ಬೆಂಗಳೂರಿನ ಲಾಡ್ಜ್ನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅನುಮಾನಾಸ್ಪದ ಸಾವು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಹಶೀಲ್ದಾರ್ ಇಂದು ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಮೃತಪಟ್ಟಿದ್ದಾರೆ. ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಇನ್ನು ಸ್ಥಳಕ್ಕೆ ಪೊಲೀಸರು ಹಾಗೂ ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಬೆಂಗಳೂರು/ಶಿವಮೊಗ್ಗ, (ಅಕ್ಟೋಬರ್ 16): ಬೆಂಗಳೂರಿನ ಲಾಡ್ಜ್ವೊಂದರಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಜಕ್ಕಣ್ಣಗೌಡರ ಮೃತ ತಹಶೀಲ್ದಾರ್. ಜಕ್ಕಣ್ಣಗೌಡ ಅವರು ಕೋರ್ಟ್ ಕೆಲಸಕ್ಕೆಂದು ಬೆಂಗಳೂರಿಗೆ ಆಗಮಿಸಿ ಕಪಾಲಿ ಥಿಯೇಟರ್ ಸಮೀಪದ ವೈಭವ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಆದ್ರೆ, ಇಂದು (ಅಕ್ಟೋಬರ್ 16) ರಾತ್ರಿ 9ರ ಸುಮಾರಿಗೆ ಅವರು ರೂಮ್ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಇನ್ನು ತೀರ್ಥಹಳ್ಳಿಯ ಹಶೀಲ್ದಾರ್ ಜಕ್ಕಣ್ಣಗೌಡರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ಲಾಡ್ಜ್ ಆಗಮಿಸಿದ್ದಾರೆ. ಹಾಗೇ ಸ್ಥಳಕ್ಕೆ ಇನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ.
ಗದಗ ಮೂಲದ 56 ವರ್ಷದ ಜಕ್ಕಣ್ಣ ಗೌಡರ್ , ಕೋರ್ಟ್ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದು, ಅ.14ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದರು. ಆದ್ರೆ, ಇಂದು ಬೆಳಗ್ಗೆಯಿಂದ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕೂಡಲೇ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ತೀರ್ಥಹಳ್ಳಿ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರಿಗೆ ಸಂಪರ್ಕ ಮಾಡಿದ್ದಾರೆ. ನಂತರ ರಾತ್ರಿ 8ರ ಸುಮಾರಿಗೆ ಲಾಡ್ಜ್ಗೆ ಉಪ್ಪಾರಪೇಟೆ ಪೊಲೀಸರು ಭೇಟಿ ನೀಡಿ, ರೂಮ್ ಬಾಗಿಲು ಓಪನ್ ಮಾಡಿದ್ದಾರೆ. ಆಗ ಜಕ್ಕಣ್ಣ ಗೌಡರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಆದ್ರ, ಇದುವರೆಗೆ ಸಾವಿನ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಎಲ್ಲಾ ಪರೀಕ್ಷೆ ಮುಗಿದ ಬಳಿಕ ಪೊಲೀಸರು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಇನ್ನು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಆರಗ ಜ್ಞಾನೇಂದ್ರ, ಸರಳ ಸಜ್ಜನಿಕೆಯ ಜೊತೆ ತುಂಬಾ ಸಮಾದಾನದ ವ್ಯಕ್ತಿತ್ವ ಹೊಂದಿದ್ದ ಜಕ್ಕಣ್ಣಗೌಡರ ಅಕಾಲಿಕ ಸಾವು. ದುಖಃವನ್ನು ಬರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 pm, Wed, 16 October 24