ಜೈಲಿಂದ ಹೊರಬರ್ತಿದ್ದಂತೆಯೇ ಮತ್ತೆ ಬಾಲಬಿಚ್ಚಿದ ಖತರ್ನಾಕ್ ವಂಚಕ: ಅಮಿತ್ ಶಾ ಆಪ್ತನೆಂದು ಹೇಳಿಕೊಂಡು ಮತ್ತಷ್ಟು ವಂಚನೆ

ಕೇಂದ್ರ ಸಚಿವ ಅಮಿತ್ ಶಾ ಆಪ್ತನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯೇಂದ್ರನ ವಿರುದ್ಧ ಮತ್ತೊಂದು FIR ದಾಖಲಾಗಿದೆ. ರಾಜ್ಯಪಾಲರ ನಕಲಿ ಸಹಿ, ಲೋಕಭವನದ ನಕಲಿ ಲೆಟರ್‌ಹೆಡ್ ಬಳಸಿ ಕಾಲೇಜು ಸೀಟುಗಳಿಗಾಗಿ ಹಲವರಿಗೆ ವಂಚಿಸಿದ್ದ. ಈ ಹಿಂದೆ ₹2.5 ಕೋಟಿ ವಂಚಿಸಿ ಬಂಧಿಯಾಗಿದ್ದ. ಜಾಮೀನಿನ ಮೇಲೆ ಹೊರಬಂದ ನಂತರ ಹಳೆಯ ಹಗರಣಗಳು ಬಯಲಾಗುತ್ತಿದ್ದು, ಇದು ದೊಡ್ಡ ಜಾಲವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜೈಲಿಂದ ಹೊರಬರ್ತಿದ್ದಂತೆಯೇ ಮತ್ತೆ ಬಾಲಬಿಚ್ಚಿದ ಖತರ್ನಾಕ್ ವಂಚಕ: ಅಮಿತ್ ಶಾ ಆಪ್ತನೆಂದು ಹೇಳಿಕೊಂಡು ಮತ್ತಷ್ಟು ವಂಚನೆ
ಸುಜಯೇಂದ್ರನ ವಿರುದ್ಧ ಮತ್ತೊಂದು FIR
Image Credit source: Tv9 kannada
Edited By:

Updated on: Feb 05, 2026 | 11:23 AM

ಬೆಂಗಳೂರು, ಫೆ.5: ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರ ಆಪ್ತ ಎಂದು ಹೇಳಿಕೊಂಡು ತಿರುಗುತ್ತಿದ್ದ ಖತರ್ನಾಕ್ ವಂಚಕ ಸುಜಯೇಂದ್ರ (Sujayendra) ಎಂಬಾತನ ವಿರುದ್ಧ ಈಗ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ಅಧಿಕಾರ ಮತ್ತು ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಈತ ನಡೆಸುತ್ತಿದ್ದ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಅನ್ನು ಬಳಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಹೇಳಲಾಗಿದೆ.

2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರೇ ಶಿಫಾರಸು ಮಾಡಿದ್ದಾರೆ ಎಂದು ನಂಬಿಸಿ ಒಬ್ಬ ವಿದ್ಯಾರ್ಥಿಗೆ ಸೀಟ್ ಮಂಜೂರು ಮಾಡುವಂತೆ ಸೂಚಿಸಿದ್ದ ಎಂದು ಹೇಳಲಾಗಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ವೈದ್ಯರೊಬ್ಬರಿಗೆ ತಾನು ಕೇಂದ್ರದಲ್ಲಿ ಪ್ರಭಾವಿ ವ್ಯಕ್ತಿ ಎಂದು ನಂಬಿಸಿ ಸುಮಾರು 2.5 ಕೋಟಿ ರೂಪಾಯಿ ವಂಚಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್‌ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದವು.

