AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಿಕ್ಕರ್ ಹಾಕಿದ್ರೂ ಕಷ್ಟ, ಹಾಕದಿದ್ರೂ ಫೈನ್! ಅಗ್ರಿಗೇಟರ್ ಆಪ್‌ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!

ಬೆಂಗಳೂರಿನಲ್ಲಿ ಪೋರ್ಟರ್ ಸೇರಿದಂತೆ ವಿವಿಧ ಅಗ್ರಿಗೇಟರ್ ಆಪ್ ಕಂಪನಿಗಳ ನಿಯಮಗಳಿಂದ ಗೂಡ್ಸ್ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂಪನಿಗಳ ಒತ್ತಡಕ್ಕೆ ಮಣಿದು ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಿದರೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಈ ದಬ್ಬಾಳಿಕೆ ವಿರುದ್ಧ ಚಾಲಕರ ಸಂಘಟನೆಗಳು ತಿರುಗಿಬಿದ್ದಿದ್ದು, ಸಾರಿಗೆ ಇಲಾಖೆ ಮಧ್ಯಪ್ರವೇಶಕ್ಕೆ ಆಗ್ರಹಿಸಿವೆ.

ಸ್ಟಿಕ್ಕರ್ ಹಾಕಿದ್ರೂ ಕಷ್ಟ, ಹಾಕದಿದ್ರೂ ಫೈನ್! ಅಗ್ರಿಗೇಟರ್ ಆಪ್‌ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!
ಅಗ್ರಿಗೇಟರ್ ಆಪ್‌ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!
ಭಾವನಾ ಹೆಗಡೆ
|

Updated on: May 30, 2026 | 10:35 AM

Share

ಬೆಂಗಳೂರು, ಮೇ 30: ನಗರದಲ್ಲಿ ಪೋರ್ಟರ್, ಅಂಕಲ್ ಸೇರಿದಂತೆ ವಿವಿಧ ಅಗ್ರಿಗೇಟರ್ ಆಪ್‌ಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಖಾಸಗಿ ಗೂಡ್ಸ್ ವಾಹನ (Goods Vehicle) ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಚಾಲಕರಿಗೆ ಸ್ಟಿಕ್ಕರ್ ಹಾಕಿದರೂ ಕಷ್ಟ, ಹಾಕದೇ ಇದ್ದರೂ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ಮುಖ್ಯಾಂಶಗಳು

  • ಅಗ್ರಿಗೇಟರ್ ಆಪ್ ಕಂಪನಿಗಳು ಚಾಲಕರ ಮೇಲೆ ಸ್ಟಿಕ್ಕರ್ ಹಾಕಲು ಒತ್ತಡ ಹೇರುತ್ತಿವೆ.
  • ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿದರೆ ಸಂಚಾರಿ ಪೊಲೀಸರು ಭಾರಿ ದಂಡ ವಿಧಿಸುತ್ತಿದ್ದಾರೆ.
  • ನಿಯಮಾವಳಿ ರೂಪಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಾಲಕರ ಸಂಘಟನೆಗಳು ಎಚ್ಚರಿಸಿವೆ.

ವಾಹನಗಳ ಮೇಲೆ ಸ್ಟಿಕ್ಕರ್ ಕಡ್ಡಾಯ: ಚಾಲಕರಿಗೆ ಕಂಪನಿಗಳ ಒತ್ತಡ!

ನಗರದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ಗೂಡ್ಸ್ ವಾಹನಗಳ ಮಾಲೀಕರು ಬಾಡಿಗೆಗಾಗಿ ಈ ಆಪ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಈಗ ಈ ಕಂಪನಿಗಳು ಚಾಲಕರ ಸ್ವಂತ ವಾಹನಗಳ ಮೇಲೆ ತಮ್ಮ ಬ್ರ್ಯಾಂಡ್‌ನ ದೊಡ್ಡ ಗಾತ್ರದ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ತೀವ್ರ ಒತ್ತಡ ಹೇರುತ್ತಿವೆ. ಒಂದು ವೇಳೆ ಸ್ಟಿಕ್ಕರ್ ಅಂಟಿಸದಿದ್ದರೆ ಆಪ್‌ನಲ್ಲಿ ಬಾಡಿಗೆ ಸಿಗದಂತೆ ಮಾಡಲಾಗುತ್ತಿದೆ ಮತ್ತು ಚಾಲಕರ ಐಡಿಗಳನ್ನು ಏಕಾಏಕಿ ಬ್ಲಾಕ್ ಮಾಡಲಾಗುತ್ತಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಲಿಖಿತ ಆದೇಶ ಅಥವಾ ಸರ್ಕಾರದ ಅನುಮತಿ ಇಲ್ಲದೆ ಕಂಪನಿಗಳು ಇಂತಹ ನಿಯಮಗಳನ್ನು ಜಾರಿಗೊಳಿಸುತ್ತಿರುವುದರಿಂದ, ದಿನನಿತ್ಯದ ಬಾಡಿಗೆಯನ್ನೇ ನಂಬಿಕೊಂಡಿರುವ ನೂರಾರು ಚಾಲಕರ ಕುಟುಂಬ ನಿರ್ವಹಣೆ ಸದ್ಯ ಕಂಗಾಲಾಗಿದೆ.

ಟ್ರಾಫಿಕ್ ಪೊಲೀಸ್ ದಂಡದ ಭೀತಿ

ಕಂಪನಿಗಳ ಒತ್ತಡಕ್ಕೆ ಮಣಿದು ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡರೆ, ಇತ್ತ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಎಂದು ವಾಹನಗಳನ್ನು ತಡೆದು ಭಾರಿ ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಒಂದು ಕಡೆ ಬಾಡಿಗೆ ಕಳೆದುಕೊಳ್ಳುವ ಭಯ, ಮತ್ತೊಂದು ಕಡೆ ಪೊಲೀಸರ ದಂಡದ ಆತಂಕದ ಮಧ್ಯೆ ಚಾಲಕರು ನಲುಗುತ್ತಿದ್ದಾರೆ.

ಈ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದಿರುವ ಚಾಲಕರ ಸಂಘಟನೆಗಳು ಈಗಾಗಲೇ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿವೆ. ಖಾಸಗಿ ವಾಹನದ ಮೇಲೆ ಯಾವ ಸ್ಟಿಕ್ಕರ್ ಇರಬೇಕು ಎಂಬುದನ್ನು ನಿರ್ಧರಿಸಲು ಆಪ್ ಕಂಪನಿಗಳಿಗೆ ಯಾವುದೇ ಹಕ್ಕಿಲ್ಲ ಎಂದು ನೊಂದ ಚಾಲಕರ ವೇದಿಕೆಯ ರಾಜ್ಯಾಧ್ಯಕ್ಷ ರಾಜು ಹಾಗೂ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ 4 ಡಿಸಿಎಂ ಹುದ್ದೆಗಳ ಸೃಷ್ಟಿ ಹೊರಟ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಭಾರಿ ಇಕ್ಕಟ್ಟು!

ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ಯಾವುದೇ ಮಾರ್ಗಸೂಚಿ ಇಲ್ಲದೆ ಆಪ್ ಕಂಪನಿಗಳು ನಡೆಸುತ್ತಿರುವ ಈ ದಂದೆಗೆ ಬ್ರೇಕ್ ಹಾಕಲು ಸರ್ಕಾರ ಹಾಗೂ ಸಾರಿಗೆ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ. ಅಗ್ರಿಗೇಟರ್ ಆಪ್‌ಗಳ ನಿಯಮಗಳು ಹಾಗೂ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ವಿಚಾರದಲ್ಲಿ ಸರ್ಕಾರ ಶೀಘ್ರವೇ ಸ್ಪಷ್ಟ ನಿಯಮಾವಳಿ ಪ್ರಕಟಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More