AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಡಿಸಿಎಂ ಹುದ್ದೆಗಳ ಸೃಷ್ಟಿ ಹೊರಟ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಭಾರಿ ಇಕ್ಕಟ್ಟು!

ಕರ್ನಾಟದಲ್ಲಿ ನೂತನ ಸಂಪುಟ ರಚನೆ ವೇಳೆ 4 ಹೊಸ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದರೂ ವಿವಿಧ ಸಮುದಾಯಗಳ ನಾಯಕರ ತೀವ್ರ ಪೈಪೋಟಿಯಿಂದಾಗಿ ನಿರ್ಧಾರ ವಿಳಂಬವಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಅಂತಿಮವಾಗಿ ಪಕ್ಷ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಶಾಸಕಾಂಗ ಪಕ್ಷದ ಸಭೆಯ ಬಳಿಕ ತಿಳಿದುಬರಲಿದೆ.

4 ಡಿಸಿಎಂ ಹುದ್ದೆಗಳ ಸೃಷ್ಟಿ ಹೊರಟ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಭಾರಿ ಇಕ್ಕಟ್ಟು!
4 ಡಿಸಿಎಂ ಹುದ್ದೆಗಳ ಸೃಷ್ಟಿ ಹೊರಟ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಇಕ್ಕಟ್ಟು!Image Credit source: tv9
ಪ್ರಸನ್ನ ಗಾಂವ್ಕರ್​
| Edited By: |

Updated on: May 30, 2026 | 10:17 AM

Share

ಬೆಂಗಳೂರು, ಮೇ 30: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಮುಖ್ಯಮಂತ್ರಿ ಬದಲಾವಣೆಯ ಬೆನ್ನಲ್ಲೇ ಇದೀಗ ನೂತನ ಸಚಿವ ಸಂಪುಟ ರಚನೆ ಹಾಗೂ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿಯ ವಿಚಾರ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂಬುದು ತಿಳಿದುಬಂದಿದೆ. ರಾಜ್ಯದಲ್ಲಿ ಆಡಳಿತ ಸಮತೋಲನ ಕಾಯ್ದುಕೊಳ್ಳಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೋಬ್ಬರಿ 4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ಎಐಸಿಸಿ (AICC) ಗಂಭೀರ ಚಿಂತನೆ ನಡೆಸಿದೆ. ಆದರೆ, ಪ್ರಮುಖ ಸಮುದಾಯಗಳ ಪ್ರಭಾವಿ ನಾಯಕರುಗಳು ಡಿಸಿಎಂ ಹುದ್ದೆಗಾಗಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿರುವುದರಿಂದ, ಯಾರಿಗೆ ಸ್ಥಾನ ನೀಡಿದರೂ ಅಸಮಾಧಾನ ಸ್ಫೋಟಗೊಳ್ಳುವ ಭೀತಿಯಲ್ಲಿ ಹೈಕಮಾಂಡ್ ಸಂದಿಗ್ಧ ಸ್ಥಿತಿಗೆ ತಲುಪಿದೆ.

ಮುಖ್ಯಾಂಶಗಳು

  • ಜಾತಿಸೂತ್ರದ ಆಧಾರದ ಮೇಲೆ 4 ಹೊಸ ಡಿಸಿಎಂ ಹುದ್ದೆಗಳ ಸೃಷ್ಟಿಗೆ ಚಿಂತನೆ ನಡೆಸಿದ್ದರೂ ನಾಯಕರ ತೀವ್ರ ಪೈಪೋಟಿಯಿಂದಾಗಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
  • ಲಿಂಗಾಯತ, ಮುಸ್ಲಿಂ, ದಲಿತ ಹಾಗೂ ಒಬಿಸಿ ಕೋಟಾಗಳ ಅಡಿಯಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಸೃಷ್ಟಿಯಾಗಿರುವ ಭಾರಿ ಪೈಪೋಟಿ.
  • ಮುಸ್ಲಿಂ ಕೋಟಾದಲ್ಲೂ ಹೆಚ್ಚಾದ ಪೈಪೋಟಿ.

