ಪೊಲೀಸ್ ಆಯುಕ್ತ ರವಿಕಾಂತೇಗೌಡರ ಮನೆಯಲ್ಲೇ ಕಳ್ಳತನ; ಕೆಲಸದಾಕೆ ಕೃತ್ಯ ಎಸಗಿರುವ ಶಂಕೆ
Bengaluru News: ಸಂಜಯನಗರದ ನಿವಾಸದಲ್ಲಿ ಕಳೆದ ಶನಿವಾರ ಘಟನೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮನೆ ಕೆಲಸದಾಕೆಯ ಮೊಬೈಲ್ ಸೇರಿದಂತೆ ಮನೆಯ ಕೆಲ ವಸ್ತುಗಳು ಕಳವಾಗಿವೆ. ಇದೇ ವೇಳೆ ಮತ್ತೋರ್ವ ಕೆಲಸದಾಕೆ ನಾಪತ್ತೆಯಾಗಿದ್ದಾಳೆ ಎಂದೂ ತಿಳಿದುಬಂದಿದೆ.
ಬೆಂಗಳೂರು: ಸಂಚಾರಿ ಪೊಲೀಸ್ ಆಯುಕ್ತರ ಮನೆಯಲ್ಲಿ ಕಳ್ಳತನ ನಡೆದ ಘಟನೆ ಕಳೆದ ಶನಿವಾರ ನಡೆದಿದೆ. ಸಂಚಾರಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ. ಸಂಜಯನಗರದ ನಿವಾಸದಲ್ಲಿ ಕಳೆದ ಶನಿವಾರ ಘಟನೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮನೆ ಕೆಲಸದಾಕೆಯ ಮೊಬೈಲ್ ಸೇರಿದಂತೆ ಮನೆಯ ಕೆಲ ವಸ್ತುಗಳು ಕಳವಾಗಿವೆ. ಇದೇ ವೇಳೆ ಮತ್ತೋರ್ವ ಕೆಲಸದಾಕೆ ನಾಪತ್ತೆಯಾಗಿದ್ದಾಳೆ ಎಂದೂ ತಿಳಿದುಬಂದಿದೆ.
ಕಾಣೆಯಾದ ಕೆಲಸದಾಕೆಯೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕಾಣೆಯಾಗಿರುವ ಮನೆಕೆಲಸದಾಕೆ ಪತ್ತೆ ಮಾಡುವಂತೆ ದೂರು ನೀಡಲಾಗಿದೆ. ಮನೆಯ ಕಾರು ಚಾಲಕ ಜಗದೀಶ್ ನೀಡಿದ ದೂರಿನನ್ವ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮನೆ ಕೆಲಸದಾಕೆ ಕಾಣೆಯಾಗಿದ್ದಾಗಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೃತ್ಯದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಕೆಲಸದ ನಿಮಿತ್ತ ಸಂಚಾರಿ ಪೊಲೀಸ್ ಆಯುಕ್ತರು ದೆಹಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸೋದರರಾದ ಮನೋಜ್, ಧೀರಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಯುವಕರು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಚಿಕ್ಕಬೆಟ್ಟಹಳ್ಳಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿತ್ತು. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಬೆಟ್ಟಹಳ್ಳಿಯಲ್ಲಿ ಘಟನೆ ನಡೆದಿತ್ತು.
ಪುಂಡರು ಸಬ್‌ಇನ್ಸ್‌ಪೆಕ್ಟರ್ ಸೇರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಗುಂಡಿ ಬಿದ್ದಿದ್ದರಿಂದ ಒಂದು ಕಡೆ ರಸ್ತೆ ಬ್ಲಾಕ್ ಮಾಡಿದ್ದರು. ಹೀಗಾಗಿ ಬೈಕ್ ಸವಾರ ಒನ್ ವೇನಲ್ಲಿ ಬಂದಿದ್ದ. ಈ ವೇಳೆ ನೈಟ್ ರೌಂಡ್ಸ್‌ನಲ್ಲಿದ್ದ ಪೊಲೀಸರು ಪ್ರಶ್ನೆ ಮಾಡಿದ್ದರು. ಈ ವೇಳೆ, ಪೊಲೀಸರು, ವ್ಯಕ್ತಿಯ ನಡುವೆ ಮಾತುಕತೆ ನಡೆದು ಹಲ್ಲೆ ಮಾಡಲಾಗಿತ್ತು. ಪೊಲೀಸರು ಎಂದು ತಿಳಿಸಿದರೂ ಪುಂಡರು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಪಿಎಸ್‌ಐ ಶ್ರೀಶೈಲ ದೂರು ನೀಡಿದ್ದರು. ಪ್ರಕರಣ ಸಂಬಂಧ ಈಗ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಯಲಹಂಕ ನ್ಯೂಟೌನ್ನಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ ರಾತ್ರಿ 11ರ ಸುಮಾರಿಗೆ ಚಿಕ್ಕಬೆಟ್ಟಹಳ್ಳಿಯಲ್ಲಿ ನಡೆದಿದೆ. ಸ್ವಿಗ್ಗಿ ಜನರಲ್ ಮ್ಯಾನೇಜರ್, ಇಂಜಿನಿಯರ್ನಿಂದ ಹಲ್ಲೆ ನಡೆದಿದೆ. ಇಬ್ಬರನ್ನು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಯಲಹಂಕ ನ್ಯೂಟೌನ್ ಠಾಣೆ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬ ಹೇಳಿಕೆ ನೀಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಸೂಚನೆ ಕೊಟ್ಟಿದ್ದಾರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಹಲ್ಲೆಗೊಳಗಾದ ಪೊಲೀಸರಿಗೆ ಚಿಕಿತ್ಸೆ ಕೊಡಿಸುವಂತೆಯೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಗೃಹ ಸಚಿವರು ಆದೇಶ ನೀಡಿದ್ದಾರೆ.
ಇತರೆ ಅಪಘಾತ, ಅಪರಾಧ ಸುದ್ದಿಗಳು ಟವೇರಾ ಕಾರು ಡಿಕ್ಕಿಯಾಗಿ 26 ವರ್ಷದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ತುಮಕೂರು ಹೊರವಲಯದ ಮರಳೂರು ಕೆರೆ ಏರಿ ಮೇಲೆ ನಡೆದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಕಾಡಲ್ಲಿ ಕಡವೆ ಶವ ಪತ್ತೆ ಆಗಿದೆ. ಕೊಳೆತ ಸ್ಥಿತಿಯಲ್ಲಿ ಗಂಡು ಕಡವೆ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಘಟನೆ ನಡೆದಿದೆ. ಹನುಮಂತು (40) ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಲಗೂರಿನ ಡಾಬವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ನಿರ್ವಹಿಸುತ್ತಿದ್ದ ಹನುಮಂತು, ಕನಕಪುರ ತಾಲೂಕಿನ ತೆಂಗನಾಯಕನ ಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಅಪಘಾತ: ಕಾರು, ಎರಡು ಆಟೋ, ಮಿನಿ ಲಾರಿ ನಡುವೆ ಡಿಕ್ಕಿ; ಓರ್ವ ಸಾವು
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿಗೆ ಶಾಲಾ ವಾಹನ ಡಿಕ್ಕಿ; 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
Published On - 9:56 pm, Tue, 7 December 21