ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಟ: ಆರು ಬಿಹಾರಿಗಳ ಪೈಕಿ ಮೂವರು ಸ್ಥಳದಲ್ಲೇ ಸಾವು
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಭೀಕರ ಮಾರಾಮಾರಿಯಲ್ಲಿ ಬಿಹಾರ ಮೂಲದ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗಾಯಗೊಂಡಿದ್ದ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆನೇಕಲ್, ಮಾರ್ಚ್ 15: ಕುಡಿದ ನಶೆಯಲ್ಲಿ ಬಿಹಾರ (Bihar) ಮೂಲದ ಆರು ಜನರು ಪರಸ್ಪರ ಹೊಡೆದಾಡಿಕೊಂಡಿದ್ದು, ಆ ಪೈಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ (death). ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಪೋರ್ ವಾಲ್ ಅವೆನ್ಯೂ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿ ಘಟನೆ ನಡೆದಿದೆ. ಅನ್ಸು(19), ರಾಧೆ ಶ್ಯಾಮ್(20) ಮತ್ತು ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹೋಳಿ ಹಬ್ಬದ ರಜೆ ಹಿನ್ನೆಲೆ ಬಿಹಾರದ ಒಂದೇ ಗ್ರಾಮದ ವಾಸಿಗಳು ಇಂದು ಬೆಳಗ್ಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಕುಡಿದು ಕೈಗೆ ಸಿಕ್ಕ ದೊಣ್ಣೆ ಮತ್ತು ರಾಡ್ನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಲ್ಲೆ ವೇಳೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಐಷರಾಮಿ ಕಾರನ್ನೇ ಸುಟ್ಟು ಹಾಕಿದ ಕಳ್ಳರು: ಗುಂಡಿಕ್ಕಿ ದರೋಡೆಕೋರರನ್ನ ಹಿಡಿದ ಪೊಲೀಸ್ರು
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್ ಸಾಥ್ ನೀಡಿದ್ದಾರೆ. ಘಟನಾ ಸ್ಥಳ ಅಪಾರ್ಟ್ಮೆಂಟ್ ಸುತ್ತಮುತ್ತ ಡಾಗ್ ಸ್ಕ್ವಾಡ್ನಿಂದಪರಿಶೀಲನೆ ಮಾಡಲಾಗಿದೆ.
ಹಳೇ ವೈಷಮ್ಯ: ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
ಹಳೇ ವೈಷಮ್ಯ ಹಿನ್ನೆಲೆ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ ಆಗಿರುವಂತಹ ಘಟನೆ ರಾಯಚೂರಿನ ಬಂಗೀಕುಂಟದಲ್ಲಿ ನಡುರಸ್ತೆಯಲ್ಲೇ ನಡೆದಿದೆ. ಸೈಯದ್ ಖದೀರ್(40) ಮೃತ ವ್ಯಕ್ತಿ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದರ್ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 pm, Sat, 15 March 25







