ಮಾತ್ರೆಗಳ ರೂಪದಲ್ಲಿ ಚಾಕಲೇಟ್ ಮಾರಾಟ ಮಾಡುವ ಜಾಲ, ಶಾಲಾ ಮಕ್ಕಳೇ ಇವರ ಟಾರ್ಗೆಟ್
ಬೆಂಗಳೂರಿನಲ್ಲಿ ಮಕ್ಕಳು ತಿಂಡಿ ಖರೀದಿ ಮಾಡಲಿ ಎಂದು ದುಡ್ಡು ಕೊಟ್ಟು ಕಳಿಸುವ ಪೋಷಕರು ಸ್ವಲ್ಪ ಹುಷಾರಾಗಿರಿ. ಏಕೆಂದರೆ ಚಾಕಲೇಟ್ ಸೇಲ್ ಮಾಡುವ ಭರದಲ್ಲಿ ಮಕ್ಕಳ ಜೀವಕ್ಕೆ ಕುತ್ತು ತಂದೊಡ್ಡುವ ಆಹಾರ ತಯಾರಕರು ರೆಡಿಯಾಗಿದ್ದಾರೆ.ಹೌದು...ಥೇಟ್ ಮಾತ್ರೆಗಳ ರೂಪದಲ್ಲಿ ರಾಜಾರೋಷವಾಗಿ ಚಾಕಲೇಟ್ ಗಳ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.

ಬೆಂಗಳೂರು, (ಜುಲೈ 21): ಬೆಂಗಳೂರಿನಲ್ಲಿ ಮಕ್ಕಳು ಪಾಪ ತಿಂಡಿ, ಚಾಕಲೇಟ್ (chocolate) ಖರೀದಿ ಮಾಡಲಿ ಎಂದು ದುಡ್ಡು ಕೊಟ್ಟು ಕಳಿಸುವ ಪೋಷಕರು ಹುಷಾರಾಗಿ ಇರುವುದು ಒಳಿತು. ಏಕೆಂದರೆ ತಿಂಡಿ ತಿನಿಸುಗಳ ಮಾರಾಟ ಭರದಲ್ಲಿ ಆಹಾರ ತಯಾರಕರು ಇಳಿದಿರುವ ಕೀಳು ಮಟ್ಟ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿದೆ. ಥೇಟ್ ಮಾತ್ರೆಗಳ (Tablets) ರೂಪದಲ್ಲಿ ರಾಜಾರೋಷವಾಗಿ ಚಾಕಲೇಟ್ ಗಳ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ವಿದ್ಯಾರಣ್ಯಪುರ ಬಳಿಯ ಬಾಲಾಜಿ ಲೇಔಟ್, ರಾಘವೇಂದ್ರ ಕಾಲೋನಿ, ಚಿಕ್ಕ ಬೆಟ್ಟಹಳ್ಳಿ, ದೊಡ್ಡ ಬೆಟ್ಟಹಳ್ಳಿ ಸುತ್ತಮುತ್ತ ಅದರಲ್ಲೂ ಶಾಲೆಗಳ ಸುತ್ತಮುತ್ತ ಮಕ್ಕಳನ್ನ ಟಾರ್ಗೆಟ್ ಮಾಡಿ ಮಾತ್ರೆ ಸ್ವರೂಪದ ಚಾಕಲೇಟ್ ಗಳನ್ನು ಸೇಲ್ ಮಾಡುತ್ತಿರುವುದು ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.
ಅಂಗಡಿ ವ್ಯಾಪಾರಿಗಳು ಕೂಡ ಮಕ್ಕಳು ತಗೆದುಕೊಳ್ಳುತ್ತಾರೆ ಎಂದು ಮಕ್ಕಳ ಹಿತಾಸಕ್ತಿ ಮರೆತು ಮಾರಾಟ ಮಾಡುತ್ತಿದ್ದಾರೆ. ಮಾತ್ರೆ ಸ್ವರೂಪದ ಚಾಕಲೇಟ್ ಪ್ಯಾಕೇಜಿಂಗ್ ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ FSSAI ಅನುಮತಿಯೂ ಇಲ್ಲ. ಆಹಾರ ತಯಾರಕರ ವಿಳಾಸವು ಇಲ್ಲದೆ ಸೇಲ್ ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ಆತಂಕ ವ್ಯಕ್ತಪಡಿಸುವ ಆಹಾರ ತಜ್ಞರು ಹಾಗೂ ವೈದ್ಯರು ತೀವ್ರ ಆತಂಕ ಹೊರಹಾಕಿದ್ದಾರೆ.
ಇದನ್ನೂ ಓದಿ: ಈ ಒಂದಿಷ್ಟು ಆಹಾರಗಳಿಗೆ ಎಕ್ಸ್‌ಪೈರಿ ಡೇಟ್ ಅನ್ನೋದೇ ಇಲ್ಲವಂತೆ
ಆಹಾರ ಇಲಾಖೆ, ಕಾನೂನು ಯಾವುದರ ಭಯವೂ ಇಲ್ಲದೆ ಇಷ್ಟು ರಾಜಾರೋಷವಾಗಿ ಈ ರೀತಿಯ ಉತ್ಪನ್ನಗಳನ್ನು ಸೇಲ್ ಮಾಡುತ್ತ ಅಮಾಯಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಲು ನಿಂತಿದ್ದಾರೆ. ಇವುಗಳನ್ನು ತಿನ್ನುತ್ತಾ, ನಿಜವಾದ ಮಾತ್ರೆಗಳನ್ನು ತಿಂದು ಏನಾದರೂ ಅನಾಹುತವಾದರೆ ಯಾರು ಹೊಣೆ? ಮತ್ತೊಂದೆಡೆ ಇದರ ಹಿಂದೆ ಬೇರೇನಾದರೂ ಉದ್ದೇಶ ಇರಬಹುದಾ ಎಂಬುವುದನ್ನ ಇನ್ನಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು




