ಬೆಂಗಳೂರು: ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (National Investigation Agency – NIA) ಬಂಧಿಸಿದೆ. ಬೆಂಗಳೂರು ಮೂಲದ ಮೊಹಮದ್ ತಾಕಿರ್ ಬಂಧಿತ. ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಐಸಿಸ್, ಐಎಸ್ಐಎಲ್, ಡಾಯಿಶ್ ಜತೆ ಸಂಪರ್ಕ ಹೊಂದಿದ್ದ ಆರೋಪ ಇವರ ಮೇಲಿದೆ.
2020ರ ಏಪ್ರಿಲ್ನಲ್ಲಿ ಈತನ ಇಬ್ಬರು ಸಹಚರರಾದ ಅಹ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ನನ್ನು ಬಂಧಿಸಲಾಗಿತ್ತು. ಇಬ್ಬರ ವಿರುದ್ಧವೂ ಎನ್ಐಎ ಆರೋಪಪಟ್ಟಿ ಸಲ್ಲಿಸಿತ್ತು. ತನಿಖೆ ವೇಳೆ ಮೊಹಮದ್ ತಾಕಿರ್ಗೆ ಉಗ್ರರೊಂದಿಗೆ ಸಂಪರ್ಕ ಇರುವ ವಿಚಾರ ಒತ್ತೆಯಾಗಿತ್ತು. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡಿಸುತ್ತಿದ್ದ ತಾಕಿರ್, ಯುವಕರನ್ನು ಪ್ರೇರೇಪಿಸಿ ಸಿರಿಯಾಗೆ ಕಳುಹಿಸುತ್ತಿದ್ದ ಎನ್ನಲಾಗಿದೆ. 2013ರಲ್ಲಿ ತನ್ನ ಸಹಚರರೊಂದಿಗೆ ಸಿರಿಯಾಗೆ ಭೇಟಿ ನೀಡಿದ್ದ ಎಂದು ಎನ್ಐಎ ಹೇಳಿದೆ.
ರಾಯಚೂರು: ಮಹಿಳೆ ಸಾವು, ಸಂಬಂಧಿಕರ ಪ್ರತಿಭಟನೆ
ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆಂದು ಆರೋಪಿಸಿ ರಾಯಚೂರಿನ ಸುರಕ್ಷಾ ಆಸ್ಪತ್ರೆಯ ಆ್ಯಂಬುಲೆನ್ಸ್ ಗಾಜು ಪುಡಿಪುಡಿ ಮಾಡಿ ಮೃತಳ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಹೊಸೂರು ನಿವಾಸಿ ದೀಪಾ ಭಾನುವಾರ ಸುರಕ್ಷಾ ಆಸ್ಪತ್ರೆಗೆ ಬಂದಿದ್ದರು. ಆಕೆಯ ಪರಿಸ್ಥಿತಿ ಪರಿಶೀಲಿಸಿದ್ದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು.
ಮಾರ್ಗಮಧ್ಯೆಯೇ ಆ್ಯಂಬುಲೆನ್ಸ್ನಲ್ಲಿ ದೀಪಾ ಮೃತಪಟ್ಟಿದ್ದರು. ಆ್ಯಂಬುಲೆನ್ಸ್ನಲ್ಲಿ ಆಮ್ಲಜನಕ ವ್ಯವಸ್ಥೆ ಇಲ್ಲದಿದ್ದುದೇ ರೋಗಿ ಸಾವನ್ನಪ್ಪಲು ಕಾರಣ ಎಂದು ಮೃತರ ಸಂಬಂಧಿಕರು ದೂರಿದ್ದಾರೆ. ಸ್ಥಳಕ್ಕೆ ರಾಯಚೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಭೀಮಾತೀರದಲ್ಲಿ ಮರ್ಯಾದೆ ಹತ್ಯೆ ಆರೋಪ
ವಿಜಯಪುರ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಅಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ರವಿ ನಿಂಬರಗಿ (32) ಕೊಲೆಯಾದ ಯುವಕ. ಯುವತಿಯ ಇಬ್ಬರು ಪೋಷಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ; ತಲೆಮರೆಸಿಕೊಂಡಿರುವ ಆರೋಪಿಗಳ ಮನೆ ಮೇಲೆ ಎನ್ಐಎ ದಾಳಿ
ಇದನ್ನೂ ಓದಿ: ಮನ್ಸುಖ್ ಹಿರೇನ್ ಪ್ರಕರಣವನ್ನು ರಾಷ್ಟ್ರಿಯ ತನಿಖಾ ದಳಕ್ಕೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ
Published On - 9:22 pm, Sun, 24 October 21