ಕರ್ನಾಟಕದ ನೂತನ ಸಿಎಂ ಆಯ್ಕೆಗೆ ಕ್ಷಣಗಣನೆ: ಇಂದು ಸಂಜೆ 4ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ
Karnataka Congress CLP Meeting: ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನು ಅಧಿಕೃತವಾಗಿ ಆಯ್ಕೆ ಮಾಡಲು ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯಲಾಗಿದ್ದು, ಡಿಕೆ ಶಿವಕುಮಾರ್ ಅವರ ಹೆಸರು ಘೋಷಣೆಯಾಗುವುದು ಬಹುತೇಕ ಖಚಿತವಾಗಿದೆ. ಅದರೊಂದಿಗೆ ಅಧಿಕಾರ ಹಂಚಿಕೆ ಪ್ರಹಸನಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ.

ಬೆಂಗಳೂರು, ಮೇ 30: ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ (Siddaramaiah) ಆಡಳಿತ ಪರ್ವ ಅಧಿಕೃತವಾಗಿ ಅಂತ್ಯಗೊಂಡಿದ್ದು, ನೂತನ ಮುಖ್ಯಮಂತ್ರಿಯ ಪಟ್ಟಾಭಿಷೇಕಕ್ಕೆ ವೇದಿಕೆ ಸಂಪೂರ್ಣ ಸಿದ್ಧವಾಗಿದೆ. ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ಬೆನ್ನಲ್ಲೇ, ಮುಂದಿನ ಜವಾಬ್ದಾರಿ ವಹಿಸಿಕೊಳ್ಳಲು ಕಾಂಗ್ರೆಸ್ ಪಾಳಯದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ. ಇಡೀ ರಾಜ್ಯದ ದೃಷ್ಟಿ ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯತ್ತ ನೆಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಹೆಸರೇ ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ ತೀರ್ಮಾನವನ್ನು ಪ್ರಕಟಿಸಲಿದೆ.
ಮುಖ್ಯಾಂಶಗಳು
- ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಿಗದಿ.
- ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕವೇ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್.
- ಜೂನ್ 5, 6 ಅಥವಾ 7 ರಂದು ನೂತನ ಸಿಎಂ ಪದಗ್ರಹಣಕ್ಕೆ ಜ್ಯೋತಿಷಿ ದ್ವಾರಕನಾಥ್ ಅವರಿಂದ ಶುಭ ಮುಹೂರ್ತ ನಿಗದಿ.
ವಿಮಾನದಲ್ಲೇ ಸಚಿವ ಸಂಪುಟದ ಪಟ್ಟಿ ಪರಿಶೀಲಿಸಿದ್ದ ಡಿಕೆಶಿ
ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ನೂತನ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಐಸಿಸಿ ನಾಯಕರ ಸಮ್ಮುಖದಲ್ಲಿ ಹೈಕಮಾಂಡ್ ತೀರ್ಮಾನವನ್ನು ಪ್ರಕಟಿಸಲಾಗುತ್ತದೆ. ನೂತನ ಸರ್ಕಾರ ಹಾಗೂ ಸಂಪುಟ ರಚನೆಗೆ ಡಿ.ಕೆ. ಶಿವಕುಮಾರ್ ಈಗಾಗಲೇ ಭರ್ಜರಿ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳುವಾಗ ವಿಮಾನದಲ್ಲೇ ಸಂಭಾವ್ಯ ಸಚಿವರ ಪಟ್ಟಿಯನ್ನು ಹಿಡಿದು ಪರಿಶೀಲನೆ ನಡೆಸಿದ್ದ ಡಿಕೆಶಿ, ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಡಿಕೆಶಿ, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆದಾಗ್ಯೂ, ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಅವರು ಗೌಪ್ಯವಾಗಿಟ್ಟಿದ್ದಾರೆ.
ಭವ್ಯ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್
ಇನ್ನೊಂದೆಡೆ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭವನ್ನು ವಿಧಾನಸೌಧದ ಮುಂಭಾಗ ನಡೆಸಬೇಕೇ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಭವ್ಯ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಲು ಡಿಕೆಶಿ ಅವರು ತಮ್ಮ ಆಪ್ತ ರಾಜಗುರು ದ್ವಾರಕನಾಥ್ ಅವರ ಬಳಿ ಸಮಯ ಕೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ದ್ವಾರಕನಾಥ್, ಜೂನ್ 5, 6 ಮತ್ತು 7 ರಂದು ಅತ್ಯಂತ ಶುಭದಾಯಕವಾದ ಮೂರು ದಿನಾಂಕಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಟೀಮ್ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್?
ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವುದು ಅವರ ಅಭಿಮಾನಿ ವಲಯದಲ್ಲಿ ಭಾರಿ ಹರ್ಷ ತಂದಿದ್ದು, ಯಾವುದೇ ವಿಘ್ನ ಎದುರಾಗದಿರಲಿ ಎಂದು ರಾಜ್ಯದ ಹಲವೆಡೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸಲಾಗುತ್ತಿದೆ. ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ‘ಪ್ರಮಾಣವಚನ ಸಮಾರಂಭಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಿಂದಲೇ 50 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಲಿದ್ದೇವೆ’ ಎಂದು ತಿಳಿಸಿದ್ದಾರೆ. ಇಂದಿನ ಸಭೆಯೊಂದಿಗೆ ರಾಜ್ಯದ ಮುಂದಿನ ಆಡಳಿತ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ಅಧಿಕೃತ ಚಿತ್ರಣ ಲಭ್ಯವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