ಈ ಹಿಂದೆ ವಂಚನೆ ಕೇಸ್‌ನಲ್ಲಿ ಜೈಲು ಸೇರಿದ್ದ ಈತ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಹೊರಬಂದ ಬೆನ್ನಲ್ಲೇ ಈತನ ಹಳೆಯ ನಕಲಿ ಪತ್ರಗಳ ಹಗರಣ ಈಗ ಬಯಲಾಗಿದೆ. ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆಯಿಂದ ಕೇಸನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದೆ. ನಕಲಿ ಪತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸುಜಯೇಂದ್ರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ವರದಿ ಪ್ರಕಾರ, ಸುಜಯೇಂದ್ರನ ಮನೆಯಲ್ಲಿ ಪತ್ತೆಯಾಗಿರುವ ದಸ್ತಾವೇಜುಗಳು ಮತ್ತು ಆತನ ವಂಚನೆಯ ಜಾಲವನ್ನು ನೋಡಿದರೆ, ಈ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಪರಾಧ ಪ್ರಮಾಣ ಕಡಿಮೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್​​​

ಸುಜಯೇಂದ್ರನ ಮನೆಯಲ್ಲಿ ಕೇವಲ ವಿಟಿಯು ಮಾತ್ರವಲ್ಲದೆ, ರಾಜ್ಯದ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಬರೆದಿದ್ದಾರೆ ಎನ್ನಲಾದ ಹಲವು ನಕಲಿ ಶಿಫಾರಸು ಪತ್ರಗಳು ಪತ್ತೆಯಾಗಿವೆ. ಮೆಡಿಕಲ್, ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟು ಕೊಡಿಸಲು ಇವುಗಳನ್ನು ಬಳಸಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ ವೈದ್ಯರ ಪ್ರಕರಣ ಹೊರಬಂದ ಮೇಲೆ ಅನೇಕರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಕೇಂದ್ರ ಸಚಿವರ ಹೆಸರು ಬಳಸುತ್ತಿದ್ದರಿಂದ ಅನೇಕ ಪೋಷಕರು ನಂಬಿ ಲಕ್ಷ ಲಕ್ಷ ಹಣವನ್ನು ನೀಡಿದ್ದಾರೆ. ಇದರ ಜತೆಗೆ ಯಾವುದೇ ಪತ್ರವಿಲ್ಲದೆ ಸೀಟು ಮಂಜೂರು ಮಾಡುವುದು ಸುಲಭವಲ್ಲ. ಹಾಗಾಗಿ, ವಿಶ್ವವಿದ್ಯಾಲಯಗಳ ಅಥವಾ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಈತನಿಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಸಹಕರಿಸಿದ್ದಾರೆಯೇ? ನಕಲಿ ಪತ್ರಗಳನ್ನು ಪರಿಶೀಲಿಸದೆ ಸೀಟು ನೀಡಲಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಎಫ್‌ಐಆರ್​ನಲ್ಲಿ ಏನಿದೆ?

ಸುಜಯೇಂದ್ರ ಹೆಚ್.ಎನ್ ಎಂಬ ವ್ಯಕ್ತಿಯು ಮಾನ್ಯ ರಾಜ್ಯಪಾಲರ ಸಹಿಯನ್ನು ನಕಲಿ ಸಹಿ ಮಾಡಿ ರಾಜ್ಯಪಾಲರ ಕಾರ್ಯಾಲಯದ ಅಧಿಕೃತ ಪತ್ರದ ಆದೇಶವನ್ನು ಅನಧಿಕೃತವಾಗಿ ಬಳಸಿಕೊಂಡು ಜೂನ್ 2025 ರಲ್ಲಿ ವಿ.ಟಿ.ಯು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರವನ್ನು ಹೊರಡಿಸಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಧಿಕೃತ ಲೆಟರ್ ಹೆಡ್‌ನ ದುರುಪಯೋಗ ಮತ್ತು ನಕಲಿ ಸಹಿಯು ಗಂಭೀರ ಅಪರಾಧವಾಗಿದ್ದು, ಇದರಿಂದ ಕಾರ್ಯಾಲಯಕ್ಕೆ ಆಡಳಿತಾತ್ಮಕವಾಗಿ ಮತ್ತು ಕಾನೂನು ಬದ್ಧ ಹಾಗೂ ಪ್ರತಿಷ್ಠೆಗೆ ಹಾನಿ ಉಂಟು ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಹೇಳಿದ್ದಾರೆ. ಬಿ.ಎನ್.ಎಸ್ (BNS) ಸೆಕ್ಷನ್ 336(3), 336(4), ಮತ್ತು 340(2) ಅಡಿಯಲ್ಲಿ ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