ಬೆಂಗಳೂರಿನ ವಿವಿ ಪುರಂ ನಿವಾಸಿಗಳಿಗೆ ಶುರುವಾಯ್ತು ಪಾರಿವಾಳಗಳ ಕಾಟ; ಅಸ್ತಮಾ, ಉಸಿರಾಟದ ಸಮಸ್ಯೆಯಿಂದ ಸ್ಥಳೀಯರು ಹೈರಾಣು
ಆ ಏರಿಯಾ ಜನರಿಗೆ ಪಾರಿವಾಳಗಳಿಂದ ತಲೆನೋವು ಶುರುವಾಗಿಬಿಟ್ಟಿದೆ. ಬೆಳಗ್ಗೆ ವಾಕಿಂಗ್, ಸಂಜೆ ದೇವಸ್ಥಾನಕ್ಕೆ ಹೋದರೂ ಪಾರಿವಾಳಗಳ ಕಾಟ ತಪ್ಪದಂತಾಗಿದೆ. ಎಲ್ಲಿಂದಲೋ ಬರುವ ಬೇರೆ ಏರಿಯಾ ಜನ, ನಡುರಸ್ತೆಯಲ್ಲೇ ರಾಶಿ ರಾಶಿ ಕಾಳು ಸುರಿದು ಹೋಗುತ್ತಿರುವುದರಿಂದ ವಾಹನ ಸವಾರರು ಹಾಗೂ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ. ಅಸ್ತಮಾ, ಉಸಿರಾಟದ ಸಮಸ್ಯೆಗೆ ಸುಸ್ತಾದ ನಿವಾಸಿಗಳು, ಹಲವು ಭಾರೀ ದೂರು ಕೊಟ್ಟರೂ ಕ್ಯಾರೇ ಎನ್ನದ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಬೆಂಗಳೂರು, ಅ.10: ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ವಿವಿ ಪುರಂ(VV Puram)ನ ಸಜ್ಜನ್ ರಾವ್ ಸರ್ಕಲ್ ಬಳಿ ಬೀಡು ಬಿಟ್ಟಿರುವ ಹಿಂಡು ಪಾರಿವಾಳಗಳಿಗೆ ಜನರು ಕಾಳು, ಆಹಾರ ಸುರಿಯುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ. ಹೌದು, ಹೀಗೆ ಸುರಿದ ಆಹಾರದಿಂದ ಜಂಕ್ಷನ್ ಗಬ್ಬೆದ್ದು ನಾರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ- ಪಕ್ಷಿಗಳಿಗೆ ಆಹಾರ ಕೊಡಬಾರದು ಎಂದು ಬಿಬಿಎಂಪಿಯೇ ನಿಯಮ ಮಾಡಿತ್ತು. ಆದ್ರೆ, ಇದೀಗ ಇಲ್ಲಿ ಸಮಸ್ಯೆಯಾಗುತ್ತಿರುವುದರಿಂದ ಪಾಲಿಕೆ ಕಣ್ಮುಚ್ಚಿ ಕುಳಿತಿರುವುದು ನಿವಾಸಿಗಳನ್ನ ಕೆರಳಿಸಿದೆ.
ಅಸ್ತಮಾ, ಉಸಿರಾಟದ ಸಮಸ್ಯೆಯಿಂದ ಸ್ಥಳೀಯರು ಹೈರಾಣು
ಪಾರಿವಾಳಗಳ ರೆಕ್ಕೆ ಪುಕ್ಕಗಳಿಂದ ಅಸ್ತಮಾ, ಉಸಿರಾಟದ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು, ಪಾರಿವಾಳಗಳ ಜೊತೆಗೆ ಬೀಡಾಡಿ ದನಗಳ ಕಾಟ ಇದ್ದರೂ ಪಾಲಿಕೆ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ಪಕ್ಷಿಗಳಿಗೆ ಕಾಳು ಸುರಿಯುತ್ತಿರುವುದರಿಂದ ಇಲಿ, ಹೆಗ್ಗಣಗಳ ಕಾಟದ ಜೊತೆಗೆ ಬೀಡಾಡಿ ದನಗಳು ಕೂಡ ಜನರಿಗೆ ಸಮಸ್ಯೆ ತಂದಿಟ್ಟಿದೆ. ಕಾಳು ಸುರಿಯುವ ಜಾಗದಲ್ಲೇ ವಾಹನಗಳು ಓಡಾಡೋದರಿಂದ ವಾಹನ ಸವಾರರಿಗೂ ಆಗಾಗ ಸಂಕಷ್ಟ ಎದುರಾಗುತ್ತಿದೆ. ಪೊಲೀಸ್ ಚೌಕಿ ಕೂಡ ಬಳಸಲಾಗದ ಸ್ಥಿತಿ ತಲುಪಿದ್ದು, ಇತ್ತ ಪಾರಿವಾಳಗಳು ಅಡ್ಡ ಬರುವುದರಿಂದ ಅಪಘಾತ ಕೂಡ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ:ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವುದು ಬಂದ್: ಯದುವೀರ್ ನೇತೃತ್ವದ ಸಭೆ ಯಶಸ್ವಿ
ಸದ್ಯ ಪಾರಿವಾಳಗಳಿಗೆ ಆಹಾರ ನೀಡಿದರೆ, ದಂಡ ಹಾಕುತ್ತೇವೆ ಅಂತಿದ್ದ ಪಾಲಿಕೆ, ಏರಿಯಾ ಜನ ಹಲವು ಬಾರೀ ದೂರು ಕೊಟ್ಟರೂ ಸೈಲೆಂಟ್ ಆಗಿರುವುದು ನಿವಾಸಿಗಳನ್ನ ಕಂಗಾಲಾಗಿಸಿದೆ. ಸಧ್ಯ ಪಾರಿವಾಳಗಳಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಆದಷ್ಟು ಬೇಗ ಸಮಸ್ಯೆಗೆ ಮುಕ್ತಿ ಸಿಗಲಿ ಎಂದು ನಿವಾಸಿಗಳು ಕಾದುಕುಳಿತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Thu, 10 October 24