಂ.ಜಯಣ್ಣ ತಿಳಿಸಿದ್ದಾರೆ.
ವಾಯವ್ಯ ರೈಲ್ವೆ ವಲಯದಲ್ಲಿ 1,503 ಮಂಜೂರಾದ ಸ್ಟೇಷನ್ ಮಾಸ್ಟರ್ ಹುದ್ದೆಗಳಿವೆ. ಆದರೆ ಕೇವಲ 1,240 ಹುದ್ದೆಗಳು ಭರ್ತಿಯಾಗಿವೆ. ಬೆಂಗಳೂರು ವಿಭಾಗದಲ್ಲಿ 77, ಮೈಸೂರು ವಿಭಾಗದಲ್ಲಿ 68 ಮತ್ತು ಹುಬ್ಬಳ್ಳಿ ವಿಭಾಗದಲ್ಲಿ 118 ಸ್ಟೇಷನ್ ಮಾಸ್ಟರ್ ಹುದ್ದೆಗಳು ಖಾಲಿಯಿವೆ ಎಂದು ಅವರು ತಿಳಿಸಿದರು. ವಾಯವ್ಯ ವಲಯದಲ್ಲಿ ಸುಮಾರು ಶೇ 30ರಷ್ಟು ಸ್ಟೇಷನ್ ಮಾಸ್ಟರ್ ಹುದ್ದೆಗಳು ಖಾಲಿವೆ ಎಂದು ಅವರು ಹೇಳಿದ್ದಾರೆ.
ರೈಲುಗಳ ಕಾರ್ಯನಿರ್ವಹಣೆಯಲ್ಲಿ ಸ್ಟೇಷನ್ ಮಾಸ್ಟರ್ಗಳು ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ರೈಲು ನಿಲ್ದಾಣಗಳ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಅವರ ಪಾತ್ರ ಮುಖ್ಯವಾದುದು. ಹೊಸ ರೀತಿಯ ಸಿಗ್ನಲ್ ವ್ಯವಸ್ಥೆಯು ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದೆ. ಆದರೆ ಸ್ಟೇಷನ್ ಮಾಸ್ಟರ್ಗಳ ಮೇಲೆ ಕೆಲಸದ ಒತ್ತಡ ಹೆಚ್ಚಿಸಿದೆ ಎಂದು ಅವರು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ನೇರ ನೇಮಕಾತಿ ಆಗಿಯೇ ಇಲ್ಲ. ಸಿಬ್ಬಂದಿ ಕೊರತೆಯ ಕಾರಣ ಸ್ಟೇಷನ್ ಮಾಸ್ಟರ್ಗಳಿಗೆ ವಾರದ ರಜೆ ತೆಗೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ರೈಲ್ವೆ ಮಂಡಳಿಯು ₹ 43,600 ಮೂಲವೇತನ ಇರುವವರಿಗೆ ರಾತ್ರಿಪಾಳಿ ಭತ್ಯೆ ಇಲ್ಲ ಎನ್ನುವ ನಿರ್ಬಂಧ ವಿಧಿಸಿತು. ಶೇ 70ರಷ್ಟು ಸ್ಟೇಷನ್ ಮಾಸ್ಟರ್ಗಳಿಗೆ ಈಗ ರಾತ್ರಿಪಾಳಿ ಭತ್ಯೆ ಸಿಗುತ್ತಿಲ್ಲ. ರಾತ್ರಿ ಪಾಳಿ ಭತ್ಯೆ ನೀಡುವುದರೊಂದಿಗೆ, ಮೂಲವೇತನದ ಶೇ 30ರಷ್ಟನ್ನು ಒತ್ತಡ, ಸುರಕ್ಷಾ ಭತ್ಯೆಯಾಗಿ ಕೊಡಬೇಕು ಎಂದು ಸ್ಟೇಷನ್ ಮಾಸ್ಟರ್ಗಳ ಒಕ್ಕೂಟ ಒತ್ತಾಯಿಸಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Thu, 26 May 22