ಕಾಂಗ್ರೆಸ್ ಮೂಲಗಳ ಪ್ರಕಾರ, ಒಬಿಸಿ, ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಸಮುದಾಯಗಳಿಗೆ ತಲಾ ಒಂದು ಡಿಸಿಎಂ ಹುದ್ದೆ ನೀಡಲು ಹೈಕಮಾಂಡ್ ಪ್ಲಾನ್ ಮಾಡಿತ್ತು. ಆದರೆ ಪ್ರತಿಯೊಂದು ಕೋಟಾದಲ್ಲೂ ನಾಯಕರ ನಡುವೆ ದೊಡ್ಡ ಜಿದ್ದಾಜಿದ್ದಿ ಶುರುವಾಗಿದೆ.

ಒಬಿಸಿ ಕೋಟಾ

ಈ ಕೋಟಾದಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲು ಆಲೋಚಿಸಲಾಗಿದೆ. ಆದರೆ, ಇವರಿಗೆ ನೀಡಿದರೆ ಪಕ್ಷದಲ್ಲಿ ಭಿನ್ನ ಸಂದೇಶ ರವಾನೆಯಾಗಬಹುದು ಎಂಬ ಆತಂಕ ಹೈಕಮಾಂಡ್ ಅನ್ನು ಕಾಡುತ್ತಿದೆ.

ಲಿಂಗಾಯತ ಕೋಟಾ

ಹಿರಿಯ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಈಶ್ವರ ಖಂಡ್ರೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮುಸ್ಲಿಂ ಕೋಟಾ

ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬೆಂಬಲವಿದ್ದರೆ, ಮತ್ತೊಂದೆಡೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಕೇರಳದ ಪ್ರಭಾವಿ ಧಾರ್ಮಿಕ ಗುರುಗಳ ಬೆಂಬಲವಿದ್ದು, ಇಬ್ಬರ ನಡುವೆ ಭಾರಿ ಪೈಪೋಟಿ ನಡೆದಿದೆ.

ದಲಿತ ಕೋಟಾ

ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಆರಂಭವಾಗಿದೆ. ಯುವ ನಾಯಕ ಪ್ರಿಯಾಂಕ್‌ಗೆ ಸ್ಥಾನ ನೀಡಿದರೆ ಪರಮೇಶ್ವರ್ ಅಸಮಾಧಾನಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ದಲಿತ ಸಮುದಾಯದಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳ ಸಮೀಕರಣದ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ (CLP) ಸಭೆಯ ಬಳಿಕವೇ ಎಲ್ಲಾ ಆಯಾಮಗಳನ್ನು ಅಳೆದು ತೂಗಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಕೆಪಿಸಿಸಿ ಅಧ್ಯಕ್ಷ ರೇಸ್‌ಗೆ ಬಿ.ಕೆ. ಹರಿಪ್ರಸಾದ್ ಸರ್ಪ್ರೈಸ್ ಎಂಟ್ರಿ!

ಇನ್ನೊಂದೆಡೆ, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ದೊಡ್ಡ ರಾಜಕೀಯ ಹಲ್ಚಲ್ ಸೃಷ್ಟಿಯಾಗಿದೆ. ಈ ಮುಂಚೆ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಅವರು ಸಂಪುಟದಲ್ಲಿ ಸಚಿವ ಸ್ಥಾನದ ಜೊತೆಗೇ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಧಿಕಾರವಿಲ್ಲದ ಬರಿ ಅಧ್ಯಕ್ಷ ಸ್ಥಾನ ಒಪ್ಪಲು ಅವರು ನಿರಾಕರಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಒಬಿಸಿ ಕೋಟಾದಡಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಅನಿರೀಕ್ಷಿತವಾಗಿ ಮುನ್ನೆಲೆಗೆ ಬಂದಿದೆ. ಹರಿಪ್ರಸಾದ್ ಅವರಿಗೆ ಕೆ.ಸಿ. ವೇಣುಗೋಪಾಲ್ ಅವರ ಸಂಪೂರ್ಣ ಬೆಂಬಲವಿದ್ದು, ಹೈಕಮಾಂಡ್ ಎದುರು ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ ನೂತನ ಸಿಎಂ ಆಯ್ಕೆಗೆ ಕ್ಷಣಗಣನೆ: ಇಂದು ಸಂಜೆ 4ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ

ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಹಿರಿಯ ಶಾಸಕರ ಮೂಲಕ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಿ ಒಮ್ಮತ ಮೂಡಿಸಲು ಹೈಕಮಾಂಡ್ ತೆರೆಮರೆಯ ತಂತ್ರ ರೂಪಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More